ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ ಕೆ.ವಿ: ಎರಡು ಪಾಳಿ ಸ್ಥಗಿತ ಆದೇಶ ಪ್ರಶ್ನಿಸಿ ಪಿಐಎಲ್‌

Last Updated 7 ಮಾರ್ಚ್ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯ ಮುಂಬರುವ ಶೈಕ್ಷಣಿಕ ವರ್ಷದಿಂದ, ದಿನದಲ್ಲಿ ಎರಡು ಪಾಳಿಯಲ್ಲಿ ಶಾಲೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (‍ಪಿಐಎಲ್‌) ಸಲ್ಲಿಸಲಾಗಿದೆ.

ಈ ಕುರಿತಂತೆ ಅನ್ನಪೂರ್ಣೇಶ್ವರಿ ನಗರದ ಹೆಲ್ತ್‌ ಲೇ ಔಟ್‌ ನಿವಾಸಿ ಕೆ.ಎಲ್‌.ಪ್ರವೀಣ್ ಬಾಬು ಸಲ್ಲಿಸಿರುವ ಅರ್ಜಿಯು, ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ (ಮಾ.7) ವಿಚಾರಣೆಗೆ ನಿಗದಿಯಾಗಿದೆ.

‘ಕೇಂದ್ರೀಯ ವಿದ್ಯಾಲಯ ಸಂಘಟನ್ ಸ್ವಾಯತ್ತ ಸಂಸ್ಥೆಯಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇದರ ನಿಯಂತ್ರಣ ಹೊಂದಿದೆ. ಹೀಗಾಗಿ ಇಲ್ಲಿ ಎಷ್ಟು ಪಾಳಿಯಲ್ಲಿ ಶಾಲೆ ನಡೆಸಬೇಕು ಎಂಬುದು ಕೇಂದ್ರಕ್ಕೆ ಬಿಟ್ಟ ವಿಚಾರ. ಅಷ್ಟಕ್ಕೂ ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಅನುಮತಿ ಪಡೆಯಲಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮೊಹಮದ್ ಮೊಹಸಿನ್‌ ನೀಡಿದ್ದ ದೂರನ್ನು ಆಧರಿಸಿ ಆಯೋಗವು 2018ರ ಅಕ್ಟೋಬರ್ 23ರಂದು ಹೊರಡಿಸಿರುವ ಆದೇಶವು ಸಂಪೂರ್ಣ ಕಾನೂನು ಬಾಹಿರ ಮತ್ತು ಏಕಪಕ್ಷೀಯವಾಗಿದೆ. ಆಯೋಗಕ್ಕೆ ಈ ರೀತಿಯ ಆದೇಶ ಹೊರಡಿಸುವ ಅಧಿಕಾರವಿಲ್ಲ. ಆದ್ದರಿಂದ ಈ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

‘ಎರಡು ಪಾಳಿಯಲ್ಲಿ ಶಾಲೆ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳಾಗಲೀ ಅಥವಾ ಪೋಷಕರಾಗಲೀ ತಕರಾರು ತೆಗೆದಿಲ್ಲ. ಪ್ರತಿ ಪಾಳಿಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದು ವರ್ಷದ ಕಲಿಕೆ ನಿರಾತಂಕವಾಗಿ ಮುಕ್ತಾಯವಾಗುತ್ತಿದೆ. ಹೀಗಿರುವಾಗ ಆಯೋಗದ ಆದೇಶವು ಶಿಕ್ಷಣ ಹಕ್ಕು ಕಾಯ್ದೆ ಮೂಲಭೂತ ಹಕ್ಕಿಗಿಂತಲೂ ಮಿಗಿಲಾದದ್ದು ಎಂಬ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ’ ಎಂದು ತಿಳಿಸಲಾಗಿದೆ.

‘ಪೋಷಕರ ತಾಳಕ್ಕೆ ಕುಣಿಯಬೇಡಿ’

‘ಎರಡು ಪಾಳಿಯಿಂದ ಪೋಷಕರು ಸಂತೋಷಗೊಂಡಿದ್ದಾರೆ‘ ಎಂಬ ಪ್ರಾಂಶುಪಾಲರ ಉತ್ತರಕ್ಕೆ ಆಯೋಗವು ಕಿಡಿ ಕಾರಿದೆ.

’ಶಾಲಾ ಆಡಳಿತ ಮಂಡಳಿಯು ಪೋಷಕರ ತಾಳಕ್ಕೆ ತಕ್ಕಂತೆ ಕುಣಿಯಬಾರದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮರ್ಪಕ ಶಿಕ್ಷಣಕ್ಕೆ ಶಾಲೆ ಕಟಿಬದ್ಧವಾಗಿರಬೇಕು. ಒಂದು ತರಗತಿಯಲ್ಲಿ 60 ಮಕ್ಕಳಿದ್ದಾರೆ ಎಂದರೆ ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿನ ನಿಗಾ ಕೊಡಲು ಸಾಧ್ಯವಿದೆ ಎಂಬುದು ಅರ್ಥವಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಯೋಗದ ಏನಿದೆ ಆದೇಶದಲ್ಲಿ?:

* ಮೊದಲ ಪಾಳಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.25ರವರೆಗೆ ನಡೆಯುತ್ತದೆ. ಎರಡನೇ ಪಾಳಿ 12.30ರಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತದೆ.

* ಎರಡೂ ಪಾಳಿಗಳಿಗೆ ಒಬ್ಬರೇ ಪ್ರಾಂಶುಪಾಲರು ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿದಾಗ ಮೊದಲ ಪಾಳಿಯಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಲ್ಲದೆ ಕಲಿಯುತ್ತಿರುವುದು ಸ್ಪಷ್ಟವಾಗುತ್ತದೆ.

* ಪ್ರತಿ ಪೀರಿಯಡ್‌ನ ಅವಧಿಯಲ್ಲಿ ಐದ ನಿಮಿಷ ಕಡಿತ ಮಾಡಲಾಗಿದೆ. ಇರುವ 37 ಶಿಕ್ಷಕರಲ್ಲಿ ಕೇವಲ 8 ಜನರು ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಉಳಿದವರೆಲ್ಲಾ ತಾತ್ಕಾಲಿಕ ಶಿಕ್ಷಕರು ಎಂಬ ಅಂಶವೂ ಆತಂಕದ ವಿಚಾರ.

* ಇದು ಸಿಬಿಎಸ್‌ಇ (ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ) ಜೊತೆಗಿನ ಸಂಯೋಜಿತ ಮಾರ್ಗಸೂತ್ರಗಳ ಉಲ್ಲಂಘನೆಯಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT