ಗೋಪಾಲಪುರ ಗ್ರಾಮ: ನೀಲಗಿರಿ ತೋಪಿಗೆ ಬೆಂಕಿ 80 ಮರಗಳು ಭಸ್ಮ

ಮಂಗಳವಾರ, ಏಪ್ರಿಲ್ 23, 2019
29 °C

ಗೋಪಾಲಪುರ ಗ್ರಾಮ: ನೀಲಗಿರಿ ತೋಪಿಗೆ ಬೆಂಕಿ 80 ಮರಗಳು ಭಸ್ಮ

Published:
Updated:
Prajavani

ಹೆಸರಘಟ್ಟ: ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ನೀಲಗಿರಿ ತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು ಎರಡು ಎಕರೆಯಷ್ಟು ಪ್ರದೇಶದಲ್ಲಿನ ಸಸಿಗಳು, ಮರಗಳು ಸುಟ್ಟು ಹೋಗಿವೆ.

ಮಧ್ಯಾಹ್ನ 12 ಘಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಹೊಗೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಗಾಬರಿಗೊಂಡರು. ಬಿಂದಿಗೆ, ಬಕೇಟ್‌ಗಳಿಂದ ನೀರು ಚೆಲ್ಲಿ, ಸೊಪ್ಪುಗಳಿಂದ ಬಡಿದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಬೆಂಕಿಯು ಹೆಚ್ಚು ಇದ್ದ ಕಡೆ ಮಣ್ಣು ತೂರಿ ಬೆಂಕಿಯನ್ನು ನಂದಿಸಿದರು. 

‘ಸೋಲದೇವನಹಳ್ಳಿ ಗ್ರಾಮದಲ್ಲಿರುವ ಕಾಲೇಜಿಗೆ ವ್ಯಾಸಂಗ ಮಾಡಲು ಬಂದಿರುವ ವಿದೇಶಿ ವಿದ್ಯಾರ್ಥಿಗಳು ಗಾಂಜಾ ಸೇದಲು ನೀಲಗಿರಿ ತೋಪಿಗೆ ಬರುತ್ತಾರೆ. ಕುಡಿದು ಕುಪ್ಪಳಿಸಿಯೂ ಹೋಗುತ್ತಾರೆ. ಬಹುಶಃ ವಿದ್ಯಾರ್ಥಿಗಳೇ ಇಲ್ಲಿ ಬೆಂಕಿ ಹಾಕಿರುವ ಸಾಧ್ಯತೆ ಇದೆ’ ಎಂದು ಗ್ರಾಮಸ್ಥರಾದ ಸಂತೋಷ್ ಹೇಳಿದರು.

‘160 ನೀಲಗಿರಿ ಮರಗಳು ಇದ್ದವು. ಬೆಂಕಿಗೆ ಸುಮಾರು 80 ಸಣ್ಣ ಮರಗಳು ಸಂಪೂರ್ಣ ಸುಟ್ಟು ಹೋಗಿವೆ. ಮರಗಳ ಸುಳಿಯ ತನಕ ಬೆಂಕಿ ಅವರಿಸಿದೆ. ಸುಳಿಗೆ ಬೆಂಕಿ ತಾಗಿದರೆ ಮರ ಬೆಳೆಯುವುದಿಲ್ಲ’ ಎಂದು ಕೃಷಿಕ ಮಂಜುನಾಥ್ ತಿಳಿಸಿದರು.

‘ಸೋಲದೇವನಹಳ್ಳಿ ಪೊಲೀಸರು ಪ್ರತಿದಿನ ಈ ಕಡೆ ಒಂದು ಸುತ್ತು ಹಾಕುತ್ತಿದ್ದರು. ಈ ನಡುವೆ ಹೊಯ್ಸಳ ವಾಹನ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಭಯವಿಲ್ಲದಂತೆ ಆಗಿದೆ’ ಎಂದು ಗ್ರಾಮಸ್ಥರು ದೂರಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !