ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ: ಆರೋಪಿಯ ಅರ್ಜಿ ವಜಾ

ಶುಕ್ರವಾರ, ಏಪ್ರಿಲ್ 26, 2019
24 °C

ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ: ಆರೋಪಿಯ ಅರ್ಜಿ ವಜಾ

Published:
Updated:

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಐದು ವರ್ಷಗಳ ಅವಧಿಯಲ್ಲಿ ಬಾಲಕಿ ಮೇಲೆ ಆಗಾಗ್ಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ವಿವಾಹಿತರೊಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಈ ಕುರಿತಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಸಂತ್ರಸ್ತೆಯ ವಯಸ್ಸಿನ ತಕರಾರಿನ ಬಗ್ಗೆ ವಿಚಾರಣಾ ನ್ಯಾಯಾಲಯವೇ ತೀರ್ಮಾನ ಮಾಡಲಿ’ ಎಂದು ಅರ್ಜಿ ವಜಾಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಆರೋಪಿಯು, ಸಂತ್ರಸ್ತೆಯ ಜೊತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೂ ಆಕೆ ಬಾಲಕಿಯಲ್ಲ. ವೈದ್ಯಕೀಯ ವರದಿ ಪ್ರಕಾರ ಆಕೆಗೆ 22 ವರ್ಷವಾಗಿದೆ. ಅಂತೆಯೇ ದೂರು ನೀಡಲು ಸಾಕಷ್ಟು ತಡ ಮಾಡಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಲೈಂಗಿಕ ಸಂಬಂಧದ ವಿಚಾರವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಸಂ‌ತ್ರಸ್ತೆ ದೂರು ನೀಡಲು ವಿಳಂಬವಾಗಿರಬಹುದು. ಆರೋಪಿಯು ಸಂತ್ರಸ್ತೆಯ ಖಾಸಗಿ ಕ್ಷಣದ ಚಿತ್ರಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಬೆದರಿಕೆ ಒಡ್ಡಿದ್ದಾರೆ. ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸಿರುವುದು ಈ ಪ್ರಕರಣದಲ್ಲಿ ವೇದ್ಯವಾಗುತ್ತದೆ’ ಎಂದು ಹೇಳಿ ಅರ್ಜಿ ವಜಾಗೊಳಿಸಿತು.

‘ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ ಎಂದು ಅನುರಾಗ್ ಸೋನಿ ಮತ್ತು ಛತ್ತೀಸಗಡ ರಾಜ್ಯ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2019ರ ಏಪ್ರಿಲ್‌ 9ರಂದು ತೀರ್ಪು ನೀಡಿದೆ’ ಎಂದು ನ್ಯಾಯಪೀಠ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !