ಶನಿವಾರ, ನವೆಂಬರ್ 23, 2019
17 °C

ವಿದೇಶ ಹೈನು ಉತ್ಪನ್ನ ಆಮದಿಗೆ ವಿರೋಧ: 24ಕ್ಕೆ ರೈತ ಸಂಘದಿಂದ ಹೆದ್ದಾರಿ ಬಂದ್

Published:
Updated:

ಕೋಲಾರ: ಹೈನು ಉತ್ಪನ್ನಗಳನ್ನು ಏಷ್ಯಾ– ಪೆಸಿಫಿಕ್‌ ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಅ.24ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಸೇನೆಯ ಕಾರ್ಯಕರ್ತರು ತೀರ್ಮಾನಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ನಗರ ಸಮೀಪದ ಕೊಂಡರಾಜನಹಳ್ಳಿ ಬಳಿ ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿ ಬಂದ್‌ ಹಮ್ಮಿಕೊಂಡಿದ್ದು, ಇದರಲ್ಲಿ ರೈತರು, ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ಹೈನು ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರುವ ನಿರ್ಧಾರ ಕೈಬಿಡಬೇಕು. ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಹೈನೋದ್ಯಮವನ್ನು ಮುಕ್ತ ವ್ಯಾಪಾರ ಒಪ್ಪಂದಿಂದ ದೂರವಿಡಬೇಕು. ಈ ಸಂಬಂಧ ಸಂಸದರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರ ಸಭೆ ಕರೆ ಕರೆದು ಸಮಗ್ರ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ವಿದೇಶ ಹೈನು ಉತ್ಪನ್ನ ಆಮದಿನ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸದೆ ತರಾತುರಿಯಲ್ಲಿ ನಿರ್ಣಯ ಕೈಗೊಂಡಿದೆ. ಈ ವಿಚಾರವಾಗಿ ಅನೇಕ ಭಾರಿ ಹೋರಾಟ ನಡೆಸಿದ್ದರೂ ಸರ್ಕಾರಗಳು ಧೋರಣೆಯನ್ನು ಬದಲಾಯಿಸಿಕೊಂಡಿಲ್ಲ. ಕೇಂದ್ರಕ್ಕೆ ರೈತರ ಹಿತಕ್ಕಿಂತ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತವೇ ಮುಖ್ಯವಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ದೇಶದೆಲ್ಲೆಡೆ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲ. ಈ ಕಾರಣಕ್ಕೆ ಸಾಕಷ್ಟು ರಾಜ್ಯಗಳಲ್ಲಿ ವಾರದಲ್ಲಿ ಒಂದು ದಿನ ಹಾಲು ಖರೀದಿ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿ ಹೈನು ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಿದರೆ ದೇಶದ ಹೈನು ಉತ್ಪನ್ನಗಳಿಗೆ ಬೇಡಿಕೆ ಕುಸಿದು ರೈತರ ಬೀದಿ ಪಾಲಾಗುವ ಅತಂಕ ಎದುರಾಗಿದ್ದು, ಎಂದು ಬೇಸರ ವ್ಯಕ್ತಪಡಿಸಿದರು.

ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಪದಾಧಿಕಾರಿಗಳಾದ ನಾಗರಾಜಗೌಡ, ಮಂಜುನಾಥ್, ಹರಿಕುಮಾರ್, ಪ್ರತಾಪ್, ಮಂಜುನಾಥ್, ಆಂಜಿನಪ್ಪ, ವೆಂಕಟೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)