ಮಂಗಳವಾರ, ನವೆಂಬರ್ 12, 2019
28 °C
ಆಸ್ತಿಗಾಗಿ ಕೊಲೆ: ತನಿಖೆಗೆ ಮೂರು ಪ್ರತ್ಯೇಕ ತಂಡ ರಚನೆ

ದಂಪತಿ ಹತ್ಯೆ; ನೆಂಟರ ಮೇಲೆ ಶಂಕೆ

Published:
Updated:
Prajavani

ವೈಟ್‌ಫೀಲ್ಡ್: ಮಹದೇವಪುರ ಠಾಣೆ ವ್ಯಾಪ್ತಿಯ ಗರುಡಾಚಾರ್ ಪಾಳ್ಯದಲ್ಲಿ ಚಂದ್ರೇಗೌಡ (63) ಹಾಗೂ ಅವರ ಪತ್ನಿ ಲಕ್ಷ್ಮಮ್ಮ (55) ಎಂಬುವರನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದ್ದು, ಆಸ್ತಿ ವಿಚಾರವಾಗಿ ನೆಂಟರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ಕೆ.ಆರ್.ಪೇಟೆ ತಾಲ್ಲೂಕಿನ ಚಂದ್ರೇಗೌಡ, ನಗರದ ಖಾಸಗಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತ
ರಾಗಿದ್ದರು. ಗರುಡಾಚಾರ್ ಪಾಳ್ಯದಲ್ಲಿ ಒಂದು ಅಂತಸ್ತಿನ ಮನೆ ನಿರ್ಮಿಸಿದ್ದ ದಂಪತಿ, ಕೆಳ ಮಹಡಿಯಲ್ಲಿ ನೆಲೆಸಿದ್ದರು. ಮೊದಲ ಮಹಡಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು. 

‘ದಂಪತಿಗೆ ಮಕ್ಕಳಿರಲಿಲ್ಲ. ಹೆಣ್ಣು ಮಗುವನ್ನು ದತ್ತು ಪಡೆದು ಬೆಳೆಸಿದ್ದ ದಂಪತಿ, ಆಕೆಗೆ ಮದುವೆ ಮಾಡಿಕೊಟ್ಟಿದ್ದಾರೆ. ಮನೆ ಬಾಡಿಗೆಯಿಂದ ಪ್ರತಿ ತಿಂಗಳು ಹಣ ಬರುತ್ತಿತ್ತು. ಸ್ವಂತ ಊರಿನಲ್ಲೂ ಚಂದ್ರೇಗೌಡ ಅವರ ಹೆಸರಿನಲ್ಲಿ ಆಸ್ತಿ ಸಹ ಇತ್ತು’ ಎಂದು ತಿಳಿಸಿದರು.

ಸಂಬಂಧಿಕರ ವಿಚಾರಣೆ: ‘ಚಂದ್ರೇಗೌಡ ಅವರ ಸಂಬಂಧಿಕರು ಬೆಂಗಳೂರು ಹಾಗೂ ಕೆ.ಆರ್‌.ಪೇಟೆಯಲ್ಲಿ ನೆಲೆಸಿದ್ದಾರೆ. ಕೊಲೆ ಸಂಬಂಧ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ದಂಪತಿಯ ಸಂಪೂರ್ಣ ಆಸ್ತಿ ಸಾಕು ಮಗಳಿಗೆ ಹೋಗುತ್ತದೆ. ಅದೇ ಕಾರಣಕ್ಕೆ ಸಂಬಂಧಿಕರೇ ದಂಪತಿಯನ್ನು ಹತ್ಯೆ ಮಾಡಿರುವ ಅನುಮಾನ ಇದೆ. ಆ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ದಸರಾ ವೇಳೆ ಕೆಲ ಸಂಬಂಧಿಕರು, ದಂಪತಿ ಮನೆಗೆ ಬಂದು ಸಿಹಿ ತಿನಿಸು ಕೊಟ್ಟು ಹೋಗಿದ್ದರು. ನಿನ್ನೆ ರಾತ್ರಿಯೂ ಯಾರೋ ನೆಂಟರು ಮನೆಗೆ ಬಂದು ಹೋದ ಮಾಹಿತಿ ಇದೆ. ಅದನ್ನು ಬಿಟ್ಟು ಯಾರೊಬ್ಬರೂ ಮನೆಗೆ ಬಂದಿಲ್ಲ. ಈ ಸಂಬಂಧ ಸ್ಥಳೀಯ ನಿವಾಸಿಗಳಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದರು.

ಮೃತದೇಹ ನೋಡಿದ ಗಿರಣಿ ಮಾಲೀಕ: ‘ದಂಪತಿ ಮನೆ ಎದುರಿನ ಕಟ್ಟಡದಲ್ಲಿ ಶಿವರಾಜು ಎಂಬುವರು ಗಿರಣಿ ನಡೆಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ದಂಪತಿ ಮನೆಯ ಟ್ಯಾಂಕ್ ತುಂಬಿ ನೀರು ಹರಿಯುತ್ತಿತ್ತು. ಅದನ್ನು ನೋಡಿದ್ದ ಶಿವರಾಜು, ಅದನ್ನು ತಿಳಿಸಲು ದಂಪತಿ ಮನೆಗೆ ಹೋಗಿದ್ದರು. ಆಗ ಮೃತದೇಹ ಕಂಡಿದ್ದರು’ ಎಂದು ಪೊಲೀಸರು ವಿವರಿಸಿದರು.

‘ದಂಪತಿಯ ತಲೆ ಹಾಗೂ ಹೊಟ್ಟೆಗೆ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ. ಮೈಮೇಲಿನ ಚಿನ್ನಾಭರಣಗಳು ಹಾಗೇ ಇವೆ. ಮನೆಯ ತಿಜೋರಿಯಲ್ಲಿದ್ದ ವಸ್ತುಗಳು ಚಿಲ್ಲಾಪಿಲ್ಲಿಯಾಗಿದ್ದು, ಆರೋಪಿಗಳು ಯಾವುದೋ ದಾಖಲೆಗಾಗಿ ಹುಡುಕಾಡಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದರು. 

**

ಇದು ಆಸ್ತಿಗಾಗಿ ನಡೆದ ಕೊಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ತನಿಖೆಗಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ
– ಎಂ.ಎನ್.ಅನುಚೇತ್, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ

ಪ್ರತಿಕ್ರಿಯಿಸಿ (+)