ಕುಖ್ಯಾತಿಯ ಕಳಂಕ ಕಳಚುವ ಆಶಯ..!

7
ಪೊಲೀಸರ ಮುನ್ನುಡಿಗೆ ಗ್ರಾಮಸ್ಥರ ಸಾತ್; ಕುತೂಹಲ ಕೆರಳಿಸಿದ ಶಾಂತಿಗಾಗಿ ಸಂಧಾನ ಪ್ರಕ್ರಿಯೆ

ಕುಖ್ಯಾತಿಯ ಕಳಂಕ ಕಳಚುವ ಆಶಯ..!

Published:
Updated:

ಉಮರಾಣಿ: ಭೈರಗೊಂಡ, ಚಡಚಣ ಕುಟುಂಬಗಳ ದ್ವೇಷಾಗ್ನಿಯ ಕಿಚ್ಚಿಗೆ; ಆರು ದಶಕಗಳಿಂದ ಭೀಮಾ ತೀರದ ಉಮರಾಣಿಯಲ್ಲಿ ನಡೆದಿರುವ ಕೊಲೆ, ಬೆದರಿಕೆ, ಹತ್ಯಾಕಾಂಡಕ್ಕೆ ಇತಿಶ್ರೀ ಹಾಕಲು ಗುರುವಾರ ಪೊಲೀಸರು ಮುನ್ನುಡಿ ಬರೆದರು.

ಗ್ರಾಮದಲ್ಲಿ ಪೊಲೀಸ್‌ ಜನಸಂಪರ್ಕ ಸಭೆ ನಡೆಸಿ, ರೌಡಿ ಶೀಟರ್‌ಗಳು, ಅವರ ಕುಟುಂಬದವರು ಸುತ್ತಮುತ್ತಲ ಗ್ರಾಮಸ್ಥರನ್ನು ಆಹ್ವಾನಿಸಿ, ಅಪರಾಧ ಕೃತ್ಯ ನಡೆಸುವುದರಿಂದ ಎದುರಿಸಬೇಕಾಗುವ ಸಂಕಷ್ಟ, ತೊಡಕುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಗನ್‌ ಸಂಸ್ಕೃತಿ ಬದಲು, ಪೆನ್‌ ಸಂಸ್ಕೃತಿ ಬಳಸಿ. ಬೆಳೆಸಿ. ಮಣ್ಣಿನ ಗುಣ ಹಸಿರಿದೆ. ಕೆಂಪುಗೊಳಿಸಬೇಡಿ ಎಂಬ ಕಿವಿಮಾತುಗಳ ಜತೆ ಜತೆಯಲ್ಲೇ ಖಡಕ್‌ ಎಚ್ಚರಿಕೆಯನ್ನು ನೆರೆದಿದ್ದ ಜನಸ್ತೋಮಕ್ಕೆ ರವಾನಿಸಿದರು.

ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಭೈರಗೊಂಡ, ಸಂಗಮೇಶ ಬಿರಾದಾರ ‘ದ್ವೇಷ ಬಿಟ್ಟು ಬಿಡಿ. ಸಹೋದರತ್ವದ ಸೆಲೆಯಲ್ಲಿ ಎಲ್ಲರೂ ಬದುಕೋಣ. ಹಂತಕರು ಎಂದು ಕರೆಸಿಕೊಳ್ಳೋದು ಬ್ಯಾಡ. ಭೀಮಾ ತೀರದ ಅಧಿಕಾರಿಗಳು, ತಜ್ಞರು ಎನಿಸಿಕೊಳ್ಳೋಣ’ ಎಂದು ಸಭೆಯಲ್ಲೇ ಊರ ಹಿರಿಯರಿಗೆ ಮನವಿ ಮಾಡಿದರು.

‘ಭೀಮಾ ತೀರದ ಹಂತಕರು’ ಎಂಬುದನ್ನು ತನ್ನ ಹೊಟ್ಟೆಪಾಡಿಗಾಗಿ ವ್ಯಕ್ತಿಯೊಬ್ಬ ಸೃಷ್ಟಿಸಿದ ಪಟ್ಟವದು. ಇದನ್ನು ಕಳಚಬೇಕಿದೆ. ಈಗಲೂ ಮಾಧ್ಯಮದವರು ಇದೇ ಪದ ಬಳಸುವುದು ನಮಗೆ ನೋವುಂಟು ಮಾಡುತ್ತಿದೆ. ನಾವು ಹೃದಯವಂತರಿದ್ದೇವೆ. ನಮ್ಮೂರಿನ ಇತಿಹಾಸ ಶರಣೆ ಗುಡ್ಡಾಪುರದ ದಾನಮ್ಮನೊಂದಿಗೆ ತಳುಕು ಹಾಕಿಕೊಂಡಿದೆ’ ಎಂದು ಗ್ರಾಮದ ಮುರುಘೇಂದ್ರ ಶಾಸ್ತ್ರಿ ಹೇಳಿದರು.

ಆರಂಭದಲ್ಲೇ ಹಿನ್ನಡೆ: ಶಾಂತಿ ಸ್ಥಾಪನೆಗಾಗಿ ಮುನ್ನುಡಿ ಬರೆದ ಆರಂಭದ ದಿನವೇ, ಎರಡೂ ಕುಟುಂಬದ ಪ್ರಮುಖರನ್ನು ವೇದಿಕೆಯಲ್ಲೇ ಹಸ್ತಲಾಘವ ಮಾಡಿಸಿ, ಪರಸ್ಪರ ಹೂವು ವಿನಿಮಯ ಮಾಡಿಕೊಂಡು ‘ಪ್ರೀತಿಯ ಸಂಬಂಧ’ ಬೆಸೆಯುವ ಆಲೋಚನೆಯನ್ನು ಐಜಿಪಿ ಹೊಂದಿದ್ದರು.

ಇದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಇದಕ್ಕೆ ಪ್ರಸಕ್ತ ಸನ್ನಿವೇಶದಲ್ಲಿ ಎರಡೂ ಕುಟುಂಬಗಳು ಸಮ್ಮತಿಸಲಿಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಸಾರ್ವಜನಿಕ ಸಭೆಯಲ್ಲಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಧರ್ಮರಾಜ ಚಡಚಣ ಹಾಗೂ ನಿಗೂಢವಾಗಿ ಕೊಲೆಯಾಗಿರುವ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಸಹ ಹಾಜರಿದ್ದರು. ಎರಡೂ ಕುಟುಂಬಗಳ ಸದಸ್ಯರು ಸಭೆಯಲ್ಲಿದ್ದರು. ಈ ಅವಕಾಶ ಬಳಸಿಕೊಂಡು ಪೊಲೀಸರು ಬಹಿರಂಗವಾಗಿಯೇ ರಾಜಿಯ ಯತ್ನ ನಡೆಸಬೇಕಿತ್ತು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರೊಬ್ಬರು ತಿಳಿಸಿದರು.

ಹಗೆತನದ ಹಿನ್ನೆಲೆ: ಹೆಣ್ಣಿನ ವಿಷಯಕ್ಕೆ ಸಂಬಂಧಿಸಿದಂತೆ ಉಮರಾಣಿಯ ಭೈರಗೊಂಡ, ಚಡಚಣ ಕುಟುಂಬಗಳ ನಡುವೆ 1959ರಲ್ಲಿ ಮೊದಲ ಅಪರಾಧ ಕೃತ್ಯ ನಡೆದಿರುವುದು ಪೊಲೀಸ್‌ ದಾಖಲೆಗಳಲ್ಲಿ ನಮೂದಾಗಿದೆ. ನಂತರ 1966, 1988, 1994, 2004, 2008, 2017ರಲ್ಲಿ ದ್ವೇಷಾಗ್ನಿಗಾಗಿ ಎರಡೂ ಕುಟುಂಬದ ಹಲವರು ಬಲಿಯಾಗಿದ್ದಾರೆ.

ಇದರ ನಡುವೆ ಹಲವು ಹತ್ಯೆ ನಡೆದಿದ್ದರೂ, ಬೆಳಕಿಗೆ ಬಂದಿಲ್ಲ. ಈ ಎರಡೂ ಕುಟುಂಬಗಳ ಬೆಂಬಲಿಗರಲ್ಲೂ ಬಹುತೇಕರು ಮನೆತನಗಳ ನಡುವಿನ ಹಗೆತನಕ್ಕೆ ಮಣ್ಣಲ್ಲಿ ಮಣ್ಣಾಗಿದ್ದಾರೆ. ಆರಂಭದ ದಿನಗಳಲ್ಲಿ ಎರಡೂ ಕುಟುಂಬಗಳು ಅಪರಾಧ ಕೃತ್ಯಗಳಿಗೆ ಸುಲಿಗೆಯನ್ನೇ ದಂಧೆಯನ್ನಾಗಿಸಿಕೊಂಡಿದ್ದವು.

ಮರಳು ಮಾಫಿಯಾ ಆರಂಭಗೊಂಡ ಬಳಿಕ ಅಪರಾಧ ಲೋಕದ ಚಿತ್ರಣವೇ ಬದಲಾಯ್ತು. ಭೈರಗೊಂಡ ಕುಟುಂಬ ಆರ್ಥಿಕವಾಗಿ ಸಬಲರಾದರೆ, ಚಡಚಣ ಕುಟುಂಬ ನೆಲೆ ಕಳೆದುಕೊಂಡು ಆಸರೆಗೂ ತಲೆ ಮರೆಸಿಕೊಂಡು ಅಲೆದಾಟ ನಡೆಸಿತ್ತು.

*
ಇದೀಗ ಶಾಂತಿ ಪ್ರಕ್ರಿಯೆ ಆರಂಭಗೊಂಡಿದೆ. ಗುಂಡಿನ ಶಬ್ದ ಇಲ್ಲಿ ನಿಲ್ಲಬೇಕಿದೆ. ಎರಡೂ ಕುಟುಂಬ, ಗುಂಪಿನ ಜತೆ ಮಾತನಾಡುವಂತೆ ಸ್ಥಳೀಯ ಡಿವೈಎಸ್‌ಪಿ, ಸಿಪಿಐಗೆ ಸೂಚಿಸಿರುವೆ.
–ಅಲೋಕ್‌ಕುಮಾರ್‌, ಉತ್ತರ ವಲಯ ಐಜಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !