ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಔಷಧ ದರ ಇಳಿಕೆ: ತಡೆ ನೀಡಲು ಕೋರ್ಟ್ ನಕಾರ

Last Updated 15 ಏಪ್ರಿಲ್ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಕೆಲವು ಔಷಧಗಳ ದರ ಇಳಿಕೆ ಮಾಡಿ ಹೊರಡಿಸಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು’ ಎಂಬ ಅರ್ಜಿದಾರರ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಈ ಕುರಿತಂತೆ ‘ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ ಪ್ರೈಸಸ್ ಲಿಮಿಟೆಡ್ ಕಂಪನಿ’ ಪ್ರತಿನಿಧಿ ಐ.ರಾಜಶ್ರೀ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಔಷಧಗಳ ದರ ಇಳಿಕೆ ಮಾಡಿ ಕೇಂದ್ರ ಸರ್ಕಾರ 2019ರ ಫೆಬ್ರುವರಿ 27ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಕೇಂದ್ರ ಸರ್ಕಾರದ ಪರ ವಕೀಲರಾದ ಬಿ.ಅಯ್ಯಪ್ಪ ಮತ್ತು ಎಂ.ಸಿ.ನಾಗಶ್ರೀ ಅವರು, ‘ಕ್ಯಾನ್ಸರ್‌ ಔಷಧಗಳನ್ನು ಅತ್ಯಂತ ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ರೋಗಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವಾಗಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಈ ರೀತಿಯ ಆದೇಶ ಹೊರಡಿಸಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರದ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಅನ್ನಿಸುತ್ತದೆ. ಆದ್ದರಿಂದ, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ’ ಎಂದು ಅರ್ಜಿದಾರರ ಕೋರಿಕೆಯನ್ನು ಮಾನ್ಯ ಮಾಡಲು ನಿರಾಕರಿಸಿ, ವಿಚಾರಣೆ ಮುಂದೂಡಿತು.

ಮನವಿ ಏನಿದೆ?: ‘ಸರ್ಕಾರದ ಆದೇಶದಲ್ಲಿ ದರ ಇಳಿಕೆಗೆ ಸ್ಪಷ್ಟ ಕಾರಣ ನೀಡಿಲ್ಲ. ಔಷಧ ಬೆಲೆ ನಿಯಂತ್ರಣ ಆದೇಶ 2013ರ ಅನ್ವಯ ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಬೆಲೆ ನಿಗದಿ ಪ್ರಾಧಿಕಾರಕ್ಕೆ ಔಷಧಗಳ ಬೆಲೆ ನಿಗದಿ ಮಾಡುವ ಅಧಿಕಾರವಿಲ್ಲ. ಆದ್ದರಿಂದ ಈ ಆದೇಶ ರದ್ದುಗೊಳಿಸಬೇಕು’ ಎಂಬುದು ಅರ್ಜಿದಾರರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT