ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರು ಸಾಹಿತಿ, ಮತ್ತೊಬ್ಬರು ಕ್ರೀಡಾಪಟು

ಗುಂಡ್ಲುಪೇಟೆ ಕ್ಷೇತ್ರ: ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವರೇ ಅಧಿಕ
Last Updated 7 ಮೇ 2018, 8:41 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತ್ರಿಕೋನ ಸ್ಪರ್ಧೆಯಿಂದ ಗಮನ ಸೆಳೆದಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹಿನ್ನೆಲೆಯು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿನ ಮೂರೂ ಅಭ್ಯರ್ಥಿಗಳಿಗೆ ರಾಜಕೀಯ ಹಿನ್ನೆಲೆ ಇದ್ದರೂ ಯಾರು ಸಹ ರಾಜಕಾರಣಕ್ಕೆ ಬರಬೇಕು ಎಂದು ಬಂದಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಇಂದು ಶಾಸನ ಸಭೆಯ ಪ್ರವೇಶಕ್ಕಾಗಿ ಕಣದಲ್ಲಿದ್ದಾರೆ.

ಗೃಹಿಣಿಯಾಗಿ, ಸಾಹಿತಿಯಾಗಿದ್ದು ಎಂ.ಸಿ.ಮೋಹನಕುಮಾರಿ ಪತಿ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಸಾವಿನಿಂದ ರಾಜಕಾರಣಕ್ಕೆ ಬಂದರು. ಇವರ ಎದುರಾಳಿ ಸಿ.ಎಸ್.ನಿರಂಜನಕುಮಾರ್ ಅವರಿಗೆ ಚಿತ್ರರಂಗದ ಮೇಲೆ ಒಲವಿದ್ದು, ಶಾಲಾ ಅವಧಿಯಲ್ಲಿ ಕ್ರೀಡಾಪಟುವಾಗಿದ್ದರೂ ಆಕಸ್ಮಿಕವಾಗಿಯೇ ಈ ರಂಗಕ್ಕೆ ಬರಬೇಕಾಯಿತು. ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದವರು ಜೆಡಿಎಸ್ ಅಭ್ಯರ್ಥಿ ಗುರುಪ್ರಸಾದ್. ಅವರ ತಂದೆ, ತಾಯಿ ಸ್ಥಳೀಯ ಸಂಸ್ಥೆಗಳ ಮಟ್ಟದ ರಾಜಕಾರಣದಲ್ಲಿದ್ದರು. ಇದೀಗ ಅವರು ಶಾಸನಸಭೆಯ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.

ಸಿ.ಎಸ್.ನಿರಂಜನಕುಮಾರ್: ಸಿ.ಎಸ್.ನಿರಂಜನಕುಮಾರ್ ಅವರ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿದ್ದರು ಸಹ ಇವರು ಮಾತ್ರ ಆಕಸ್ಮಿಕವಾಗಿ ರಾಜಕೀಯ ಬಂದವರು. ಇವರ ತಂದೆ ಸಿ.ಎಂ.ಶಿವಬಸಪ್ಪ ಅವರು 1997ರಲ್ಲಿ ಪಕ್ಷೇತರವಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ತಂದೆಯವರು ಚಿತ್ರಮಂದಿರದ ಮಾಲೀಕರಾಗಿದ್ದರಿಂದ ನಿರಂಜನ ಕುಮಾರ್ ಅವರಿಗೆ ಚಿತ್ರರಂಗದ ಮೇಲೆ ಹೆಚ್ಚಿನ ಒಲವಿತ್ತು. ಶಾಲಾ ಅವಧಿಯಲ್ಲಿ ಇವರು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿ ಆವಧಿಯಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲೂ ಇವರು ಗುರುತಿಸಿಕೊಂಡಿರಲಿಲ್ಲ. ಬದಲಿಗೆ ಕ್ರೀಡೆಯೇ ಇವರ ಉಸಿರಾಗತ್ತು. ಪದವಿ ವಿದ್ಯಾಭ್ಯಾಸ ಮುಗಿದ ಬಳಿಕ 2005ರಲ್ಲಿ ಮೊದಲ ಬಾರಿಗೆ ತಂದೆಯ ಒತ್ತಡಕ್ಕೆ ಮಣಿದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾದರು. ಅ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ, ಬಳಿಕ 2008, 2013 ಮತ್ತು 2017ರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತರು. ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಇವರು ಒಂದು ಬಾರಿ ಕೆಜೆಪಿಯಿಂದಲೂ ಸ್ಪರ್ಧಿಸಿದ್ದರು.

ಶಾಲಾ ಅವಧಿಯಿಂದಲೇ ಕ್ರೀಡೆಯ ಬಗ್ಗೆ ಒಲವಿರುವ ಇವರು ಬಿಡುವಿನ ಸಂದರ್ಭಗಳಲ್ಲಿ ಇಂದಿಗೂ ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ತಾಲ್ಲೂಕಿನ ಯುವಕರೊಂದಿಗೆ ಹೆಚ್ಚಿನ ಒಡನಾಟವಿದ್ದು, ಯುವಕರಿಗೆ ಯಾವುದೇ ತೊಂದರೆಯಾದರೂ ಅವರ ಸಹಾಯಕ್ಕೆ ಮೊದಲಿಗರಾಗಿ ನಿಲ್ಲುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯ.

ಎಂ.ಸಿ.ಮೋಹನಕುಮಾರಿ: ರಾಜಕೀ ಯದ ಗಂಧವೇ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಗೃಹಿಣಿ, ಸಾಹಿತಿಯಾಗಿದ್ದ ಎಂ.ಸಿ.ಮೋಹನಕುಮಾರಿ ಅವರು ಪತಿಯ ಅಕಾಲಿಕ ಮರಣದಿಂದ ರಾಜಕೀಯಕ್ಕೆ ಬಂದವರು. ಪತಿ ಎಚ್.ಎಸ್.ಮಹದೇವಪ್ರಸಾದ್ ಅವರು ಕಳೆದ 25 ವರ್ಷಗಳಿಂದ ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದರೂ ಮೋಹನಕುಮಾರಿ ಮಾತ್ರ ರಾಜಕೀಯದ ವಿಷಯಕ್ಕೆ ಬಂದವರಲ್ಲ. ಜತೆಗೆ, ಇಲ್ಲಿನ ಜನರ ಒಡನಾಟದಲ್ಲೂ ಇವರು ಇರಲಿಲ್ಲ. ಕೆಲ ಮುಖಂಡರು ಮತ್ತು ಹತ್ತಿರದವರು ಮಾತ್ರ ಇವರನ್ನು ಬಲ್ಲವರಾಗಿದ್ದರು.

2017ರ ಜನವರಿಯಲ್ಲಿ ಎಚ್.ಎಸ್.ಮಹದೇವಪ್ರಸಾದ್ ಅವರು ಅಕಾಲಿಕ ಮರಣಕ್ಕೆ ತುತ್ತಾದ್ದರಿಂದ ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಇವರು ಬರಬೇಕಾಯಿತು. ಮೊದಲ ಬಾರಿಗೆ ಸ್ಪರ್ಧಿಸಿದ್ದ ಚುನಾವಣೆಯಲ್ಲಿಯೇ ಗೆದ್ದು, ಶಾಸಕಿ, ಮಂತ್ರಿ, ಜಿಲ್ಲಾ ಮಂತ್ರಿಯಾಗಿ ಪತಿ ಎಚ್.ಎಸ್.ಮಹದೇವಪ್ರಸಾದ್ ಅವರು ಮಾಡುತ್ತಿದ್ದ ಅಭಿವೃದ್ಧಿ ಕೆಲಸಗಳಿಗೆ ನೀರೆರೆದರು. ಕ್ಷೇತ್ರದ ಜನರ ಪ್ರೀತಿ ಗಳಿಸಿ ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರ ರಾಜಕೀಯ ಕೆಲಸಗಳಿಗೆ ಪುತ್ರ ಗಣೇಶ್‌ಪ್ರಸಾದ್ ಬೆನ್ನೆಲುಬಾಗಿದ್ದಾರೆ.

ವಿದ್ಯಾರ್ಥಿ ದೆಸೆಯಿಂದ ರಾಜಕೀಯದ ಬಗ್ಗೆ ಯಾವುದೇ ಒಲವು ಇವರಿಗೆ ಇರಲಿಲ್ಲ. ಬದಲಿಗೆ, ಸಾಹಿತ್ಯದ ಮೇಲೆ ವಿಶೇಷವಾದ ಆಸಕ್ತಿ ಇವರಿಗಿತ್ತು. ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು 2013ನೇ ಸಾಲಿನಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪಿ.ಎಚ್‍ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.

ರಾಜ್ಯದ ಸಾಧಕ ಮಹಿಳೆಯರ ಬಗ್ಗೆ ಒಂದು ಪುಸ್ತಕವನ್ನು ಹೊರ ತಂದಿದ್ದಾರೆ. ಅನೇಕ ಚಿಂತನಾ ಸಮಾವೇಶಗಳಲ್ಲಿ ಭಾಗವಹಿಸಿ ಮಹಿಳೆಯರ ಪರವಾದ ನಿಲುವನ್ನು ಮಂಡಿಸಿದ್ದಾರೆ. ರಾಜಕೀಯ ಹೊರತಾಗಿ ಮನೆಯ ಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಇವರು ಮನೆಯಲ್ಲಿ ಸಾಮಾನ್ಯ ಗೃಹಿಣಿಯಂತೆ ಇರುತ್ತಾರೆ.

ಗುರುಪ್ರಸಾದ್: ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದವರು ಜೆಡಿಎಸ್ ಅಭ್ಯರ್ಥಿ ಗುರುಪ್ರಸಾದ್. ತಂದೆ ಶಿವನಂದಸ್ವಾಮಿ ಅವರು 1988ರ ಆವಧಿಯಲ್ಲಿ ಪ್ರಧಾನರಾಗಿದ್ದರು, ತಾಯಿ ಆರ್.ಮಹದೇವಮ್ಮ ಅವರು 2002ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದ ಇವರು, ಗ್ರಾಮ ಪಂಚಾಯಿತಿ ಸದಸ್ಯರಾಗಿ 2008ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತರು. ಬಳಿಕ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ತಾಲ್ಲೂಕು ಅಧ್ಯಕ್ಷರಾಗಿ, 2018ರಲ್ಲಿ ಬಿಎಸ್‍ಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಇವರ ತಮ್ಮ ಮಧು ಶಂಕರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಪ್ರಸ್ತುತ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾರೆ. ಗುರುಪ್ರಸಾದ್ ಅವರು ಯುವಕರ ಬಳಗವನ್ನು ಕಟ್ಟಿಕೊಂಡು ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಉಳಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಎಂ.ಮಲ್ಲೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT