ಮಂಗಳವಾರ, ನವೆಂಬರ್ 19, 2019
27 °C
ಟೆಂಡರ್‌ ಕರೆಯದ್ದಕ್ಕೆ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಆಕ್ರೋಶ

ಅಕ್ರಮ ಗುತ್ತಿಗೆ ನೀಡಿದ್ದ ಶೌಚಾಲಯಕ್ಕೆ ಬೀಗ

Published:
Updated:

ಬೆಂಗಳೂರು: ಪಾವತಿಸಿ ಬಳಸುವ ಶೌಚಾಲಯಗಳ ನಿರ್ವಹಣೆಯ ಗುತ್ತಿಗೆಯನ್ನು ಟೆಂಡರ್‌ ಆಹ್ವಾನಿಸದೆಯೇ ನೀಡಿರುವುದಕ್ಕೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಆಕ್ರೋಶ ವ್ಯಕ್ತಪಡಿಸಿದರು.

ಶೌಚಾಲಯಗಳ ಸ್ಥಿತಿಗತಿ ಪರಿಶೀಲಿಸಲು ಅವರು ಬುಧವಾರ ನಗರ ಸಂಚಾರ ನಡೆಸಿದ ಅವರು, ಅವುಗಳು ಅವ್ಯವಸ್ಥೆಯಿಂದ ಕೂಡಿರುವುದಕ್ಕೆ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಲ್ಲೇಶ್ವರದ ಸೆಂಟ್ರಲ್ ವೃತ್ತದ ಬಳಿಯ ಶೌಚಾಲಯದ ನಿರ್ವಹಣೆಯ ಗುತ್ತಿಗೆಯನ್ನು ಅಕ್ರಮವಾಗಿ ವಹಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆ ಶೌಚಾಲಯಕ್ಕೆ ಬೀಗ ಹಾಕಿಸಿದ್ದಲ್ಲದೇ ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಹಾಗೂ ಶೌಚಾಲಯ ನಿರ್ವಹಣೆ ಮಾಡುವವರಿಗೂ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು. 

ಗಾಂಧಿನಗರ ಕ್ಷೇತ್ರದ ಸಿರೂರ್ ಪಾರ್ಕ್ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಸಿಬ್ಬಂದಿಯ ವೇತನ, ಇಎಸ್‌ಐ ಹಾಗೂ ಪಿಂಚಣಿ ಸೌಲಭ್ಯದ ವಿವರ ಪಡೆದರು. ಸಂಪಿಗೆ ರಸ್ತೆ, ಮಲ್ಲೇಶ್ವರ ಆಟದ ಮೈದಾನ, ಪ್ರಕಾಶ್ ನಗರ ವಾರ್ಡ್, ಗಾಯಿತ್ರಿ ದೇವಿ ಉದ್ಯಾನ ಹಾಗೂ ರಾಜಾಜಿನಗರದ ಶೌಚಾಲಯಗಳನ್ನು ಪರಿಶೀಲಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಜಗದೀಶ್, ‘ನಗರದಲ್ಲಿ 680 ಸುಲಭ ಶೌಚಾಲಯಗಳಿದ್ದು, ಎಲ್ಲದರಲ್ಲೂ ಹೊರರಾಜ್ಯದ ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಲ್ಲ. ದರ ಪಟ್ಟಿ ಅಳವಡಿಸಿಲ್ಲ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)