ಹೃದಯ ಭಾಗದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

7
ಹೊಸಕೆರೆಹಳ್ಳಿಯ ಹನುಮಗಿರಿ ಬೆಟ್ಟದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕಲ್ಲುಗಳ ಸ್ಫೋಟ

ಹೃದಯ ಭಾಗದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

Published:
Updated:
Deccan Herald

ಬೆಂಗಳೂರು: ಹೊಸಕೆರೆಹಳ್ಳಿಯ ಹನುಮಗಿರಿ ಬೆಟ್ಟದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಕೆಲವು ತಿಂಗಳುಗಳಿಂದ ಎಗ್ಗಿಲ್ಲದೆ ಸಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಇದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‘ಸಿಡಿಪಿ–1985’ ಹಾಗೂ ‘ಸಿಡಿಪಿ–1995’ರಲ್ಲಿ 83 ಎಕರೆ ವಿಸ್ತೀರ್ಣದ ಹನುಮಗಿರಿ ಬೆಟ್ಟವನ್ನು ಹಸಿರು ವಲಯ ಎಂದು ಗುರುತಿಸಲಾಗಿತ್ತು. ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇಲ್ಲಿನ 23 ಎಕರೆ 10 ಗುಂಟೆಯ ದಾಖಲೆಗಳ ತಿದ್ದುಪಡಿ ಮಾಡಲಾಯಿತು. ರಾಮಯ್ಯ ಎಂಬುವರ ಹೆಸರಿಗೆ ಜಾಗ ನೋಂದಣಿಯಾಯಿತು. ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಾಮಾಂಜನೇಯ ‘ಕೈ’ಚಳಕದಿಂದ ಇದು ಕೃಷಿಯೇತರ ಭೂಮಿ ಎಂದು 2009ರಲ್ಲಿ ದಾಖಲೆಗಳು ಸಿದ್ಧವಾದವು. ಅದರ ಬೆನ್ನಲ್ಲೇ, ರಾಮಾಂಜನೇಯ ಅವರ ಮೇಲೆ ಲೋಕಾಯುಕ್ತ ದಾಳಿ ನಡೆಯಿತು.

ನಂತರ ಈ ಜಾಗ ರಿಯಲ್ ಎಸ್ಟೇಟ್‌ ಸಂಸ್ಥೆಯೊಂದಕ್ಕೆ ಮಾರಾಟವಾಯಿತು. ಅಲ್ಲೀಗ ಬಹುಮಹಡಿಯ ವಸತಿ ಸಮುಚ್ಚಯ ತಲೆ ಎತ್ತಿದೆ. ಅದರ ಸಮೀಪದಲ್ಲೇ, ಗಣಿಗಾರಿಕೆ ನಡೆಯುತ್ತಿದೆ. ಈ ಜಾಗ ಹೊಸಕೆರೆಹಳ್ಳಿ ಕೆರೆ ಹಾಗೂ ನೈಸ್‌ ರಸ್ತೆಯ ಮಧ್ಯದಲ್ಲಿ ಇದೆ.

ಇದು ಬಿ–ಖರಾಬು ಜಾಗ. ಭೂ ಕಂದಾಯ ನಿಯಮ 1996ರ ಪ್ರಕಾರ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಈ ಜಾಗವನ್ನು ಭೂಪರಿವರ್ತನೆ ಮಾಡುವಂತಿಲ್ಲ. ಆದರೂ, ಈ ಜಾಗದ ಭೂಪರಿವರ್ತನೆ ಮಾಡಲಾಗಿದೆ. ಸುಮಾರು ಒಂದು ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸ್ಥಳೀಯರು ತಿಂಗಳುಗಳ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರು. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಬ್ದ ಮಾಲಿನ್ಯದ ಪ್ರಮಾಣ ಮಿತಿಗಿಂತ ಜಾಸ್ತಿ ಇದೆ ಎಂದೂ ವರದಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಜಾಗದ ಮಾಲೀಕರಿಗೆ ನೋಟಿಸ್‌ ನೀಡಿದ್ದರು. ಆದರೆ, ಈವರೆಗೂ ವಿಚಾರಣೆಗೆ ಬಂದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

‘ಜಾಗದ ಮಾಲೀಕರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಅವರಿಗೆ ಆಪ್ತರು. ಅವರ ಗಮನಕ್ಕೆ ತಂದೇ ಇಲ್ಲಿ ಕಾರ್ಯ ನಡೆಸಲಾಗುತ್ತಿದೆ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. ಕ್ರಮ ಕೈಗೊಳ್ಳದಂತೆ ತೀವ್ರ ಒತ್ತಡವಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ದೂರು ಸಲ್ಲಿಸಲಾಗಿತ್ತು. ಅವರು ಸ್ಪಂದಿಸುತ್ತಿಲ್ಲ. ಎರಡು ಹಿಟಾಚಿ ಯಂತ್ರಗಳು ಗಣಿಗಾರಿಕೆಯಲ್ಲಿ ತೊಡಗಿವೆ. ಕಲ್ಲುಗಳ ಸ್ಫೋಟ ಮಾಡಲಾಗುತ್ತಿದೆ. ಅದರ ಚೂರುಗಳು ಆಸುಪಾಸಿನ ಮನೆಗಳ ಮೇಲೆ ಬೀಳುತ್ತಿವೆ. ವಾಯು ಹಾಗೂ ಶಬ್ದ ಮಾಲಿನ್ಯ ವಿಪರೀತವಾಗಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಇದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌, ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಎನ್‌.ಎಸ್‌.ಪ್ರಸನ್ನ ಕುಮಾರ್ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !