‘ಎಚ್‌ಐವಿ’ ಮುಚ್ಚಿಟ್ಟ ಪತಿ; ಪತ್ನಿಗೂ ಸೋಂಕು

7
ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ l ಸ್ನೇಹಿತನೊಂದಿಗೆ ಗಂಡ ಪರಾರಿ

‘ಎಚ್‌ಐವಿ’ ಮುಚ್ಚಿಟ್ಟ ಪತಿ; ಪತ್ನಿಗೂ ಸೋಂಕು

Published:
Updated:

ಬೆಂಗಳೂರು: ‘ಎಚ್‌ಐವಿ ಸೋಂಕಿಗೆ ಒಳಗಾಗಿರುವ ವಿಚಾರವನ್ನು ಮರೆಮಾಚಿ ನನ್ನನ್ನು ಮದುವೆಯಾದ ಪತಿ, ಈಗ ನನಗೂ ಎಚ್‌ಐವಿ ಸೋಂಕು ತಗುಲುವಂತೆ ಮಾಡಿದ್ದಾರೆ’ ಎಂದು ಆರೋಪಿಸಿ 22 ವರ್ಷದ ಬಿ.ಕಾಂ ಪದವೀಧರೆ ಬಾಗಲಗುಂಟೆ ಠಾಣೆಯ ಮೆಟ್ಟಿಲೇರಿದ್ದಾರೆ.

ದೂರಿನ ಅನ್ವಯ ಪೊಲೀಸರು ಸಂತ್ರಸ್ತೆಯ ಗಂಡ, ಅತ್ತೆ–ಮಾವ ಹಾಗೂ ಗಂಡನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಅತ್ತೆ–ಮಾವನ ಹೇಳಿಕೆ ಪಡೆಯಲಾಗಿದೆ. ಸಂತ್ರಸ್ತೆಯ ಗಂಡ ಹಾಗೂ ಸ್ನೇಹಿತ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಪಕ್ಕದಲ್ಲಿ ಮಲಗುತ್ತಿದ್ದ ಸ್ನೇಹಿತ!: ‘₹1 ಲಕ್ಷ ವರದಕ್ಷಿಣೆ ಹಾಗೂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಕೊಟ್ಟು ಪೋಷಕರು ಇದೇ ಜುಲೈ 15ರಂದು ನನ್ನ ಮದುವೆ ಮಾಡಿದರು. ಆರಂಭದ ಎರಡು ತಿಂಗಳು ಪತಿ ಚೆನ್ನಾಗಿಯೇ ನೋಡಿಕೊಂಡರು. ಆನಂತರ ಅತ್ತೆ–ಮಾವನ ಜತೆ ಸೇರಿಕೊಂಡು ವರದಕ್ಷಿಣೆಗಾಗಿ ಪೀಡಿಸಲು ಶುರು ಮಾಡಿದರು. ‘ನಿನ್ನ ಪೋಷಕರಿಗೆ ಸೇರಿದ ಟಿ.ದಾಸರಹಳ್ಳಿಯಲ್ಲಿರುವ ಮನೆಯನ್ನು ನಿನ್ನ ಹೆಸರಿಗೆ ಬರೆಸಿಕೊಂಡು ಬಾ’ ಎಂದು ಕಿರುಕುಳ ನೀಡುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಅತ್ತೆ ಗುಪ್ತಾಂಗಕ್ಕೆ ಒದ್ದಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಈ ನಡುವೆ ಗಂಡನ ಸ್ನೇಹಿತ ಕೂಡ ಬಂದು ಮನೆಯಲ್ಲೇ ಇದ್ದ. ನಾನು–ಗಂಡ ನಿದ್ರೆಯಲ್ಲಿದ್ದಾಗ, ಕೋಣೆಗೆ ಬಂದು ನಮ್ಮಿಬ್ಬರ ಮಧ್ಯದಲ್ಲಿ ಮಲಗುತ್ತಿದ್ದ. ಈ ವಿಚಾರ ಗಂಡ, ಅತ್ತೆ–ಮಾವನಿಗೆ ಗೊತ್ತಿದ್ದರೂ ಸುಮ್ಮನೇ ಇದ್ದರು. ವರದಕ್ಷಿಣೆ ಹಣ ತರದಿದ್ದರೆ, ‘ಊಟದಲ್ಲಿ ವಿಷ ಹಾಕಿ ಸಾಯಿಸುತ್ತೇವೆ’ ಎಂದು ಬೆದರಿಸುತ್ತಿದ್ದರು’ ಎಂದು ದೂರಿದ್ದಾರೆ.

ತಪಾಸಣೆ ವೇಳೆ ಗೊತ್ತಾಯ್ತು: ‘ಇತ್ತೀಚೆಗೆ ಅನಾರೋಗ್ಯಕ್ಕೀಡಾದ ನಾನು, ತಪಾಸಣೆ ಮಾಡಿಸಲು ಆಸ್ಪತ್ರೆಗೆ ಹೋದೆ. ಆಗ ವೈದ್ಯರು, ‘ನಿಮಗೆ ಎಚ್‌ಐವಿ ಸೋಂಕು ತಗುಲಿದೆ’ ಎಂದು ಹೇಳಿದರು. ಗಾಬರಿಯಾಯಿತು. ಹೋಗಿ ಪತಿ ಬಳಿ ವಿಚಾರಿಸಿದಾಗ, ‘ನಾನು ಬಹಳ ದಿನಗಳಿಂದ ಎಚ್‌ಐವಿಯಿಂದ ಬಳಲುತ್ತಿದ್ದೇನೆ’ ಎಂದು ಹೇಳಿದರು. ಆ ವಿಚಾರವನ್ನು ಮೊದಲೇ ಏಕೆ ಹೇಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೂ ಮನಸೋಇಚ್ಛೆ ಥಳಿಸಿದರು. ಎದೆಗೂ ಒದ್ದರು’ ಎಂದು ಆರೋಪಿಸಿದ್ದಾರೆ.

ತಮ್ಮದೇ ತಪ್ಪಿದ್ದರೂ ನಮಗೆ ಕಿರುಕುಳ’

‘ಕಿರುಕುಳ ಹೆಚ್ಚಾದ ಬಳಿಕ ಪತಿಯನ್ನು ತೊರೆದು ತವರು ಸೇರಿದೆ. ಕೆಲ ದಿನಗಳ ಬಳಿಕ ಸಂಧಾನ ಮಾತುಕತೆಗೆಂದು ಪೋಷಕರು ಅವರ ಮನೆಗೆ ಹೋಗಿದ್ದರು. ಪತಿ ಹಾಗೂ ಅವರ ಸ್ನೇಹಿತರು ಅವರ ಮೇಲೂ ಹಲ್ಲೆ ಮಾಡಿದ್ದರು. ತಮ್ಮದೇ ತಪ್ಪಿದ್ದರೂ ನಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಪತಿ, ಅವರ ಸ್ನೇಹಿತ ಹಾಗೂ ಅತ್ತೆ–ಮಾವನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !