ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ: ಕೆರೆಗಳಿಗೆ ನೀರು

Last Updated 3 ಜೂನ್ 2019, 20:11 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಭಾನುವಾರ ರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ಕೆರೆ-ಕುಂಟೆಗಳಿಗೆ ನೀರು ಬಂದಿದೆ. ಕಾಲುವೆಗಳಲ್ಲಿ ನೀರು ಹರಿದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾತ್ರಿ 12 ಗಂಟೆಯ ಸುಮಾರಿಗೆ ಆರಂಭವಾದ ಮಳೆ ರಾತ್ರಿ 2 ಗಂಟೆಯವರೆಗೆ ರಭಸದಿಂದ ಸುರಿಯಿತು. ಇದರಿಂದ ಗೋಕಟ್ಟೆ, ಕುಂಟೆ, ಹೊಂಡಗಳು ತುಂಬಿವೆ. ಸಣ್ಣ ಕೆರೆಗಳು ತುಂಬುವ ಹಂತಕ್ಕೆ ಬಂದಿವೆ.

ಬೆಟ್ಟದ ತಪ್ಪಲು ಹಾಗೂ ತಗ್ಗು ಪ್ರದೇಶಗಳಲ್ಲಿ ಕೃಷಿ ಇಲಾಖೆ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು ಕುಮದ್ವತಿ ನದಿ ಪುನಶ್ಚೇತನದಡಿ ಆಯ್ದ ಜಲಾಯನ ಪ್ರದೇಶಗಳಲ್ಲಿ ನಿರ್ಮಿಸಿರುವ ಹೊಂಡಗಳು ಸಹ ಭಾರಿ ಮಳೆಗೆ ತುಂಬಿ ನಳನಳಿಸುತ್ತಿವೆ.

'ಕೆರೆ-ಕುಂಟೆಗಳು ಬತ್ತಿದ್ದರಿಂದ ಕೃಷಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಈಗ ಉತ್ತಮ ಮಳೆ ಬಂದು, ಕೆರೆಗಳಿಗೆ ನೀರು ಬಂದಿರುವುದು ಸಮಸ್ಯೆ ನಿವಾರಣೆಯಾದಂತಾಗಿದೆ. ಅಂತರ್ಜಲ ಮಟ್ಟ ವೃದ್ಧಿಸಿ ಕೊಳವೆ ಬಾವಿಗಳು
ಮರುಜೀವ ಪಡೆದುಕೊಳ್ಳಲಿವೆ’ ಎಂದು ಚನ್ನೋಹಳ್ಳಿ ಗ್ರಾಮದ ನಾಗೇಶ್ ಹೇಳಿದರು.

'ಉತ್ತಮ ಮಳೆ ಇಲ್ಲದೇ ರೈತರು ಆಕಾಶ ನೋಡುತ್ತಿದ್ದ ಸಂದರ್ಭದಲ್ಲಿ ಸುರಿದಿರುವ ಮಳೆಯು ರೈತರಲ್ಲಿ ಹೊಸ ಚೇತನ ಮೂಡಿಸಿದೆ. ಮೇವಿನ ಜೋಳ, ತೊಗರಿ ಬಿತ್ತನೆ ಆಗಿದ್ದು ಮಳೆಯಿಂದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕೃಷಿ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳಲಿವೆ' ಎಂದು ಕೃಷಿ ಅಧಿಕಾರಿ ಆನಂದ್ ತಿಳಿಸಿದರು.

ಕಾಣೆಯಾಗಿದ್ದ ಕೆರೆಯಲ್ಲಿ ನೀರು ಬಂತು

ಹೆಸರಘಟ್ಟ: ಶ್ರಮಕ್ಕೆ ಪ್ರಕೃತಿ ನೀಡಿದ ಫಲ ಕಂಡು ಗ್ರಾಮಸ್ಥರು ಹಿರಿ ಹಿರಿ ಹಿಗ್ಗಿದರು. ಒಗ್ಗಟಿನ ಶಕ್ತಿಯಲ್ಲಿ ಅನಾವರಣವಾದ ಕೆಲಸದ ಸಾರ್ಥಕ ಭಾವನೆ ಅವರಲ್ಲಿ ಮಿನುಗಿತ್ತು.

ಚಲ್ಲಹಳ್ಳಿ ಗ್ರಾಮಸ್ಥರು ಮೂವತ್ತು ವರ್ಷಗಳ ಬಳಿಕ ಕೆರೆಗೆ ಮರು ಜೀವ ನೀಡಿದರು. ಭಾನುವಾರ ಧೋ ಎಂದು ಸುರಿದ ಮಳೆಯಿಂದ ಜಲಮೂಲದಲ್ಲಿ ನೀರು ನಿಂತಾಗ ಅವರೆಲ್ಲ ಸಂಭ್ರಮ ಪಟ್ಟರು.

ತಾಲ್ಲೂಕು ಕಚೇರಿಗೆ ಅಲೆದು 30 ವರ್ಷಗಳಿಂದ ಕಾಣೆಯಾಗಿದ್ದ ಕೆರೆಯ ದಾಖಲೆಗಳನ್ನು ಸಂಗ್ರಹಿಸಿದ್ದರು. ಮಾತ್ರವಲ್ಲ ಪ್ರತಿ ಮನೆಯಿಂದ ಒಬ್ಬರು ಶ್ರಮದಾನ ಮಾಡಿ ಜಲಮೂಲದಲ್ಲಿ ಬೆಳೆದಿದ್ದ ಕುರುಚಲು ಗಿಡಗಳನ್ನು ತೆಗೆಸಿದ್ದರು. ದಾನಿಗಳೊಬ್ಬರ ಸಹಾಯದಿಂದ ಜೆಸಿಬಿ ಯಂತ್ರವನ್ನು ತಂದು ಮಣ್ಣನ್ನು ಸಮತಟ್ಟು ಮಾಡಿ ನೀರು ನಿಲ್ಲುವಂತೆ ಮಾಡಿದ್ದರು. ಚಿಕ್ಕದಾಗಿ ಒಡ್ಡನ್ನು ನಿರ್ಮಿಸಿದರು.

ಭಾನುವಾರ ಎರಡು ಘಂಟೆಗಳು ಸುರಿದ ಮಳೆಯಿಂದ ಕೆರೆಯಲ್ಲಿ ಅರ್ಧ ಅಡಿಯಷ್ಟು ನೀರು ಸಂಗ್ರಹವಾಗಿದೆ. ಸುಮಾರು ಒಂದು ಎಕರೆಯಷ್ಟು ದೂರ ನೀರು ಹರಡಿ ನಿಂತಿದ್ದು ರೈತರ ಪಾಲಿಗೆ ಇದು ವರದಾನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT