ಅರ್ಧ ಗಂಟೆ ಮಳೆ: ಅರ್ಧ ದಿನ ಸಂಕಷ್ಟ

ಬುಧವಾರ, ಜೂನ್ 26, 2019
24 °C
63 ಮರಗಳು ನೆಲಸಮ l 20 ವಾಹನಗಳು ಜಖಂ l ಉರುಳಿದ ವಿದ್ಯುತ್‌ ಕಂಬಗಳು l ಮನೆಯೊಳಗೆ ಬಂಧಿಯಾದ ಕುಟುಂಬ

ಅರ್ಧ ಗಂಟೆ ಮಳೆ: ಅರ್ಧ ದಿನ ಸಂಕಷ್ಟ

Published:
Updated:
Prajavani

ಬೆಂಗಳೂರು: ನಗರದ ಬಹುತೇಕ ಕಡೆ ರಸ್ತೆ ಮೇಲೆಯೇ ಬಿದ್ದಿದ್ದ ಮರಗಳು ಹಾಗೂ ಕೊಂಬೆಗಳು. ತೆರವು ಕಾರ್ಯಾಚರಣೆಯಲ್ಲಿ ನಿರತರಾದ ಬಿಬಿಎಂಪಿ ಸಿಬ್ಬಂದಿ. ಫುಟ್‌ಪಾತ್‌ನಲ್ಲಿ ನಡೆಯಲು ಕಷ್ಟಪಡುತ್ತಿದ್ದ ಪಾದಚಾರಿಗಳು. ರಸ್ತೆಯ ಇಕ್ಕೆಲುಗಳಲ್ಲಿ ನಿಧಾನವಾಗಿ ಚಲಿಸಿದ ವಾಹನಗಳು, ಹಲವೆಡೆ ಸಂಚಾರ ದಟ್ಟಣೆ.

ನಗರದಲ್ಲಿ ಗುರುವಾರ ರಾತ್ರಿ ಗುಡುಗು–ಸಿಡಿಲು ಹಾಗೂ ಗಾಳಿ ಸಹಿತ ಮಳೆ ಸುರಿದಿದ್ದರಿಂದ, ಶುಕ್ರವಾರ ಬೆಳಿಗ್ಗೆ ಕಾಣಿಸಿದ ದೃಶ್ಯಗಳಿವು.

ಗುರುವಾರ ಅಬ್ಬರಿಸಿ ಸುರಿದಿದ್ದ ಮಳೆಗೆ ನಗರದೆಲ್ಲೆಡೆ 63 ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಕೆಲವೆಡೆ ಮರಗಳ ಕೊಂಬೆಗಳು ವಾಹನಗಳ ಮೇಲೆ ಬಿದ್ದಿದ್ದು, ಕಾರು ಹಾಗೂ ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಬಸವನಗುಡಿ, ಗಿರಿನಗರ, ಬನಶಂಕರಿ, ಹನುಮಂತನಗರ, ಶಾಂತಿನಗರ, ಅಶೋಕ ನಗರ, ರಾಜರಾಜೇಶ್ವರಿ ನಗರ, ವಿವೇಕನಗರ, ಶಾಂತಿನಗರ, ಸಂಪಂಗಿರಾಮನಗರ, ಗವಿಪುರ, ಮೈಸೂರು ರಸ್ತೆ, ಜಯನಗರ, ಬಸವೇಶ್ವರನಗರ, ರಾಜಾಜಿನಗರ, ಹೊಯ್ಸಳ ನಗರ, ನಾಯಂಡನಹಳ್ಳಿ, ಚಾಮರಾಜಪೇಟೆ, ಅಟ್ಟೂರು, ಯಲಹಂಕ, ವಿದ್ಯಾರಣ್ಯಪುರ, ಶೆಟ್ಟಿಹಳ್ಳಿ, ಬಾಗಲಕುಂಟೆ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಇದೇ ಭಾಗದಲ್ಲಿ  ಹೆಚ್ಚು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ.

ಬಳ್ಳಾರಿ ರಸ್ತೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಗಳ ಅಕ್ಕ– ಪಕ್ಕದ ಪ್ರದೇಶಗಳಲ್ಲೂ ಗುರುವಾರ ರಾತ್ರಿ ಮಳೆ ಜೋರಾಗಿತ್ತು. ಅಲ್ಲೆಲ್ಲ ರಸ್ತೆಯಲ್ಲೇ ನೀರು ಹರಿಯಿತು. ನೀರಿನಲ್ಲೇ ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋದರು. ಕೆಲವರ ದ್ವಿಚಕ್ರ ವಾಹನಗಳು, ನೀರಿನಲ್ಲೇ ಕೆಟ್ಟು ನಿಲ್ಲುವಂತಾಯಿತು. ಅವರೆಲ್ಲ ತಳ್ಳಿಕೊಂಡು ಮುಂದಕ್ಕೆ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

ಗಾಳಿಯು ಜೋರಾಗಿ ಬೀಸಿದ್ದರಿಂದ ರಾಜರಾಜೇಶ್ವರಿನಗರದಲ್ಲಿ 28 ಮರಗಳು ನೆಲಕ್ಕುರುಳಿದ್ದವು. ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 16, ಪಶ್ಚಿಮ ವಲಯ ವ್ಯಾಪ್ತಿಯಲ್ಲಿ 5, ಪೂರ್ವದಲ್ಲಿ 8, ಯಲಹಂಕದಲ್ಲಿ 4 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮರಗಳು ಉರುಳಿಬಿದ್ದಿದ್ದವು. ಶುಕ್ರವಾರ ಮಧ್ಯಾಹ್ನದವರೆಗೂ ಅಲ್ಲೆಲ್ಲ ಮರ ಹಾಗೂ ಕೊಂಬೆಗಳ ತೆರವು ಕಾರ್ಯಾಚರಣೆ ನಡೆಯಿತು.‌

ಹನುಮಂತನಗರದಲ್ಲಿ ವಿದ್ಯುತ್ ಕಂಬಗಳ ಮೇಲೆಯೇ ಬೃಹತ್ ಮರವೊಂದು ಉರುಳಿಬಿದ್ದಿತ್ತು. ರಸ್ತೆ ಪಕ್ಕದಲ್ಲಿದ್ದ 3 ಬೈಕ್ ಮೇಲೆಯೇ ಕೊಂಬೆಗಳು ಬಿದ್ದಿದ್ದರಿಂದ ಜಖಂಗೊಂಡಿವೆ.  

ಮರ ಬಿದ್ದ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸಂಚಾರ ಪೊಲೀಸರು, ಸ್ಥಳೀಯರು ಹಾಗೂ ಬಿಬಿಎಂಪಿ ಸಿಬ್ಬಂದಿ ಒಟ್ಟಿಗೆ ಕೆಲವೆಡೆ ಕಾರ್ಯಾಚರಣೆ ನಡೆಸಿದರು. ನಂತರವೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.

‘ಬೆಂಗಳೂರಿನಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಮರಗಳು ಹಾಗೂ ಕೊಂಬೆಗಳು ಬಿದ್ದಿದ್ದು ಬಿಟ್ಟರೆ ಬೇರೆ ಯಾವುದೇ ಹಾನಿ ಆಗಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ಮನೆಗಳು ಹಾಗೂ ಕಟ್ಟಡದೊಳಗೆ ನೀರು ನುಗ್ಗಿದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಮರ ಹಾಗೂ ಕೊಂಬೆ ಬಿದ್ದ ಬಗ್ಗೆ ಮಾತ್ರ ದೂರುಗಳು ಬಂದಿವೆ. ಗುರುವಾರ ತಡರಾತ್ರಿಯಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಬಿಬಿಎಂಪಿಯ ಸಿಬ್ಬಂದಿ, ಶುಕ್ರವಾರ ಬಹುತೇಕ ಮರ ಹಾಗೂ ಕೊಂಬೆಗಳನ್ನು ತೆರವು ಮಾಡಿದ್ದಾರೆ’ ಎಂದರು.

ಮನೆಯೊಳಗೆ ಬಂಧಿಯಾದ ಕುಟುಂಬ: ಗಿರಿನಗರದ ಜ್ಞಾನದೀಪ್ತಿ ಶಾಲೆ ಪಕ್ಕದಲ್ಲಿರುವ ಮನೆ ಮೇಲೆಯೇ ಮರವೊಂದು ಉರುಳಿಬಿದ್ದಿತ್ತು. ಮನೆಯ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳಿಗೆ ಅಡ್ಡವಾಗಿ ಮರದ ಕೊಂಬೆಗಳು ಬಿದ್ದಿದ್ದರಿಂದ, ಕುಟುಂಬದ ಸದಸ್ಯರೆಲ್ಲರೂ ಸಿಲುಕಿಕೊಂಡಿದ್ದರು.

‘ದೀಪ್ತಿ ಹಾಗೂ ಅವರ ಕುಟುಂಬಸ್ಥರು ಮನೆಯಲ್ಲಿ ನೆಲೆಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಮಳೆ ಸುರಿಯುತ್ತಿದ್ದ ವೇಳೆ ಜೋರಾದ ಗಾಳಿ ಬೀಸಿದ್ದರಿಂದ ರಸ್ತೆ ಪಕ್ಕದಲ್ಲಿದ್ದ ಮರ ಮನೆ ಮೇಲೆಯೇ ಉರುಳಿಬಿದ್ದಿತ್ತು. ಅದರಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿತ್ತು. ಮನೆಯ ಬಾಗಿಲುಗಳನ್ನು ತೆರೆದು ಹೊರಗೆ ಬಂದು ನೋಡಲು ಸಹ ಆಗುತ್ತಿರಲಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

‘ಬೆಳಿಗ್ಗೆ ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ, ಮಧ್ಯಾಹ್ನದವರೆಗೂ ಮರದ ತೆರವು ಕಾರ್ಯಾಚರಣೆ ನಡೆಸಿದರು. ಬಳಿಕವೇ ಬಾಗಿಲುಗಳು ತೆರೆಯಲು ಸಾಧ್ಯವಾಯಿತು. ನಂತರವೇ ಕುಟುಂಬಸ್ಥರೆಲ್ಲರೂ ಹೊರಗಡೆ ಬಂದು ನಿಟ್ಟುಸಿರು ಬಿಟ್ಟರು’ ಎಂದು ವಿವರಿಸಿದರು.

ಸಾಲುಗಟ್ಟಿ ನಿಂತ ವಾಹನಗಳು

ಗುರುವಾರ ರಾತ್ರಿ ನಗರದ ಬಹುತೇಕ ಕಡೆಗಳಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿತ್ತು. ದ್ವಿಚಕ್ರ ವಾಹನ, ಕಾರು, ಬಸ್‌ ಹಾಗೂ ಇತರೆ ವಾಹನಗಳೆಲ್ಲವೂ ಮುಂದಕ್ಕೆ ಚಲಿಸಲಾಗದೇ ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಮಳೆಯ ವೇಳೆ ಗಾಳಿ ಹಾಗೂ ಗುಡುಗು– ಸಿಡಿಲಿನ ಸದ್ದು ಹೆಚ್ಚಿತ್ತು. ಬೇಗನೇ ಮನೆ ಸೇರುವ ಅವಸರದಲ್ಲಿ ಕೆಲ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದರು. ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ದಟ್ಟಣೆ ಉಂಟಾಯಿತು. ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಮೆಜೆಸ್ಟಿಕ್, ನೃಪತುಂಗ ರಸ್ತೆ, ಕೋರಮಂಗಲ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ರಾತ್ರಿ 10ರಿಂದ ತಡರಾತ್ರಿಯವರೆಗೂ ವಾಹನಗಳ ದಟ್ಟಣೆ ಇದ್ದಿದ್ದು ಕಂಡುಬಂತು.

ಬಿಬಿಎಂಪಿ ವಾಹನಗಳಿಗೂ ಜಖಂ
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರಾಜರಾಜೇಶ್ವರಿ ನಗರ ಹಾಗೂ ಸುತ್ತಮುತ್ತ ಮರಗಳು ಉರುಳಿಬಿದ್ದಿದ್ದು, ಕೊಂಬೆಯಡಿ ಸಿಲುಕಿ ಬಿಬಿಎಂಪಿಯ 3 ವಾಹನಗಳು ಸೇರಿದಂತೆ 18 ವಾಹನಗಳು ಜಖಂಗೊಂಡಿವೆ. 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ.

ಹಲವು ಕಡೆ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಐಡಿಯಲ್ ಹೋಮ್ಸ್, ಸಿ.ಮುನಿವೆಂಕಟಯ್ಯ ಬಯಲು ರಂಗಮಂದಿರ, ಸುಭಾಷ್ ಭವನ ರಸ್ತೆ, ಬಿ.ಎಚ್.ಇ.ಎಲ್ ಬಡಾವಣೆ, ಪಟ್ಟಣಗೆರೆ, ಜೆ.ಎಸ್.ಎಸ್. ಕಾಲೇಜು ರಸ್ತೆ, ಕೆಂಗೇರಿ- ಉತ್ತರಹಳ್ಳಿ ರಸ್ತೆ, ಬೆಮೆಲ್ ಬಡಾವಣೆ, ಬಸವೇಶ್ವರ ವೃತ್ತ, ಹಲಗೆವಡೇರಹಳ್ಳಿ ಹಾಗೂ ಸುತ್ತಮುತ್ತ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !