ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಹೆಕ್ಕಿ ಬದುಕುವವರಿಗೆ ಸಿಕ್ಕಿತು ಹೈಟೆಕ್‌ ನೆಲೆ

ಹಳೆ ವಸ್ತುಗಳ ಮರು ಬಳಕೆ * ಹಸಿರು ದಳ, ಸೆಲ್ಕೊ ನೆರವು
Last Updated 8 ಜೂನ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಕಸದಿಂದ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಹೆಕ್ಕಿ ನಗರವನ್ನು ಸ್ವಚ್ಛವಾಗಿಡಲು ನೆರವಾಗುವ ಬಹುತೇಕ ಕುಟುಂಬಗಳು ಸರಿಯಾದ ಸೂರು ಹೊಂದಿಲ್ಲ. ಆದರೆ, ಹೆಬ್ಬಾಳ ಸಮೀಪದ ಕುಂತಿಗ್ರಾಮದ ದೇವರಾಜ್‌ ಗೋಸಾಯಿ ಹಾಗೂ ಜಯಾಭಾಯಿ ಕುಟುಂಬ ಮಾತ್ರ ಇದಕ್ಕೆ ಅಪವಾದ.

ಒಂಬತ್ತು ಸದಸ್ಯರು ಇರುವ ಈ ಕುಟುಂಬವೀಗ 35x35 ಅಡಿಯ ನಿವೇಶನದಲ್ಲಿ ಎರಡು ಮಹಡಿಯ ಮನೆಯಲ್ಲಿ ವಾಸಿಸುತ್ತಿದೆ. ಅವರ ಹೊಸ ಮನೆಯ ಗೃಹಪ್ರವೇಶ ಕಳೆದ ವಾರವಷ್ಟೇ ನಡೆಯಿತು. ವರ್ಷದ ಹಿಂದೆ ಶೆಡ್‌ನಲ್ಲಿ ವಾಸಿಸುತ್ತಿದ್ದ ಈ ಕುಟುಂಬವು ಚೊಕ್ಕವಾದ ಮನೆ ಕಟ್ಟಿಕೊಳ್ಳಲು ನೆರವಾಗಿದ್ದು ‘ಹಸಿರು ದಳ’ ಮತ್ತು ಸೆಸ್ಕೊ ಸಂಸ್ಥೆಗಳು.

ಕಳೆದ ವರ್ಷ ಸುರಿದ ಮಳೆಗೆ ಈ ಕುಟುಂಬವು ವಾಸಿಸುತ್ತಿದ್ದ ಶೆಡ್‌ ಕುಸಿದು ಹೋಗಿತ್ತು. ಪಕ್ಕದ ದೇವಸ್ಥಾನವೊಂದರ ಕಟ್ಟೆಯನ್ನೇ ಅವಲಂಬಿಸಬೇಕಾದ ಕರುಣಾಜನಕ ಸ್ಥಿತಿ ನಿರ್ಮಾಣವಾಗಿತ್ತು. ಅಕ್ಷರಶಃ ಬೀದಿಗೆ ಬಿದ್ದಿದ್ದ ಈ ಕುಟುಂಬದ ದಾರುಣ ಸ್ಥಿತಿಯನ್ನು ಅರಿತ ‘ಹಸಿರು ದಳ’ ಹಾಗೂ ‘ಸೆಸ್ಕೊ’ ಸಂಸ್ಥೆಗಳು ದಾನಿಗಳು ನೀಡಿದ ಹಳೆಯ ವಸ್ತುಗಳನ್ನು ಒಟ್ಟುಗೂಡಿಸಿ ಮನೆ ನಿರ್ಮಿಸಿಕೊಟ್ಟಿವೆ.

‘ಕಸ ಆಯುವ ಕಾಯಕದಲ್ಲಿ ತೊಡಗಿರುವವರಿಗೆ ಸರ್ಕಾರದ ವತಿಯಿಂದ ನಿವೇಶನ ನೀಡಿ ಮನೆಯನ್ನೂ ಕಟ್ಟಿಸಿಕೊಡುತ್ತಾರೆ. ಆದರೆ, ಆ ಮನೆಗಳು ಬಾಳಿಕೆ ಬರುವುದಿಲ್ಲ. ಕಳಪೆ ಕಾಮಗಾರಿಯಿಂದಾಗಿಯೇ ನಮ್ಮ ಮನೆ ಕಳೆದ ವರ್ಷದ ಮಳೆಗೆ ನೆಲಸಮವಾಯಿತು’ ಎಂದು ದೇವರಾಜ್‌ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಹೊಸ ಮನೆ ನಿರ್ಮಾಣಕ್ಕೆ ಒಟ್ಟು ₹ 12 ಲಕ್ಷ ಖರ್ಚಾಗಿದೆ. ಅದರಲ್ಲಿ ₹ 7.44 ಲಕ್ಷವನ್ನು ಈ ಎರಡು ಸಂಸ್ಥೆಗಳು ಒದಗಿಸಿವೆ. ಉಳಿದ ವೆಚ್ಚವನ್ನು ಕುಟುಂಬವೇ ಭರಿಸಿದೆ.

‘ಮನೆ ನಿರ್ಮಿಸಲು ದುಬಾರಿ ವಸ್ತುಗಳೇ ಬೇಕಿಲ್ಲ. ಈ ಹಿಂದೆ ಬಳಸಿರುವ ವಸ್ತುಗಳನ್ನೇ ಮರುಬಳಕೆ ಮಾಡಿ ಈ ಮನೆಯ ಶೇ 80ರಷ್ಟು ನಿರ್ಮಾಣ ಪೂರ್ಣಗೊಳಿಸಿದ್ದೇವೆ. ಕೆಲವರು ತಮ್ಮ ಹಳೆ ಮನೆ ಕೆಡವಿದಾಗ ಉಳಿದ ಕಂಬಿ, ಹೆಂಚು, ಮೆಟ್ಟಿಲಿನ ಸಲಕರಣೆ, ಕಿಟಕಿ, ಬಾಗಿಲು, ಮಂಚ ದಾನ ಮಾಡಿದ್ದಾರೆ. ಇಂತಹ ಪರಿಕರಗಳನ್ನು ಬಳಸಿಯೂ ಸುಂದರ ಮನೆ ನಿರ್ಮಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ’ ಎನ್ನುತ್ತಾರೆ ‘ಹಸಿರುದಳ’ ಸಂಸ್ಥಾಪಕಿನಳಿನಿ ಶೇಖರ್.

‘ಪ್ರತಿ ಅಂತಸ್ತಿನಲ್ಲೂ ಒಂದು ಕೋಣೆ, ಅಡುಗೆ ಮನೆ, ಅಟ್ಯಾಚ್ಡ್‌ ಬಾತ್‌ರೂಮ್ ನಿರ್ಮಿಸಲಾಗಿದೆ. ಮನೆಗೆ ಬಳಸಿರುವ ಟೈಲ್ಸ್‌, ಕಪಾಟು, ಮೆಟ್ಟಿಲುಗಳಿಗೆ ಹಾಕಿರುವ ಕಬ್ಬಿಣದ ಗ್ರಿಲ್‌ಗಳು ಇವೆಲ್ಲವೂ ಮರುಬಳಕೆ ವಸ್ತುಗಳೇ. ಗೋಡೆ ನಿರ್ಮಿಸಲು ಬೂದಿಯಿಂದ ತಯಾರಿಸಿದ ಇಟ್ಟಿಗೆ ಬಳಸಲಾಗಿದೆ. ಹೀಗಾಗಿ ಗೋಡೆಗಳಿಗೆ ಸಿಮೆಂಟ್‌ನಿಂದ ಗಾರೆ ಮಾಡಬೇಕಾದ ಅಗತ್ಯವಿಲ್ಲ’ ಎಂದು ಮಾಹಿತಿ ನೀಡಿದರು.

ಸೆಲ್ಕೊ ಸಂಸ್ಥೆಯ ಫಣೀಂದರ್‌ ಸಿಂಗ್‌ ಹಾಗೂ ವಾಸ್ತುವಿನ್ಯಾಸಗಾರ್ತಿ ನಿರ್ಮಿತಾ ಅವರು ಮನೆಯನ್ನು ಸೊಗಸಾಗಿ ವಿನ್ಯಾಸಗೊಳಿಸಿದ್ದಾರೆ.

‘₹50 ಸಾವಿರ ವೆಚ್ಚದಲ್ಲಿ ಮನೆಗೆ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಅಳವಡಿಸಿದ್ದೇವೆ. ನಿತ್ಯ 4ರಿಂದ 5ಗಂಟೆಗಳು ವಿದ್ಯುತ್‌ ಪೂರೈಸುವ ಸಾಮರ್ಥ್ಯ ಇದಕ್ಕಿದೆ. ಈ ಹಿಂದೆ ಈ ಕುಟುಂಬದವರು ನೀರನ್ನು ದೂರದಿಂದ ಹೊತ್ತು ತರಬೇಕಿತ್ತು.ನೀರು ಪೂರೈಕೆಗೆ ಹಾಗೂ ಬಿಸಿ ಮಾಡಲು ಇದೇ ವಿದ್ಯುತ್‌ ಬಳಕೆಯಾಗುತ್ತದೆ. ನೀರು ಶೇಖರಣೆಗೆ ಸಂಪ್‌ ನಿರ್ಮಿಸಿದ್ದೇವೆ’ ಎಂದು ಫಣೀಂದರ್ ಸಿಂಗ್‌ ಹೇಳಿದರು.

‘ಇವರ ಕುಟುಂಬದ ಸದಸ್ಯರು ಊಟಕ್ಕೆ ರೊಟ್ಟಿ ಬಳಸುತ್ತಾರೆ. ಅದನ್ನು ಸುಡುವ ಒಲೆಯನ್ನು ಟೈಲ್ಸ್‌ ಬಳಸಿ ನಿರ್ಮಿಸಿದ್ದೇವೆ. ಅಡುಗೆ ಮನೆಯಿಂದ ಹೊಗೆ ನೇರವಾಗಿ ಹೊರಹೋಗುವಂತೆ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ನಿರ್ಮಿತಾ.

**

ಮನೆಯ ವಿಶೇಷತೆಗಳು

ಮನೆ ನಿರ್ಮಾಣಕ್ಕೆ ಹಳೆಯ ವಸ್ತುಗಳ ಬಳಕೆ

ಬೂದಿಯಿಂದ ತಯಾರಿಸಿದ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ

ವಿದ್ಯುತ್‌, ನೀರು ಪೂರೈಕೆಗೆ ಸೌರ ಶಕ್ತಿ ಬಳಕೆ

ಕಪಾಟು, ಮಂಚ, ಕಿಟಕಿ, ಬಾಗಿಲು ನೀಡಿದ ದಾನಿಗಳು

**

‘ದಾನಿಗಳು ಮುಂದೆ ಬರಬೇಕು’

‘ನಮ್ಮಂತೆ ಕಸ ಆಯುವ ಎಷ್ಟೋ ಕುಟುಂಬಗಳು ಇಂದಿಗೂ ಸರಿಯಾದ ಸೂರಿಲ್ಲದೇ ಅಲೆಯುತ್ತಿದ್ದಾರೆ. ಬರುವ ಆದಾಯದಲ್ಲಿ ಮನೆ ನಿರ್ಮಾಣ ಕನಸಿನ ಮಾತು. ದುಬಾರಿ ವಸ್ತುಗಳನ್ನು ಕೊಂಡುಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಮನೆ ಕೆಡವಿ ವಸ್ತುಗಳನ್ನು ವ್ಯರ್ಥ ಮಾಡುವ ಬದಲು ನಿರಾಶ್ರಿತರಿಗೆ ನೀಡಿದರೆ ಮನೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ದಾನಿಗಳು ಮುಂದೆ ಬರಬೇಕು’ ಎನ್ನುತ್ತಾರೆ ಜಯಾಭಾಯಿ.

**

ನಮ್ಮಂಥ ಕಸ ಆಯುವವರು ಇಷ್ಟು ದೊಡ್ಡ ಮನೆ ಕಟ್ಟುವುದು ಕನಸಿನ ಮಾತು. ಹಸಿರುದಳ ಮತ್ತು ಸೆಲ್ಕೊ ಸಂಸ್ಥೆಗಳು ನಮಗೆ ಮನೆಯನ್ನು ಒದಗಿಸಿವೆ. ಈ ಮನೆಗೆ ‘ಹಸಿರು ಮನೆ’ ಎಂದೇ ಹೆಸರಿಡುತ್ತೇವೆ
- ಶಿವಪ್ರಸಾದ್‌

**

ಇದು ನಮ್ಮ ಮೊದಲ ಪ್ರಯತ್ನ. ಈ ಮನೆ ನಿರ್ಮಾಣದಿಂದ ಇಂತಹವರಿಗೆ ಇನ್ನಷ್ಟು ಮನೆ ನಿರ್ಮಿಸಿಕೊಡಲು ಧೈರ್ಯ ಬಂದಿದೆ. ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿ ಮತ್ತಷ್ಟು ಮನೆ ನಿರ್ಮಿಸಿಕೊಡಲಿದ್ದೇವೆ
– ನಳಿನಿ ಶೇಖರ್‌, ಹಸಿರು ದಳ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT