7
ವಿಧಾನಪರಿಷತ್‌ನಲ್ಲಿ ಐವನ್‌ ಡಿಸೋಜಾ ಪ್ರಶ್ನೆ

‘ಫುಲ್ ಟ್ರೀಟ್‌ಮೆಂಟ್‌ಗೆ ಎಲ್ಲಿಗೆ ಹೋಗಬೇಕು...’

Published:
Updated:

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಯಲ್ಲಿ  ಕ್ಯಾನ್ಸರ್‌ಗೆ ಹಾಫ್‌ ಟ್ರೀಟ್‌ಮೆಂಟ್‌ ಸಿಗುತ್ತದೆ. ಫುಲ್‌ ಟ್ರೀಟ್‌ಮೆಂಟ್‌ಗೆ ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕು. ಆದರೆ, ಅಲ್ಲಿ ರೋಗಿಗಳನ್ನು ಹತ್ತಿರ ಸೇರಿಸದೇ ವಾಪಸ್‌ ಕಳಿಸುತ್ತಾರೆ. ಹಾಗಿದ್ದರೆ, ರೋಗಿಗಳು ಎಲ್ಲಿಗೆ ಹೋಗಬೇಕು ಹೇಳಿ ಸ್ವಾಮಿ’.

ವಿಧಾನಪರಿಷತ್ತಿನಲ್ಲಿ ಇಂತಹದ್ದೊಂದು ಗಂಭೀರ ಪ್ರಶ್ನೆ ಎತ್ತಿದವರು ಕಾಂಗ್ರೆಸ್‌ನ ಐವನ್‌ ಡಿಸೋಜಾ. 

ಕ್ಯಾನ್ಸರ್‌ ಮಾತ್ರವಲ್ಲದೆ, ಬಹಳಷ್ಟು ಗಂಭೀರ ಸ್ವರೂಪದ ಕಾಯಿಲೆಗಳ ಚಿಕಿತ್ಸೆ ಸ್ಥಿತಿಗತಿ ಇದು ಎಂದು ಅವರು ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರದ ಗಮನ ಸೆಳೆದರು. 

‘ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ 4 ನೇ ಹಂತ ತಲುಪಿದ ಕ್ಯಾನ್ಸರ್‌ ರೋಗಿಗೆ ಕಿಮೋಥೆರಪಿವರೆಗಿನ ಚಿಕಿತ್ಸೆ ನೀಡಲಾಗುತ್ತದೆ. ಆ ನಂತರದ ಚಿಕಿತ್ಸೆಯಾಗಿರುವ ರೇಡಿಯೊ ಥೆರಪಿ ಅಲ್ಲಿ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಲಹೆ ನೀಡುತ್ತಾರೆ. ಖಾಸಗಿ ಆಸ್ಪತ್ರೆಗೆ ರೋಗಿ ಹೋದರೆ, ಹಿಂದೆ (ಸರ್ಕಾರಿ ಆಸ್ಪತ್ರೆಯಲ್ಲಿ) ಯಾವ ರೀತಿ ಚಿಕಿತ್ಸೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ನಾವು ಮುಂದಿನ ಹಂತದ ಚಿಕಿತ್ಸೆ ನೀಡಲು ಆಗುವುದಿಲ್ಲ. ಕೋಡ್‌ನಲ್ಲೂ ಅಂತಹ ಚಿಕಿತ್ಸೆ ನಮೂದಾಗಿಲ್ಲ ಎಂದೂ ಮುಲಾಜಿಲ್ಲದೆ ಹೇಳುತ್ತಾರೆ. ಮಂಗಳೂರಿನಲ್ಲಿ ಹಲವು ರೋಗಿಗಳಿಗೆ ಈ ರೀತಿ ಆಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಆದರೆ, ಖಾಸಗಿ ಆಸ್ಪತ್ರೆಯವರು ರೋಗಿಗಳನ್ನು ಒಳಗೆ ಕರೆದು ಗುಟ್ಟಾಗಿ ಹೇಳುವುದೇ ಬೇರೆ. ಸರ್ಕಾರದಿಂದ ದುಡ್ಡು ಬರುವುದಿಲ್ಲ. ಅವರು ಕೊಡುವುದು ಕಡಿಮೆ. ಐವತ್ತು ಸಾವಿರಕ್ಕೆ ಯಾರು ಚಿಕಿತ್ಸೆ ನೀಡುತ್ತಾರೆ, ಒಂದೂವರೆ ಲಕ್ಷ ಆಗುತ್ತೆ ರೀ... ಎಂದು ಹೇಳಿ ಸಾಕಷ್ಟು ರೋಗಿಗಳನ್ನು ಹಿಂದಕ್ಕೆ ಕಳುಹಿಸುತ್ತಾರೆ’ ಎಂದು ಐವನ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ, ‘ಹಿಂಬದಿ ಬರಹ ಇದ್ದರೆ, ಖಾಸಗಿ ಆಸ್ಪತ್ರೆಯವರು ರೋಗಿಗೆ ಚಿಕಿತ್ಸೆ ಕೊಡಬೇಕು, ನಿರಾಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರಗಳ ನಿಗದಿ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಜತೆ ಮಾತುಕತೆ ನಡೆಸಿದ್ದು, 416 ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸುವ ದರಗಳಿಗೆ ಒಪ್ಪಿಗೆ ಸೂಚಿಸಿವೆ’ ಎಂದರು.

ಹಳೆಯ ಕಾರ್ಡ್‌ಗಳಿಗೂ ಮಾನ್ಯತೆ
ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ ಪೂರ್ಣ ಪ್ರಮಾಣದಲ್ಲಿ ಹಂಚುವವರೆಗೆ ಈ ಹಿಂದೆ ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ ಕಾರ್ಡ್‌ಗಳನ್ನು ಬಳಸಬಹುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಆರೋಗ್ಯ ಕರ್ನಾಟಕ ಯುನಿವರ್ಸಲ್‌ ಹೆಲ್ತ್‌ ಸ್ಕೀಂ ಕಾರ್ಡ್‌ಗಳನ್ನು ವಿತರಿಸುವ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. 1.20 ಕೋಟಿ ಕಾರ್ಡ್‌ಗಳನ್ನು ಹಂಚಬೇಕಾಗಿದ್ದು, ಅದರಲ್ಲಿ ಈಗಾಗಲೇ 2.20 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಯೋಜನೆಗೆ ₹800 ಕೋಟಿ ನಿಗದಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !