ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಣೈ ಜಾಮೀನು ರದ್ದು ಕೋರಿದ್ದ ಅರ್ಜಿ ವಜಾ

ಆರ್‌ಟಿಐ ಕಾರ್ಯಕರ್ತ ಬಾಳಿಗ ಕೊಲೆ ಪ್ರಕರಣ
Last Updated 26 ಮಾರ್ಚ್ 2019, 18:29 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಮೃತರ ಸಹೋದರಿ ಅನುರಾಧಾ ಬಾಳಿಗ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶೆಣೈಗೆ ನೀಡಿದ್ದ ಜಾಮೀನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ದಕ್ಷಿಣ ಕನ್ನಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅನುರಾಧಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿತು.

‘ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಭಕ್ತರಾಗಿ ಪಾಲ್ಗೊಂಡಿರುವ ನರೇಶ್ ಶೆಣೈ, ಅನ್ನ ಸಂತರ್ಪಣೆ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಭಕ್ತಾದಿಗಳಿಗೆ ಪ್ರಸಾದ ಬಡಿಸಿದ್ದಾರೆ. ಇದನ್ನು ಜಾಮೀನು ಷರತ್ತಿನ ಉಲ್ಲಂಘನೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನ್ಯಾಯಾಲಯ ಒಮ್ಮೆ ಮಂಜೂರು ಮಾಡಿದ ಜಾಮೀನನ್ನು ರದ್ದುಪಡಿಸಲು ಬಲವಾದ ಕಾರಣಗಳಿರಬೇಕು. ಜಾಮೀನು ಪಡೆದ ವ್ಯಕ್ತಿ ವಿರುದ್ಧ ಗುರುತರ ಆರೋಪಗಳಿದ್ದಲ್ಲಿ ಅಥವಾ ಪದೇಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಲ್ಲಿ, ಅದನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿಯಿಂದ ಜಾಮೀನು ಷರತ್ತು ಉಲ್ಲಂಘನೆಯಾಗಿರುವುದು ಕಂಡುಬರುವುದಿಲ್ಲ’ ಎಂದು ತಿಳಿಸಿರುವ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಶೆಣೈಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್, ‘ಮಂಗಳೂರಿನ ವೆಂಕಟರಮಣ ದೇವಸ್ಥಾನ ಮತ್ತು ಕಾಶಿಮಠದ ಕಾರ್ಯಚಟುವಟಿಕೆಯಿಂದ ದೂರ ಉಳಿಯಬೇಕು ಎಂಬ ಷರತ್ತನ್ನು ವಿಧಿಸಿತ್ತು. ಆದರೆ, ಜಾಮೀನು ಷರತ್ತು ಉಲ್ಲಂಸಿರುವ ನರೇಶ್ ಶೆಣೈ, ದೇವಸ್ಥಾನದ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೀಗಾಗಿ ಅವರ ಜಾಮೀನು ರದ್ದುಪಡಿಸಬೇಕು’ ಎಂದು ಮೇಲ್ಮನವಿದಾರರು ಕೋರಿದ್ದರು.

ಈ ಆರೋಪವನ್ನು ಅಲ್ಲಗಳೆದಿದ್ದ ಶೆಣೈ ಪರ ವಕೀಲ ಅರುಣ್ ಶ್ಯಾಮ್, ‘ದೇವಾಲಯದ ಭಕ್ತರಾಗಿ ಶೆಣೈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆಯೇ ಹೊರತು, ಯಾವುದೇ ಆಡಳಿತ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಒಬ್ಬ ಭಕ್ತರಾಗಿ ದೇವಾಲಯ ಪ್ರವೇಶಿಸಬಹುದು ಮತ್ತು ಅದರ ಕಾರ್ಯಗಳಲ್ಲಿ ಭಾಗವಹಿಸಬಹುದು ಎಂದು ಇದೇ ಹೈಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ’ ಎಂದು ವಾದ ಮಂಡಿಸಿದ್ದರು.

ಪ್ರಕರಣವೇನು?:ರಥಬೀದಿಯ ವೆಂಕಟರಮಣ ದೇವಾಲಯದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರನ್ನು ಮಂಗಳೂರಿನ ಕೊಡಿಯಾಲ್ ಬೈಲ್ ಬಳಿ 2016ರ ಮಾ. 23ರಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಜೂನ್‌ 26ರಂದು ನರೇಶ್ ಶೆಣೈ ಅವರನ್ನು ಬಂಧಿಸಲಾಗಿತ್ತು. 2016ರ ಸೆ.15ರಂದು ಶೆಣೈಗೆ ಜಾಮೀನು ನೀಡಿದ್ದ ಹೈಕೋರ್ಟ್ ದೇವಾಲಯದ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡದಂತೆ ಷರತ್ತು ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT