ನೀರಿನಲ್ಲಿ ಬಸ್‌; ಕಾನನದಲ್ಲಿ ಕಳೆದ ಕರಾಳ ರಾತ್ರಿ

7
ಪ್ರಕೃತಿ ವಿಕೋಪದ ಸಂದರ್ಭ ಕೆಎಸ್‌ಆರ್‌ಟಿಸಿ ಚಾಲಕ– ನಿರ್ವಾಹಕರ ರೋಚಕ ಅನುಭವ

ನೀರಿನಲ್ಲಿ ಬಸ್‌; ಕಾನನದಲ್ಲಿ ಕಳೆದ ಕರಾಳ ರಾತ್ರಿ

Published:
Updated:
Deccan Herald

ಬೆಂಗಳೂರು: ‘ಮುತ್ತಣ್ಣ ಚೆಕ್‌ಪೋಸ್ಟ್‌ ದಾಟಿ ಸ್ವಲ್ಪ ಮುಂದೆ ಬಂದಿದ್ದೆ. ದಟ್ಟ ಕಾಡಿನೊಳಗಿನ ಮಾರ್ಗದಲ್ಲಿ ಇದ್ದಕ್ಕಿದ್ದಂತೆಯೇ ನೀರು ರಭಸವಾಗಿ ನುಗ್ಗಿತು. ಸೈಲೆನ್ಸರ್‌ನ ಒಳಗೆ ನೀರು ನುಗ್ಗಿ ಎಂಜಿನ್‌ ಆಫ್‌ ಆಯಿತು. ಇತ್ತ ಹೆಡ್‌ಲೈಟ್‌ವರೆಗೂ ನೀರು ಆವರಿಸಿ ಮುಂದೆ ಏನೂ ಕಾಣಿಸದಾಯಿತು. ಇದ್ದಕ್ಕಿದ್ದಂತೆಯೇ ಗಾಡಿ ಬಲಭಾಗಕ್ಕೆ ಸೆಳೆಯಲ್ಪಟ್ಟಿತು. ಹಾಗೇ ಜರುಗಿದ ಗಾಡಿ ರಸ್ತೆಯ ಅಂಚಿನ ಸ್ವಲ್ಪ ತಗ್ಗಿಗೆ ಬಂದು ನಿಂತಿತು...’

– ದೇವರು ದಯಾಮಯ, ನಮ್ಮನ್ನು ರಕ್ಷಿಸಿದ. ಬೆಂಗಳೂರು– ಕ್ಯಾಲಿಕಟ್‌ ನಡುವೆ ಓಡಾಡುವ ಕೆಎಸ್‌ಆರ್‌ಟಿಸಿಯ ಸ್ಕ್ಯಾನಿಯಾ ಬಸ್‌ ಚಾಲಕ ರಿಯಾಜ್‌ ಅಹಮದ್‌ ಬಿಚ್ಚಿಟ್ಟ ಅನುಭವದ ಕಥೆಯಿದು. ಕ್ಯಾಲಿಕಟ್‌ನಿಂದ ವಾಪಸ್‌ ಬರುವ ಸಂದರ್ಭ ಆ. 15– 16ರ ರಾತ್ರಿ 11.45ರ ವೇಳೆಗೆ ಅಡಿವಾರಂ ಎಂಬ ಸ್ಥಳಕ್ಕೆ ಸಮೀಪ ರಾತ್ರಿ ಕಾಡಿನ ನಡುವೆ ಕಳೆದ ಕಥೆಯನ್ನು ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡರು. 

‘ಗಾಡಿ ಸಂಪೂರ್ಣ ಸ್ಥಗಿತಗೊಂಡಾಗ ಕೇರಳ ಪೊಲೀಸರಿಗೆ ಕರೆ ಮಾಡಿದೆವು. 20 ನಿಮಿಷಗಳಲ್ಲಿ ಅವರು ಸ್ಥಳಕ್ಕಾಗಮಿಸಿ ನಮ್ಮ ವಾಹನದಲ್ಲಿದ್ದ 35 ಪ್ರಯಾಣಿಕರನ್ನು ರಕ್ಷಿಸಿ ಪ್ರಯಾಣಿಕರನ್ನು ಮೈಸೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿದರು’.

‘ನಮ್ಮ ಗಾಡಿಯನ್ನು ಬೇರೊಂದು ವಾಹನ ತರಿಸಿ ಅಲ್ಲಿಂದ ಎಳೆದುಕೊಂಡೇ ತಂದು ಬೆಂಗಳೂರಿನ ಸ್ಕ್ಯಾನಿಯಾ ಗ್ಯಾರೇಜ್‌ಗೆ ಹಾಕಿದೆವು. ಕೇರಳ ಪೊಲೀಸರು, ಅಧಿಕಾರಿಗಳು, ಸ್ಥಳೀಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು’ ಎಂದು ಭಾವುಕರಾದರು.

ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಸ್ಲೀಪರ್‌ ಬಸ್‌ನ ನಿರ್ವಾಹಕ ಉರ್ಬನ್‌ ಅಲ್ಫೋನ್ಸ್‌ ಅವರ ಅನುಭವ ಇನ್ನೂ ಭಿನ್ನವಾಗಿತ್ತು. ‘ಸೋಮವಾರ ರಾತ್ರಿ 2.30ರ ವೇಳೆಗೆ ಶಿರಾಡಿ ಘಾಟ್‌ನ ದೊಡ್ಡತಪ್ಪಲೆ ಎಂಬಲ್ಲಿ ಸಿಲುಕಿಕೊಂಡೆವು. ಅನತಿ ದೂರದಲ್ಲೇ ಭೂಕುಸಿತವಾ
ಗಿತ್ತು. ಮಹಿಳೆಯರು, ಮಕ್ಕಳಿಗೆ ಶೌಚಕ್ಕೆ ಹೋಗುವುದೇ ಸಮಸ್ಯೆ. ಬೆಳಗಿನ ಜಾವ 5ಕ್ಕೆ ಎಲ್ಲರನ್ನೂ ಎಚ್ಚರಿಸಿ ಶೌಚಕ್ಕೆ ಹೋಗುವಂತೆ ಹೇಳಿದೆ. ನಮ್ಮಲ್ಲಿ ಹಾಗೂ ಪ್ರಯಾಣಿಕರ ಬಳಿ ಇದ್ದ ಆಹಾರ ಹಂಚಿಕೊಂಡು ತಿಂದೆವು. ಬೆಳಕು ಹರಿದಾಗ ಪ್ರಯಾಣಿಕರ ಜತೆ ಸುಮಾರು 4 ಕಿ.ಮೀ ನಡೆದು ಒಂದು ಹೋಟೆಲ್‌ ಬಳಿ ಬಂದೆವು. ಅಲ್ಲಿಯೂ ಸಾಕಷ್ಟು ಆಹಾರ ಇರಲಿಲ್ಲ. ಇದ್ದುದರಲ್ಲೇ ಹಂಚಿಕೊಂಡು ಹೊಟ್ಟೆ ತಣಿಸಿಕೊಂಡೆವು. ಮಧ್ಯಾಹ್ನದ ವೇಳೆಗೆ ಮಾರ್ಗ ಸ್ವಲ್ಪ ತೆರವಾಯಿತು. ಉಪ್ಪಿನಂಗಡಿ ಬಳಿ ಭಾರಿ ನೀರು. ಅಲ್ಲಿ ಮತ್ತೆ ಕಾದು ಪ್ರವಾಹ ಇಳಿಮುಖವಾದ ಬಳಿಕ ಹೊರಟೆವು. ಅಂತೂ ಮಂಗಳೂರು ತಲುಪಲು 14 ಬೇಕಾಯಿತು’ ಎಂದು ನಿಟ್ಟುಸಿರುಬಿಟ್ಟರು.

***

26 ವರ್ಷಗಳ ವೃತ್ತಿ ಜೀವನದಲ್ಲಿ ಈ ರೀತಿಯ ಅನುಭವ ಆಗಿಲ್ಲ. ಒಂದೆರಡು ಗಂಟೆ ಪ್ರಯಾಣ ವಿಳಂಬವಾಗಿದೆ ಅಷ್ಟೆ. ಆದರೆ ಇದು ಮಾತ್ರ ವಿಶೇಷವಾದದ್ದು.

– ಉರ್ಬಾನ್‌, ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ, ಮಂಗಳೂರು

ಒಬ್ಬ ಪ್ರಯಾಣಿಕರಿಗೆ ತೊಂದರೆಯಾಗಿದ್ದರೂ ನಿಗಮಕ್ಕೆ ಕೆಟ್ಟ ಹೆಸರು ಬರುತ್ತಿತ್ತು. ಇಡೀ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದೇವೆ.

– ರಿಯಾಜ್‌ ಅಹಮದ್‌, ಚಾಲಕ ಬೆಂಗಳೂರು– ಕ್ಯಾಲಿಕಟ್‌ ಬಸ್

ಬರಹ ಇಷ್ಟವಾಯಿತೆ?

 • 27

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !