ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ದಿವಸದ ಬದಲು ಕರಾಳ ದಿನಾಚರಣೆ

‘ಒಂದು ದೇಶ–ಒಂದು ಭಾಷೆ’– ಅಮಿತ್‌ ಶಾ ಹೇಳಿಕೆಗೆ ಖಂಡನೆ *
Last Updated 14 ಸೆಪ್ಟೆಂಬರ್ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಪರ ಸಂಘಟನೆಗಳು ಶನಿವಾರ ‘ಹಿಂದಿ ದಿವಸ್‌’ ಬದಲು ಕರಾಳ ದಿನವನ್ನು ಆಚರಿಸುವ ಮೂಲಕ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯತ್ನಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದವು.

ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆಯು ನಡೆಯಿತು.

ಭಾರತೀಯ ಭಾಷೆಗಳಿಗೆ ಮತ್ತು ಭಾಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಹಿಂದಿ ಹೇರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ‘ಹಿಂದಿ ಹೇರಿಕೆ ನಿಲ್ಲಲಿ’, ‘ಸಮಾನ ಭಾಷಾ ನೀತಿ ಜಾರಿಗೆ ಬರಲಿ’, ‘ಹಿಂದಿ ವೈಭವೀಕರಣ ಕೊನೆಗೊಳ್ಳಲಿ’ ಎಂದು ಘೋಷಣೆ ಕೂಗಿದರು.

‘ಕೇಂದ್ರ ಸರ್ಕಾರವು ತನ್ನ ಅಧೀನದ ಬ್ಯಾಂಕುಗಳು, ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಸೆ.14ರಂದು ಹಿಂದಿ ದಿನವನ್ನು ಆಚರಿಸುತ್ತದೆ. ಈ ಮೂಲಕ ದೇಶದ ಎಲ್ಲ ಭಾಷೆಗಳ ಜನರ ತೆರಿಗೆ ಹಣವನ್ನು ಹಿಂದಿ ಬೆಳವಣಿಗೆಗೆ ಖರ್ಚು ಮಾಡುತ್ತಿದೆ’ ಎಂದು ಪ್ರತಿಭಟನಕಾರರು ಟೀಕಿಸಿದರು.

‘ಕೇಂದ್ರವು ಹಿಂದಿ ಹೊರತಾಗಿ ಇತರ ಭಾರತೀಯ ಭಾಷೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಹಿಂದಿ ದಿನ ಆಚರಣೆಯನ್ನು ರದ್ದು ಮಾಡಬೇಕು.ಸಂವಿಧಾನದ 343 ರಿಂದ 351 ವಿಧಿಗಳಿಗೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಕನ್ನಡ ಸೇರಿದಂತೆ ಎಲ್ಲ ದೇಸಿ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಭಾರತವು ಭಾಷಾ ವೈವಿಧ್ಯತೆಯಿಂದ ಕೂಡಿದ ರಾಜ್ಯಗಳ ಒಕ್ಕೂಟ. ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಕ್ಕಾಗ ಮಾತ್ರ ಒಕ್ಕೂಟ ವ್ಯವಸ್ಥೆ ಉಳಿಯುತ್ತದೆ. ಸಂವಿಧಾನ ಅಥವಾ ಯಾವುದೇ ಕಾನೂನು ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಹೇಳಿಲ್ಲ. ಕೇಂದ್ರ ಸರ್ಕಾರ ಹಿಂದಿ ಭಾಷೆಯು ರಾಷ್ಟ್ರ ಭಾಷೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಈ ಹಿಂದೆ, ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ 13 ಭಾರತೀಯ ಭಾಷೆಗಳಲ್ಲಿ ಬ್ಯಾಂಕ್ ಪರೀಕ್ಷೆ ಬರೆಯಬಹುದು ಎಂದು ಹೇಳಿದ್ದರು. ಆದರೆ, ಬ್ಯಾಂಕ್‌ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ ಕಲ್ಪಿಸುವ ಮೂಲಕ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಒಂದು ಭಾಷೆ ಒಂದು ರಾಷ್ಟ್ರ ಮಾದರಿಯಲ್ಲಿ ಹಿಂದಿ ಭಾಷೆಯನ್ನು ಎಲ್ಲರೂ ಒಪ್ಪಬೇಕು’ ಎಂದು ಹೇಳಿಕೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭಾರತೀಯ ಭಾಷೆಗಳ ದಿನವಾಗಲಿ’

‘ಹಿಂದಿ ದಿವಸವನ್ನು ರದ್ದು ಮಾಡಬೇಕು. ಸೆ. 14ನ್ನು ಹಿಂದಿ ದಿನ ಎಂದು ಆಚರಿಸುವ ಬದಲು, ಭಾರತೀಯ ಭಾಷೆಗಳ ದಿನವನ್ನಾಗಿ ಆಚರಿಸಬೇಕು’ ಎಂದು ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT