ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಟಿ: ಕಳ್ಳರಿಗೆ, ಭ್ರಷ್ಟರಿಗೆ ಬೆಂಬಲ’

ಅಧ್ಯಕ್ಷರ ನಡೆಗೆ ಬೆಂಗಳೂರು ವಕೀಲರ ಸಂಘದ ಖಂಡನೆ
Last Updated 29 ಮೇ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಂವಿಧಾನಿಕ ಸಂಸ್ಥೆಯಾದ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ವೈಯಕ್ತಿಕ ಹಿತಾಸಕ್ತಿ ಹೊಂದಿದ ಕಳ್ಳರಿಗೆ, ಭ್ರಷ್ಟರಿಗೆ ಬೆಂಬಲ ಸಿಗುತ್ತಿದೆ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಆರೋಪಿಸಿದರು.

ಕೆಎಟಿ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಕೆಎಟಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೆಎಟಿ ಅಧ್ಯಕ್ಷ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು ಚಂದ್ರಶೇಖರ್ ಅವರಿಗೆ ಕರ್ತವ್ಯದ ಅವಧಿಯಲ್ಲಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ’ ಎಂದು ದೂರಿದರು.

‘ಚಂದ್ರಶೇಖರ್‌ ಅವರನ್ನು ಆಡಳಿತಾವಧಿಯಲ್ಲಿ ಸಾಕಷ್ಟು ಮುಜುಗರಕ್ಕೆ ಈಡುಮಾಡಿದ್ದಾರೆ. ಇವತ್ತು ಅವರ ಬೀಳ್ಕೊಡುಗೆ ಸಮಾರಂಭಕ್ಕೆ ತಪ್ಪಿಸಿಕೊಳ್ಳಬೇಕು ಎಂಬ ಏಕೈಕ ಉದ್ದೇಶದಿಂದ ಬೆಳಗಾವಿಯ ಕೆಎಟಿ ನ್ಯಾಯಪೀಠದಲ್ಲಿ ಕಲಾಪ ಹಮ್ಮಿಕೊಂಡು ಅಲ್ಲಿಗೆ ತೆರಳಿರುವುದು ಖಂಡನೀಯ’ ಎಂದರು.

‘ಜಾತಿ, ಧರ್ಮಗಳನ್ನು ಮೀರಿ ಕಕ್ಷಿದಾರರ ಹಿತರಕ್ಷಣೆ ಮಾಡಿದ್ದ ಮತ್ತು ವಕೀಲರ ಪ್ರೀತಿ ವಿಶ್ವಾಸ ಗಳಿಸಿರುವ ಚಂದ್ರಶೇಖರ್‌ ಅವರಂತಹ ನ್ಯಾಯಮೂರ್ತಿಗಳು ವಕೀಲರ ವೃಂದಕ್ಕೆ ಮಾದ
ರಿಯಾಗಿ ನಿಲ್ಲುತ್ತಾರೆ’ ಎಂದರು .

ಹೈಕೋರ್ಟ್‌ನ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್ ಮಾತನಾಡಿ, ಕೆ.ಭಕ್ತವತ್ಸಲ ಅವರ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಚಂದ್ರಶೇಖರ್ ಪ್ರಕರಣಗಳ ಶೀಘ್ರ ವಿಲೇವಾರಿಗೆ ಎತ್ತಿದ ಕೈ. ಇಂತಹವರನ್ನು ಭಕ್ತವತ್ಸಲ ಅವರು ಅಧಿಕಾರದ ಅವಧಿಯಲ್ಲಿ ನಡೆಸಿಕೊಂಡ ರೀತಿ ತರವಲ್ಲ’ ಎಂದರು.

ಚಂದ್ರಶೇಖರ್ ಮಾತನಾಡಿ, ‘ನಾನು ನನ್ನ ಅಧಿಕಾರದ ಅವಧಿಯಲ್ಲಿ ಕಾಯಾ, ವಾಚಾ, ಮನಸಾ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದರು.

12,958 ಪ್ರಕರಣಗಳ ವಿಲೇವಾರಿ

ಎ.ವಿ.ಚಂದ್ರಶೇಖರ್‌ ತಮ್ಮ ಒಂದು ವರ್ಷ 11 ತಿಂಗಳ ಆಡಳಿತಾವಧಿಯಲ್ಲಿ 12,958ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.

ಬಾಕಿ ಇದ್ದ ಇಲಾಖಾ ವಿಚಾರಣೆ, ಶಿಕ್ಷೆ, ಬಡ್ತಿ, ಸೇವಾ ಜ್ಯೇಷ್ಠತೆ, ಅಮಾನತು, ವರ್ಗಾವಣೆ ಸೇರಿದಂತೆ ವಿವಿಧ ಪ್ರಕಾರದ ಅರ್ಜಿಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಿದ್ದಾರೆ. ಕೆಎಟಿಯಲ್ಲಿ ಸದ್ಯ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 13,400ಕ್ಕೂ ಹೆಚ್ಚಿದೆ.

ವಿಚಾರಣೆಯಿಂದ ಹಿಂದೆ ಸರಿದ ಸಿಜೆ

‘ಕೆಎಟಿಯಲ್ಲಿ ಖಾಲಿ ಉಳಿದಿರುವ ನ್ಯಾಯಾಂಗ ಮತ್ತು ಆಡಳಿತ ಸದಸ್ಯ ಸ್ಥಾನಗಳ ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ವಕೀಲರಾದ ಕೆ.ಸತೀಶ್‌ ಭಟ್, ಎಂ.ಲೋಕೇಶ್‌ ಮತ್ತು ಎಂ.ಕೆ.ಪೃಥ್ವೀಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಹಿಂದೆ ಸರಿದಿದ್ದಾರೆ.

ಬುಧವಾರ ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಾಗ ಓಕಾ ಅವರು, ‘ಬೇರೊಂದು ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಲಿ’ ಎಂದು ಆದೇಶಿಸಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT