ಜಾಹೀರಾತು ನೀತಿ: ಬೈಲಾ ಅಂತಿಮಗೊಳಿಸಲು ತಾಕೀತು

7

ಜಾಹೀರಾತು ನೀತಿ: ಬೈಲಾ ಅಂತಿಮಗೊಳಿಸಲು ತಾಕೀತು

Published:
Updated:
Prajavani

ಬೆಂಗಳೂರು: ‘ಜಾಹೀರಾತು ನೀತಿಗೆ ಸಂಬಂಧಿಸಿದ ಉಪ ನಿಯಮಗಳ (ಬೈಲಾ) ಕರಡು ನೀತಿಗೆ ಆದಷ್ಟು ಶೀಘ್ರ ಒಪ್ಪಿಗೆ ನೀಡುವ ಬಗ್ಗೆ ಕ್ರಮಕೈಗೊಳ್ಳಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಖಡಕ್‌ ತಾಕೀತು ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್‌, ಹೋರ್ಡಿಂಗ್ಸ್‌ ತೆರವು ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಬೈಲಾಗೆ ಈಗಾಗಲೇ ಸಾರ್ವಜನಿಕರಿಂದ ಲಿಖಿತ ಮತ್ತು ಮೌಖಿಕ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಲಿಸಲಾಗಿದೆ ಮತ್ತು ಅದನ್ನು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಹೇಳಿದರು.

ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲ ಡಿ.ನಾಗರಾಜ ಅವರನ್ನು ನ್ಯಾಯಪೀಠ ಇನ್ನೂ ಯಾಕೆ ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಪ್ರಶ್ನಿಸಿತು.

ಇದಕ್ಕೆ ನಾಗರಾಜ ಅವರು, ‘ಕರಡು ಅಂತಿಮಗೊಳಿಸಲು ಇನ್ನೂ ನಾಲ್ಕು ವಾರಗಳ ಸಮಯ ಬೇಕು’ ಎಂದು ಕೋರಿದರು. ಇದಕ್ಕೆ ಗರಂ ಆದ ನ್ಯಾಯಪೀಠ, ‘ಅದೆಲ್ಲಾ ಆಗೋದಿಲ್ಲ. ಆದಷ್ಟು ಶೀಘ್ರ ಅಂತಿಮಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಿ. ಇಲ್ಲದೇ ಹೋದರೆ ಮುಖ್ಯ ಕಾರ್ಯದರ್ಶಿಯನ್ನೇ ಕರೆಯಿಸಿ ಎಂದು ಕೇಳಬೇಕಾದೀತು’ ಎಂದು ಎಚ್ಚರಿಸಿತು.

ಫ್ಲೆಕ್ಸ್‌ಗಳು ಇನ್ನೂ ಇವೆ: ನಗರದ ಹಲವೆಡೆ ಲೈಟ್‌ ಕಂಬ ಮತ್ತು ಮರಗಳ ಮೇಲೆ ಇನ್ನೂ ಫ್ಲೆಕ್ಸ್‌ಗಳನ್ನು ತೂಗು ಹಾಕಲಾಗುತ್ತಿದೆ’ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌ ನ್ಯಾಯಪೀಠಕ್ಕೆ ದೂರಿದರು.

ಇದರಿಂದ ಕುಪಿತರಾದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ‘ಗಸ್ತು ಪೊಲೀಸರು ಏನು ಮಾಡುತ್ತಿದ್ದಾರೆ, ನಿವ್ಯಾರೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿಲ್ಲವೇ’ ಎಂದು ನಾಗರಾಜ ಅವರನ್ನು ಖಾರವಾಗಿ ಪ್ರಶ್ನಿಸಿದರು.

‘ಎಲ್ಲವನ್ನೂ ನಿಮಗೆ ಕೋರ್ಟೇ ಹೇಳಬೇಕೇ, ಬೆಂಗಳೂರು ನಗರ ಒಂದು ಮೆಟ್ರೊಪಾಲಿಟನ್‌ ನಗರ ಎಂಬುದು ನೆನಪಿರಲಿ. ಎಲ್ಲಿಯೂ ಫ್ಲೆಕ್ಸ್‌ಗಳು ನೇತಾಡಬಾರದು. ನಗರ ಇಂತಹ ಉಪಟಳದಿಂದ ಮುಕ್ತವಾಗಲೇಬೇಕು ಎಂದು ಎಷ್ಟು ಬಾರಿ ಹೇಳಬೇಕು. ಈ ವಿಷಯದಲ್ಲಿ ಯಾವುದೇ ಚೌಕಾಶಿಯ ಪ್ರಶ್ನೆಯೇ ಇಲ್ಲ’ ಎಂದು ಗುಡುಗಿದರು.

ಜಾಹೀರಾತು ಕಂಪನಿಗಳ ಪರ ವಕೀಲ, ಶಂಕರನಾರಾಯಣ ರಾವ್‌ ಅವರು, ಬಸ್‌ ಶೆಲ್ಟರ್‌ಗಳ ಮೇಲಿನ ಜಾಹೀರಾತುಗಳನ್ನು ಇನ್ನೂ ತೆರವುಗೊಳಿಸಲ್ಲ ಎಂದು ಆಕ್ಷೇಪಿಸಿದರು.

ಅಂತೆಯೇ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಕೋರ್ಟ್‌ನಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಂದು ಮಾಡಿಕೊಂಡು ಬಿಬಿಎಂಪಿ ಜಾಹೀರಾತು ಕಂಪನಿಗಳ ಉದ್ಯಮಕ್ಕೆ ತೊಂದರೆ ಒಡ್ಡಿದೆ’ ಎಂದು ಆಕ್ಷೇಪಿಸಿದರು.

ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !