ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲ ಮನ್ನಾಗೆ ಕೇಂದ್ರದ ನೆರವು ಕಷ್ಟ’

Last Updated 18 ಜೂನ್ 2018, 17:16 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರೈತರ ಸಾಲಮನ್ನಾಕ್ಕಾಗಿ ಕೇಂದ್ರದಿಂದ ಶೇ 50 ರಷ್ಟು ನೆರವು ಸಿಗುವುದು ಕಷ್ಟ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರದ ಮುಂದೆ ಅಂತಹದ್ದೊಂದು ಬೇಡಿಕೆ ಇಟ್ಟಿರುವುದು ಸರಿಯಲ್ಲ ಎಂದು ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸರ್ಕಾರಗಳು ಕೇಂದ್ರದ ನೆರವು ಪಡೆಯದೇ ಸಾಲಮನ್ನಾ ಮಾಡಿವೆ. ಕುಮಾರಸ್ವಾಮಿ ಕೇಂದ್ರದ ಮೇಲೆ ಹೊಣೆಗಾರಿಕೆ ಹಾಕದೇ ರಾಜ್ಯದ ಹಣಕಾಸು ಇತಿಮಿತಿಯನ್ನು ತಿಳಿದು ಸಾಲ ಮನ್ನಾ ಪ್ರಕಟಿಸಬೇಕಿತ್ತು ಎಂದರು.

ಬಜೆಟ್‌ನಲ್ಲಿ ಪ್ರಕಟಿಸದಿದ್ದರೆ ಹೋರಾಟ: ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಸಾಲಮನ್ನಾ ಪ್ರಕಟಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಯಾಗಿ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಅವರು ಈಗ ದಿನಕ್ಕೊಂದು ಕಾರಣ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲದ್ದಕ್ಕೂ ಕಾಂಗ್ರೆಸ್‌ ಪಕ್ಷವನ್ನು ಕೇಳಬೇಕು ಎಂದು  ಅಪ್ಪ–ಮಕ್ಕಳು ಹೇಳುತ್ತಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಮ್ಮತಿಸಿದರೆ ಮಾತ್ರ ಮುಖ್ಯಮಂತ್ರಿ ಆಗುವುದಾಗಿ ಕರಾರು ಹಾಕಬೇಕಿತ್ತು. ಆದರೆ, ಕುರ್ಚಿ ಆಸೆಯಿಂದ ಗಡಿಬಿಡಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು ಎಂದು ದೂರಿದರು.

ಬಜೆಟ್‌ ಮಂಡನೆ ವಿಚಾರದಲ್ಲೂ ಎರಡೂ ಪಕ್ಷಗಳ ಮಧ್ಯೆ ಕಚ್ಚಾಟ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೊಸ ಬಜೆಟ್‌ ಬೇಡ ಎಂದು ಹೇಳಿದರೆ, ಉಪಮುಖ್ಯಮಂತ್ರಿ ಪರಮೇಶ್ವರ ಹೊಸ ಬಜೆಟ್‌ ಮಂಡನೆ ಆಗಲಿ ಎನ್ನುತ್ತಿದ್ದಾರೆ. ಇದರಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಬಿಎಸ್‌ವೈಗೆ ತಾಳ್ಮೆ ಇರಲಿ

ರೈತರ ಸಾಲ ಮನ್ನಾ ವಿಚಾರವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಯಡಿಯೂರಪ್ಪ ಅವರಿಗೆ ತಾಳ್ಮೆ ಇರಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ಮೂರು ದಿನ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕೆಲಸ ಮಾಡಬೇಕಿತ್ತು. ಆಗ ಏಕೆ ಸಾಧ್ಯವಾಗಲಿಲ್ಲ ಎಂದು ಅವರು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT