ಭಾನುವಾರ, ನವೆಂಬರ್ 17, 2019
21 °C

ಹೈಕೋರ್ಟ್‌ ಮೊರೆ ಹೋದ ಸಿದ್ದರಾಮಯ್ಯ

Published:
Updated:

ಬೆಂಗಳೂರು: ಅಕ್ರಮ ಡಿ-ನೋಟಿಫಿಕೇಷನ್ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ಮತ್ತು ಅದರ ವಿಚಾರಣೆಯನ್ನು ರದ್ದುಪಡಿಸುವಂತೆ ಅರ್ಜಿ
ಯಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ಖಾಸಗಿ ದೂರುದಾರ ಎನ್.ಗಂಗರಾಜು ಅವರನ್ನು ಪ್ರತಿವಾದಿ ಮಾಡಲಾಗಿದೆ.

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ಬಡಾವಣೆ ನಿರ್ಮಾಣಕ್ಕೆ 1981ರಲ್ಲಿ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 535 ಎಕರೆ ಭೂಮಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ಸ್ವಾಧೀನ ಪಡಿಸಿಕೊಂಡಿತ್ತು. ಬಡಾವಣೆ ರಚಿಸಿ, ನಿವೇಶನ ಹಂಚಿಕೆಯಾದ ನಂತರ ಹಿನಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ಪಾಪಣ್ಣ ಅವರು ಮುಡಾಗೆ ಅರ್ಜಿಸಲ್ಲಿಸಿ, ತಮ್ಮಿಂದ ವಶಪಡಿಸಿಕೊಂಡಿದ್ದ 30 ಗುಂಟೆ ಕೃಷಿ ಜಮೀನು ಡಿನೋಟಿಫಿಕೇಷನ್ ಮಾಡುವಂತೆ ಕೋರಿದ್ದರು. ಆ ಅರ್ಜಿ ಪುರಸ್ಕರಿಸಿದ ಮುಡಾ ಡಿನೋಟಿಫೈ ಮಾಡಿತ್ತು.

ಪಾಪಣ್ಣ ಅವರ ತಮ್ಮ ಕುಟುಂಬ ಸದಸ್ಯರಿಗೆ ಆ ಭೂಮಿ ಹಂಚಿಕೊಂಡಿದ್ದರು. ಅದರಿಂದ ಪಾಪಣ್ಣ ಅವರ ಚಿಕ್ಕಮ್ಮ ಸಾಕಮ್ಮ ಅವರ ಪಾಲಿಗೆ ಬಂದಿದ್ದ 10 ಗುಂಟೆ ಜಮೀನನ್ನು ಸಿದ್ದರಾಮಯ್ಯ ಖರೀದಿಸಿ 2003ರಲ್ಲಿ ಮನೆ ನಿರ್ಮಿಸಿದ್ದಾರೆ. ಇದು ಅಕ್ರಮ ಎಂದು ಆರೋಪಿಸಿ ಎನ್.ಗಂಗರಾಜು ಎಂಬುವವರು 2017ರಲ್ಲಿ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಗಂಗರಾಜು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಿಶೇಷ ನ್ಯಾಯಾಲಯವು ಬಿ ರಿಪೋರ್ಟ್ ತಿರಸ್ಕರಿಸಿತ್ತು. ಅಲ್ಲದೇ, 2019ರ ಆ.23ರಂದು ಸಿದ್ದರಾಮಯ್ಯ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಸೆ.23ಕ್ಕೆ ನಿಗದಿಪಡಿಸಿದೆ.

ಪ್ರತಿಕ್ರಿಯಿಸಿ (+)