ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿಗೆ ದಾದಿಯರು, ಜೈಲು ಸೇರಿದ ಟಾಮ್

ಮಾನವ ಸಾಗಣೆ ಅಲ್ಲ; ಅರ್ಮೇನಿಯಾ ವಿಶ್ವವಿದ್ಯಾಲಯದಿಂದ ಸ್ಪಷ್ಟನೆ
Last Updated 29 ನವೆಂಬರ್ 2018, 20:39 IST
ಅಕ್ಷರ ಗಾತ್ರ

ಬೆಂಗಳೂರು: ಮಾನವ ಸಾಗಣೆ ಆರೋಪದಡಿ ಕೆಐಎಎಲ್ ಪೊಲೀಸರು ಬಂಧಿಸಿದ್ದ ಕೇರಳದ ಟಾಮ್‌ ಮೋನಿ (36) ಅವರನ್ನು ಎಸಿಎಂಎಂ ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮತ್ತೊಂದೆಡೆ, ಜರ್ಮನ್ ಭಾಷಾ ಕಲಿಕೆಗಾಗಿ ಅರ್ಮೇನಿಯಾ ದೇಶಕ್ಕೆ ತೆರಳಲು ಟಾಮ್‌ ಜತೆ ವಿಮಾನ ನಿಲ್ದಾಣಕ್ಕೆ ಬಂದಿದ್ದ 32 ದಾದಿಯರೂ ಪೊಲೀಸರಿಗೆ ಹೇಳಿಕೆ ಕೊಟ್ಟು ಗುರುವಾರ ತಮ್ಮ ಊರುಗಳಿಗೆ ಮರಳಿದರು.

ಟಾಮ್‌ ಮೋನಿ ಅರ್ಮೇನಿಯಾಗೆ ಹೊರಟಿದ್ದ ಎಲ್ಲ ದಾದಿಯರಿಗೂ ‘ಇ–ವೀಸಾ’ ನೀಡಿದ್ದರು. ಸಾಮಾನ್ಯವಾಗಿ ಅದರ ವಾಯಿದೆ 90 ದಿನಗಳವರೆಗೆ ಇರುತ್ತದೆ.

ಹೀಗಾಗಿ, ತಮ್ಮ ವಿಶ್ವವಿದ್ಯಾಲಯದಲ್ಲಿ ಭಾಷಾ ಕಲಿಕಾ ಕೋರ್ಸ್ ಇದೆಯೇ? ಇದ್ದರೆ, ಅದು ಎಷ್ಟು ತಿಂಗಳ ಕೋರ್ಸ್ ? ಟಾಮ್‌ ಮೋನಿ 32 ಅಭ್ಯರ್ಥಿಗಳನ್ನು ಕಲಿಕೆಗೆ ಕಳುಹಿಸುವುದಾಗಿ ಹೇಳಿದ್ದರೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ‘ದ ಯುನಿವರ್ಸಿಟಿ ಆಫ್ ಟ್ರೆಡಿಷನಲ್ ಮೆಡಿಸನ್ ರಿಪಬ್ಲಿಕ್ ಆಫ್ ಅರ್ಮೇನಿಯಾ’ (ಯುಟಿಎಂಆರ್‌ಎ) ಆಡಳಿತ ಮಂಡಳಿಗೆ ಪೊಲೀಸರು ಪತ್ರ ಬರೆದಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಯುಟಿಎಂಆರ್‌ಎ, ‘ನಮ್ಮ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲೇ ಕಾರ್ಯ ನಿರ್ವಹಿಸುತ್ತಿರುವ ‘ಜಿಇಒಎಸ್’ ಶಿಕ್ಷಣ ಸಂಸ್ಥೆಯಲ್ಲಿ ಭಾಷಾ ಕಲಿಕಾ ಕೋರ್ಸ್ ಇದೆ. ಎರಡು ತಿಂಗಳ ಆ ಕೋರ್ಸ್‌ಗೆ, ಕೇರಳದ 32 ದಾದಿಯರು ಪ್ರವೇಶ ಪಡೆದಿದ್ದರು’ ಎಂದು ಸ್ಪಷ್ಟಪಡಿಸಿದೆ.

ಮಂಗಳೂರಿನಲ್ಲಿ ಶೈಕ್ಷಣಿಕ ಸಲಹಾ ಕೇಂದ್ರ ನಡೆಸುತ್ತಿರುವ ಟಾಮ್‌, ದಾದಿಯರ ಜತೆ ಮಂಗಳವಾರ ನಸುಕಿನಲ್ಲಿ (1.45ರ ಸುಮಾರಿಗೆ) ಕೆಐಎಎಲ್ ಬಂದಿದ್ದರು. ನಕಲಿ ದಾಖಲೆಗಳು ಇದ್ದವೆಂದು ವಲಸೆ ವಿಭಾಗದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು, ಪೊಲೀಸರ ಸುಪರ್ದಿಗೆ ಕೊಟ್ಟಿದ್ದರು. ಈ ಸಂಬಂಧ ವಂಚನೆ, ಸುಳ್ಳು ದಾಖಲೆ ಸೃಷ್ಟಿ ಹಾಗೂ ಮಾನವ ಸಾಗಣಿಕೆ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.

ಶೌಚಾಲಯಕ್ಕೂ ಬಿಡಲಿಲ್ಲ: ‘ಭಾಷಾ ಕಲಿಕೆ ಉದ್ದೇಶ ಇಟ್ಟುಕೊಂಡೇ ಅರ್ಮೇನಿಯಾ ದೇಶಕ್ಕೆ ಹೊರಟಿದ್ದ ನಮ್ಮನ್ನು ಕೆಐಎಎಲ್‌ನ ಅಧಿಕಾರಿಗಳು ಹಾಗೂ ಪೊಲೀಸರು ವಿಚಾರಣೆ ನೆಪದಲ್ಲಿ ಅಕ್ರಮ ಬಂಧನದಲ್ಲಿರಿಸಿದರು. ಶೌಚಾಲಯಕ್ಕೆ ಹೋಗುವುದಕ್ಕೂ ಅವಕಾಶ ಕೊಡದೆ, ಸತತವಾಗಿ 11 ತಾಸು ವಿಚಾರಣೆ ನಡೆಸಿದರು’ ಎಂದು ದಾದಿಯರು ಆರೋಪಿಸಿದರು.

ದಾದಿಯರು ಪೊಲೀಸರ ವಶದಲ್ಲಿರುವ ವಿಚಾರ ತಿಳಿದು ಅವರ ಪೋಷಕರು ಹಾಗೂ ಸಂಬಂಧಿಕರು ಬುಧವಾರ ರಾತ್ರಿಯೇ ಆತಂಕದಿಂದ ಬೆಂಗಳೂರಿಗೆ ಬಂದಿದ್ದರು. ಪೊಲೀಸರು ಕೊನೆ ಹಂತದ ಹೇಳಿಕೆ ದಾಖಲಿಸಿಕೊಂಡ ಬಳಿಕ ಕೇರಳಕ್ಕೆ ಕರೆದುಕೊಂಡು ಹೋದರು.

ಇದಕ್ಕೂ ಮುನ್ನ ‘ಪ್ರಜಾವಾಣಿ’ ಜತೆ ಮಾತನಾಡಿದ ದಾದಿಯೊಬ್ಬರು, ‘ನಮ್ಮ ಬಳಿ ಎಲ್ಲ ದಾಖಲೆಗಳು ಸರಿಯಾಗಿಯೇ ಇದ್ದರೂ, ಕೆಐಎಎಲ್‌ ಅಧಿಕಾರಿಗಳು ತುಂಬ ಕೆಟ್ಟದಾಗಿ ನಡೆಸಿಕೊಂಡರು. ರಾತ್ರಿ 1.45ಕ್ಕೆ ನಮ್ಮನ್ನು ವಶಕ್ಕೆ ಪಡೆದ ಅವರು, ಶೌಚಾಲಯಕ್ಕೂ ಹೋಗಲು ಬಿಡಲಿಲ್ಲ. ಬೆಳಿಗ್ಗೆ ಹಸಿವಾಗುತ್ತಿರುವುದಾಗಿ ಹೇಳಿದರೆ ತಿಂಡಿಯನ್ನೂ ಕೊಡಲಿಲ್ಲ. ನಾವೇ ತಿಂಡಿ ಕೊಂಡುಕೊಳ್ಳುವುದಕ್ಕೂ ಬಿಡಲಿಲ್ಲ’ ಎಂದು ದೂರಿದರು.

‘ಬಡತನವಿದ್ದರೂ, ಕಲಿಕೆಗಾಗಿ ಸಾಲ ಮಾಡಿ ವಿದೇಶಕ್ಕೆ ಹೊರಟಿದ್ದೆವು. ಈಗ ಅಧಿಕಾರಿಗಳ ಬೇಜವಬ್ದಾರಿಯುತ ವರ್ತನೆಯಿಂದ ಎಲ್ಲವೂ ಹಾಳಾಯಿತು. ಈಗ ವಿಮಾನದ ಟಿಕೆಟ್ ದರವನ್ನು ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

**

‘ಗುಪ್ತದಳದ ಅಧಿಕಾರಿಗಳಿಂದ ಸುಳ್ಳು ಮಾಹಿತಿ’

‘ಅಳಿಯ ಟಾಮ್‌ಮೋನಿ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಶೈಕ್ಷಣಿಕ ಸಲಹಾ ಕೇಂದ್ರ ನಡೆಸುತ್ತಿದ್ದಾನೆ. ವಿದೇಶಗಳಲ್ಲಿ ನರ್ಸ್ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು, ಆಯಾ ದೇಶಗಳ ಭಾಷೆಯ ಕಲಿಕೆಗಾಗಿ ಅಳಿಯನನ್ನು ಸಂಪರ್ಕಿಸುತ್ತಾರೆ. ಆಗ ಆತ, ಭಾಷಾ ಕಲಿಕಾ ಕೋರ್ಸ್‌ಗಳಿರುವ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ ಜತೆ ಮಾತನಾಡಿ ಆದಷ್ಟು ಕಡಿಮೆ ಶುಲ್ಕದಲ್ಲಿ ವ್ಯವಸ್ಥೆ ಮಾಡಿಕೊಡುತ್ತಾನೆ’ ಎಂದು ಟಾಮ್ ಮಾವ ರಾಯ್ ಅಬ್ರಾಹಂ ವಿವರಿಸಿದರು.

‘ಈಗಾಗಲೇ ಒಂದು ಹಂತದಲ್ಲಿ 30 ದಾದಿಯರನ್ನು ಜರ್ಮನಿಗೆ ಕಳುಹಿಸಿ ಯಶಸ್ವಿಯಾಗಿ ಕೋರ್ಸ್ ಮಾಡಿಸಿದ್ದ ಅಳಿಯ, ಈಗ ಎರಡನೇ ಹಂತದಲ್ಲಿ 32 ದಾದಿಯರನ್ನು ಕಳುಹಿಸಲು ಮುಂದಾಗಿದ್ದ. ಕೇರಳದಲ್ಲಿ ‘ವಿದೇಶಿ ಭಾಷೆಗಳ ಕಲಿಕಾ ಕೇಂದ್ರ’ ನಡೆಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಳಿಯನ ಈ ಬೆಳವಣಿಗೆ ಸಹಿಸಲು ಆಗಿರಲಿಲ್ಲ. ಹೀಗಾಗಿ, ತನ್ನ ಕುತಂತ್ರ ಬುದ್ಧಿಯಿಂದ ಟಾಮ್‌ನನ್ನು ಮಾನವ ಸಾಗಣೆಯ ಜಾಲಕ್ಕೆ ಸಿಲುಕಿಸಿದ್ದಾನೆ.’

‘ಗುಪ್ತಚರ ಇಲಾಖೆಯಲ್ಲಿರುವ ಇಬ್ಬರು ಮಲಯಾಳಿ ಅಧಿಕಾರಿಗಳು ಆ ವ್ಯಕ್ತಿಗೆ ಆಪ್ತರು. ಅವರ ಮೂಲಕ ವಲಸೆ ವಿಭಾಗಕ್ಕೆ ಕರೆ ಮಾಡಿಸಿ, ‘ಟಾಮ್ ಮೋನಿ ಎಂಬಾತ, 32 ದಾದಿಯರನ್ನು ವಿದೇಶಕ್ಕೆ ಸಾಗಣೆ ಮಾಡುತ್ತಿದ್ದಾನೆ’ ಎಂದು ಹೇಳಿಸಿದ್ದಾನೆ. ಅದನ್ನು ಗಂಭೀರವಾಗಿ ಪರಿಗಣಿಸಿದ ವಲಸೆ ವಿಭಾಗದ ಅಧಿಕಾರಿಗಳು, ಅಳಿಯನನ್ನು ಬಂಧಿಸಿದ್ದಾರೆ’ ಎಂದು ಅಬ್ರಹಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT