ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಕೋರ್ಟ್‌ ಆದೇಶ ವಜಾ

ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಅದಿರು ಸಾಗಣೆ ಆರೋಪ ಪ್ರಕರಣ
Last Updated 18 ಅಕ್ಟೋಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬೇಲೇಕೇರಿ ಬಂದರಿಗೆ ಅಕ್ರಮ ಅದಿರು ಸಾಗಣೆ ಮಾಡಿದ ಆರೋಪದಲ್ಲಿ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದ್ದ ಜನಪ್ರತಿನಿಧಿಗಳ ಕೋರ್ಟ್‌ನ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಕುರಿತಂತೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.

‘ಒಂದು ಬಾರಿ ದೋಷಾರೋಪ ಹೊರಿಸಿ ಸಾಕ್ಷಿ ವಿಚಾರಣೆ ನಡೆಸಿದ ಮೇಲೆ ವಿಚಾರಣಾ ನ್ಯಾಯಾಲಯವು ಅಂತಹ ಪ್ರಕರಣದಲ್ಲಿ ತನ್ನ ಹಿಂದಿನ ಆದೇಶ ಬದಲಾಯಿಸಲು ಅಥವಾ ರದ್ದು ಮಾಡಲು ಬರುವುದಿಲ್ಲ. ಈ ಪ್ರಕರಣದಲ್ಲಿ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ.ಪಾಟೀಲ ಅವರು ರೆಡ್ಡಿ ಅವರನ್ನು ಪ್ರಕರಣದಿಂದ ಕೈಬಿಟ್ಟಿರುವುದು ಕಾನೂನು ಬಾಹಿರವಾಗಿದೆ’ ಎಂದು ತೀರ್ಪಿನಲ್ಲಿ ವಿವರಿಸಿದೆ.

‘ಬೆಲೆಬಾಳುವ ಪ್ರಾಕೃತಿಕ ಸಂಪತ್ತನ್ನು ನೆಲದಿಂದ ಅಗೆದು, ತೆಗೆದು ಅಕ್ರಮವಾಗಿ ಸಾಗಣೆ ಮಾಡಿರುವ ಆರೋಪದಲ್ಲಿ ಅಂದಿನ ಸಚಿವರಾಗಿದ್ದ ಜನಾರ್ದನ ರೆಡ್ಡಿ ಮತ್ತು ಅಧಿಕಾರಿ ವರ್ಗದವರೆಲ್ಲಾ ಇದ್ದಾರೆ. ಇವರೆಲ್ಲಾ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿನ ಗುರುತರ ಆರೋಪ ಎದುರಿಸುದ್ದಾರೆ. ಹೀಗಿರುವಾಗ ಪ್ರಕರಣದ ವಿಚಾರಣೆಯು, ಹಲವು ಪ್ರಮುಖ ಘಟ್ಟಗಳನ್ನು ತಲುಪಿದ ನಂತರ ಜನಾರ್ದನ ರೆಡ್ಡಿ, ತನ್ನನ್ನು ಆರೋಪದಿಂದ ಕೈಬಿಡುವಂತೆ ಕೋರಿದ ಅರ್ಜಿಯನ್ನು ಮಾನ್ಯ ಮಾಡಿರುವ ಅಧೀನ ನ್ಯಾಯಾಲಯದ ಆದೇಶ ಅಸಮಂಜಸವಾಗಿದೆ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: ಬಳ್ಳಾರಿ ಜಿಲ್ಲೆಯ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸಿ ಅದಿರನ್ನು ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಸಾಗಿಸಿರುವುದು, ಅರಣ್ಯ ಗಡಿ ನಾಶ, ಕ್ರಿಮಿನಲ್ ಸ್ವರೂಪದಲ್ಲಿ ಅರಣ್ಯ ಅತಿಕ್ರಮಣ ಮತ್ತು ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಅವುಗಳು ನಿಜವಾದ ದಾಖಲೆ ಎಂದು ನಂಬಿಸಿ ಮೋಸ ಮಾಡಿರುವ ಆಪಾದನೆಗಳನ್ನು ಆರೋಪಿಗಳು ಈ ಪ್ರಕರಣದಲ್ಲಿ ಎದುರಿಸುತ್ತಿದ್ದಾರೆ.

ಜನಾರ್ದನ ರೆಡ್ಡಿ ಮೊದಲ ಆರೋಪಿಯಾಗಿದ್ದರೆ, ಬಳ್ಳಾರಿ ಜಿಲ್ಲೆಯ ಅಂದಿನ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಏಳು ಜನ ಪ್ರಕರಣದಲ್ಲಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, 2012ರ ಸೆಪ್ಟೆಂಬರ್ 13ರಂದು ನಗರದಲ್ಲಿನ ವಿಶೇಷ ನ್ಯಾಯಾಲಯಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಾಕ್ಷಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ತದನಂತರ ರೆಡ್ಡಿ ಅವರ ಕೋರಿಕೆಯನ್ನು ಮಾನ್ಯ ಮಾಡಿ ವಿಚಾರಣೆಯಿಂದ ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT