ಮಂಗಳವಾರ, ನವೆಂಬರ್ 19, 2019
29 °C
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿಕೆ

‘ಶಿಶು ಮರಣ ಪ್ರಮಾಣ ಶೇ 1ರಷ್ಟು ಏರಿಕೆ’

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಶೇ 1ರಷ್ಟು ಏರಿಕೆಯಾಗಿದ್ದು, ಜನಿಸಿದ ಪ್ರತಿ ಒಂದು ಸಾವಿರ ಶಿಶುಗಳಲ್ಲಿ 25 ಶಿಶುಗಳು ಸಾಯುತ್ತಿವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೆದ್ ಅಖ್ತರ್ ಹೇಳಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ದಡಾರ ಮತ್ತು ರುಬೆಲ್ಲಾ’ ನಿರ್ಮೂಲನೆಯ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಹಾಗೂ 2019-20ನೇ ಸಾಲಿನ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಎಸ್‍ಆರ್‌ಎಸ್ (ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್) 2017ರ ವರದಿ ಪ್ರಕಾರ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಏರಿದೆ. ರಾಜ್ಯದಲ್ಲಿ 2015ರಲ್ಲಿ ಶಿಶು ಮರಣ ಪ್ರಮಾಣ ಒಂದು ಸಾವಿರಕ್ಕೆ 28 ಇತ್ತು. ಇಲಾಖೆ ಕೈಗೊಂಡ ನಿರಂತರ ಜಾಗೃತಿ, ಮುಂಜಾಗ್ರತೆ ಕ್ರಮಗಳಿಂದಾಗಿ 2016ರಲ್ಲಿ ಈ ಪ್ರಮಾಣ 24ಕ್ಕೆ ಇಳಿಕೆಯಾಗಿತ್ತು. ಇದೀಗ 25ಕ್ಕೆ ಹೆಚ್ಚಳವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 2023ರ ಒಳಗೆ ದಡಾರ, ರುಬೆಲ್ಲಾ ಕಾಯಿಲೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)