ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬಡಾವಣೆಗಳಿಗೆ ಕಡಿವಾಣ

ಪರಿಶೀಲನೆಗೆ ನೋಂದಣಿ ಮುದ್ರಾಂಕ ಇಲಾಖೆಯಿಂದ ವಿಶೇಷ ತಂಡ
Last Updated 6 ಜನವರಿ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಅನ ಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ವಿಶೇಷ ತಂಡ ಗಳನ್ನು ರಚಿಸಿದೆ. ಈ ತಂಡಗಳು ಮುಂದಿನ ವಾರದಿಂದ ಕಾರ್ಯಾಚರಣೆ ನಡೆಸಲಿವೆ.

ರಾಜಧಾನಿಯ ಕೆರೆಯಂಗಳಗಳಲ್ಲಿ, ಹಸಿರು ವಲಯಗಳಲ್ಲಿ ಹಾಗೂ ಬಿಬಿಎಂಪಿಗೆ ಸೇರ್ಪಡೆಯಾದ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ. ಈ ಬಡಾವಣೆಗಳಿಗೆ ದುಡ್ಡು ಚೆಲ್ಲಿ ಸಾವಿರಾರು ಅಮಾಯಕರು ಮೋಸ ಹೋಗಿದ್ದಾರೆ. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ಬಡಾವಣೆ ನಿರ್ಮಿಸಿದವರ ಹಾಗೂ ಸಹಕಾರ ನೀಡಿದ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

‘ಇತ್ತೀಚಿನ ವರ್ಷಗಳಲ್ಲಿ ಜಿಗಣಿ, ಯಲಹಂಕ, ದೇವನಹಳ್ಳಿ, ಸರ್ಜಾಪುರ ರಸ್ತೆ, ಹೊಸಕೋಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಬಡಾವಣೆಗಳು ತಲೆ ಎತ್ತಿವೆ. ಅನಧಿಕೃತ ಬಡಾವಣೆಗಳ ಸಂಖ್ಯೆ ಸಾಕಷ್ಟು ಇದೆ. ಈ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ, ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.

ನಗರದ ಹೊರ ವಲಯದಲ್ಲಿ ಭೂಮಿ ಬೆಲೆ ಗಗನಕ್ಕೆ ಏರಿದೆ. ಇಲ್ಲಿನ ಕೃಷಿ ಭೂಮಿಗಳಲ್ಲೂ ಬಡಾವಣೆಗಳು ತಲೆ ಎತ್ತುತ್ತಿವೆ. ಹಸಿರು ವಲಯದಲ್ಲಿ ಬಡಾವಣೆ ನಿರ್ಮಾಣ, ಕಂದಾಯ ಭೂಮಿಯ ಅಕ್ರಮ ನೋಂದಣಿ ಮೂಲ ಕ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ.

ನಗರದ ನಮೂನೆ 9 ಹಾಗೂ ನಮೂನೆ 11 ಬಿ ನೀಡಿ ಸ್ವತ್ತುಗಳ ನೋಂದಣಿ ಮಾಡಲಾಗುತ್ತಿದೆ. ನಿರ್ದಿಷ್ಟ ಸ್ವತ್ತಿಗೆ ಗ್ರಾಮ ಪಂಚಾಯಿತಿ ಪಡೆಯು ತ್ತಿರುವ ತೆರಿಗೆಯ ವಿವರಗಳುಳ್ಳ ಪ್ರಮಾಣ ಪತ್ರವೇ ನಮೂನೆ 9 ಹಾಗೂ ನಮೂನೆ 11 ಬಿ. ಇದರಲ್ಲಿ ಮಾಲೀಕನ ಹೆಸರು, ಸರ್ವೆ ನಂಬರ್, ತೆರಿಗೆ ವಿವರಗಳಿರುತ್ತವೆ. ಆದರೆ, ಇವುಗಳನ್ನು ಅಕ್ರಮವಾಗಿ ನೀಡಿ ಸ್ವತ್ತಿನ ನೋಂದಣಿ ಮಾಡಿರುವ ಹತ್ತಾರು ಪ್ರಕರಣಗಳು ಇವೆ. ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಅಕ್ರಮ ಬಡಾವಣೆ ನಿರ್ಮಾಣಕ್ಕೆ ನೆರವು ನೀಡಿದ ಅಧಿಕಾರಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಜಾಗ ಮಾರಾಟ ಮಾಡಿದ, ಖರೀದಿ ಮಾಡಿದ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶ ಇದೆ’ ಎಂದು ತ್ರಿಲೋಕಚಂದ್ರ ತಿಳಿಸಿದರು.

**

2,515 ಅನಧಿಕೃತ ಬಡಾವಣೆ

ರಾಜಧಾನಿಯಲ್ಲಿ 2,515 ಅನಧಿಕೃತ ಬಡಾವಣೆಗಳಿವೆ ಎಂಬುದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.

ವಿಧಾನಸಭೆಯಲ್ಲಿ 2017ರಲ್ಲಿ ಉತ್ತರ ನೀಡಿದ್ದ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ‘ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವ್ಯವಸಾಯದ ಜಮೀನುಗಳನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡದೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಅನಧಿಕೃತ ಬಡಾವಣೆಗಳನ್ನು ತಡೆಯುವ ಉದ್ದೇಶದಿಂದ ಮಾರ್ಗಸೂಚಿಗಳನ್ನು ರೂಪಿಸಿ ವರದಿ ನೀಡಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 15 ಸದಸ್ಯರ ಸಮಿತಿ ರಚಿಸಲಾಗಿದೆ’ ಎಂದು ಹೇಳಿದ್ದರು.

‘ಈಗ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ’ ಎನ್ನುತ್ತಾರೆ ಅಧಿಕಾರಿಗಳು.

**

ದಾಖಲೆ ಸ್ಕ್ಯಾನ್‌ ಮಾಡಲು ನಿರ್ದೇಶನ

ರಾಜ್ಯದ ಕೆಲವು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಸೂಕ್ತ ದಾಖಲೆಗಳನ್ನು ಪಡೆಯದೆ, ಕಾನೂನುಬಾಹಿರವಾಗಿ ನೋಂದಣಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನೋಂದಣಿ ಸಮಯದಲ್ಲಿ ಜಮೀನಿನ ಪಹಣಿ, ಅವಶ್ಯಕತೆಗೆ ಅನುಗುಣವಾಗಿ 11–ಇ ನಕ್ಷೆ, ಗ್ರಾಮ ಪಂಚಾಯಿತಿ ಸ್ವತ್ತುಗಳಿಗೆ ಸಂಬಂಧಿಸಿದ 9 ಮತ್ತು 11ಎ ಅಥವಾ 11 ಬಿ, ಸ್ಥಳೀಯ ಸಂಸ್ಥೆಗಳ ಸ್ವತ್ತುಗಳಿಗೆ ಸಂಬಂಧಿಸಿದ ಖಾತೆ ಹಾಗೂ ತೆರಿಗೆ ರಸೀತಿಗಳನ್ನು ಪಡೆಯಬೇಕು. ನೋಂದಣಿ ವೇಳೆ ಈ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT