ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಪ್ರದೇಶ ಬಳಕೆ ಆರೋಪ: ವಿವರಣೆ ಕೇಳಿದ ಹೈಕೋರ್ಟ್‌

Last Updated 27 ಮೇ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆರೆ ಪ್ರದೇಶಗಳ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸೂಕ್ತವಾಗಿ ಆಲೋಚಿಸದೆ ರಸ್ತೆ ವಿಸ್ತರಣೆಗೆ ಅನುಮತಿ ನೀಡಿದ್ದರೆ ಅದು ಅಕ್ರಮವಾಗುತ್ತದೆ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಪೆದ್ದನಪಾಳ್ಯ ಬಳಿಯ ಕೆಂಗುಂಟೆ ಕೆರೆ ಪ್ರದೇಶವನ್ನು ರಾಜ್ಯ ಹೆದ್ದಾರಿ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಓಕ್‌ ಅವರು, ‘ಅಧಿಕಾರಿಗಳು ವಿವೇಚನೆ ಬಳಸದೆ ಕೆರೆ ಪ್ರದೇಶವನ್ನು ಹೆದ್ದಾರಿ ವಿಸ್ತರಣೆ ಬಳಕೆಗೆ ಅನುಮತಿ ನೀಡಲು ಹೇಗೆ ನಿರ್ಧರಿಸಿದರು’ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.

’ಈ ಕುರಿತಂತೆ ಜೂನ್‌ 7ರ ಒಳಗೆ ಸ‍ಂಪೂರ್ಣ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು.

ಆಕ್ಷೇಪಣೆ ಏನು?: ‘ಬೆಂಗಳೂರಿನ ನೈಸ್ ರಸ್ತೆಯಿಂದ ಕುಣಿಗಲ್ ಮಾಗಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ– 22ರ ವಿಸ್ತರಣೆ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಈ ವಿಸ್ತರಣೆಯಲ್ಲಿ ಕೆಂಗುಂಟೆ ಕೆರೆ ಪ್ರದೇಶವನ್ನೂ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕೆರೆಗೆ ಹಾನಿಯಾಗಲಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ಈಗಾಗಲೇ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿ 2011ರಲ್ಲಿ ಕೆರೆ ಸಂರಕ್ಷಣೆ ಮಾಡುವಂತೆ ಶಿಫಾರಸು ಮಾಡಿತ್ತು. ಆದರೆ, ಅದನ್ನು ಲೆಕ್ಕಿಸದೆ ಬೈಚಗುಪ್ಪೆ ಸೇರಿದಂತೆ ಮೂರು ಗ್ರಾಮಗಳ ಜಲಮೂಲವಾಗಿರುವ ಈ ಕೆರೆ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ತಾವರಕೆರೆ ಹೋಬಳಿಯ ಬೈಚಗುಪ್ಪೆ ಗ್ರಾಮದ ಬಿ.ಕೆ.ಮುನಿಯಪ್ಪ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಿ.ಭರತ್‌ ಕುಮಾರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT