ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73ನೇ ಸ್ವಾತಂತ್ರ್ಯೋತ್ಸವಕ್ಕೆ ನಗರ ಸಜ್ಜು

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌
Last Updated 13 ಆಗಸ್ಟ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆಗೆ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್‌ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಮಂಗಳವಾರ ನಡೆಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್‌, ‘ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಪುಪ್ಪವೃಷ್ಟಿ ಮಾಡಲಿದೆ. ಗೌರವ ವಂದನೆ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ನಾಡಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಮೈದಾನದಲ್ಲಿ 3 ದಿನಗಳ ಕಾಲ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ನಡೆಸಲಾಗಿದೆ. ಪಥಸಂಚಲನದಲ್ಲಿ ಗಡಿ ರಕ್ಷಣಾ ಪಡೆ, ಸಿಆರ್‌ಪಿಎಫ್,ಕೆಎಸ್‌ಆರ್‌ಪಿ, ಸ್ಕೌಟ್ಸ್, ಗೈಡ್ಸ್, ಎಸ್‌ಸಿಸಿ, ಸೇವಾದಳ, ರಮಣ ಮಹರ್ಷಿ ಶಾಲೆ, ಸಮರ್ಥನಂ ಟ್ರಸ್ಟ್ ವಿದ್ಯಾರ್ಥಿಗಳು ಸೇರಿದಂತೆ 34 ತುಕಡಿಗಳಲ್ಲಿ 1,130 ಮಂದಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ನಗರ ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್, ‘ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್‌, ಲಾಡ್ಜ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ವಾತಂತ್ರ್ಯದಿನಾಚರಣೆಯಂದು ಭದ್ರತೆಗೆ 1,906 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದರು.

ಸಂಚಾರ ನಿರ್ಬಂಧ: ‘15ರ ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ್‌ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.

‘ಮೈದಾನದ ಸುತ್ತಮುತ್ತ ವಾಹನ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ ಇರುವುದರಿಂದ ಜನರು ಬಸ್‌ ಹಾಗೂ ಮೆಟ್ರೊ ಸೇವೆಯನ್ನು ಬಳಸಿಕೊಳ್ಳಬೇಕು. ಈ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಸೆಲ್ಫಿ ನಿಷೇಧ’

‘ಭದ್ರತೆಯ ದೃಷ್ಟಿಯಿಂದ ಹೆಲ್ಮೆಟ್‌, ಕ್ಯಾಮರಾ ಸೇರಿದಂತೆ ಕೆಲವಸ್ತುಗಳನ್ನು ಮೈದಾನದ ಒಳಗಡೆ ನಿಷೇಧಿಸಲಾಗಿದೆ. ಮೊಬೈಲ್ ಬಳಕೆಗೆ ಅವಕಾಶ ನೀಡಲಾಗುವುದು. ಆದರೆ, ಸೆಲ್ಫಿ ಪಡೆದುಕೊಳ್ಳುವ ಹಾಗಿಲ್ಲ. ಕಪ್ಪು ವಸ್ತ್ರ, ಚೂಪಾದ ವಸ್ತು, ನೀರಿನ ಬಾಟಲಿ, ಸಿಗರೇಟ್, ತಿಂಡಿ ತಿನಿಸು, ಪಟಾಕಿ ಸೇರಿದಂತೆ ವಿವಿಧ ವಸ್ತುಗಳನ್ನು ಹೊಂದಿದ್ದಲ್ಲಿ ಒಳಗಡೆ ಬಿಡುವುದಿಲ್ಲ’ ಎಂದು ಭಾಸ್ಕರ್ ರಾವ್ ತಿಳಿಸಿದರು.

ವಾಹನ ನಿಲುಗಡೆ ಎಲ್ಲಿ

‘ಹಳದಿ ಬಣ್ಣದ ಕಾರು ಪಾಸ್‌ಗಳನ್ನು ಹೊಂದಿರುವ ಆಹ್ವಾನಿತರು ಪ್ರವೇಶ ದ್ವಾರ ಒಂದರ ಮುಖಾಂತರ ಪ್ರವೇಶಿಸಿ, ಪರೇಡ್‌ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಬಿಳಿ ಬಣ್ಣದ ಕಾರು ಪಾಸ್ ಹೊಂದಿರುವವರು ಪ್ರವೇಶ ದ್ವಾರ ಎರಡರ ಮೂಲಕ ಪ್ರವೇಶಿಸಿ, ವಾಹನ ನಿಲುಗಡೆ ಮಾಡಬಹುದಾಗಿದೆ’ ಎಂದು ರವಿಕಾಂತೇಗೌಡ ಮಾಹಿತಿ ನೀಡಿದರು.

‘ಗುಲಾಬಿ ಬಣ್ಣದ ಪಾಸು ಹೊಂದಿರುವವರು ತಮ್ಮ ವಾಹನವನ್ನು ಮೈನ್‌ ಗಾರ್ಡ್ ಕ್ರಾಸ್‌ ರಸ್ತೆಯ ಸಫೀನಾ ಪ್ಲಾಜಾ ಮುಂಭಾಗ ಅಥವಾ ಕಾಮರಾಜ್‌ ರಸ್ತೆಯ ಆರ್ಮಿ ಶಾಲೆ ಮುಂಭಾಗ ನಿಲುಗಡೆ ಮಾಡಿ, ಕಾಲ್ನಡಿಗೆಯ ಮೂಲಕ ಪ್ರವೇಶ ದ್ವಾರ 3ರಲ್ಲಿ ಒಳಹೋಗಬೇಕು. ಹಸಿರು ಬಣ್ಣದ ಪಾಸ್‌ ಹೊಂದಿರುವವರು ಶಿವಾಜಿನಗರ ಬಸ್‌ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನ ನಿಲುಗಡೆ ಮಾಡಿ, ಪ್ರವೇಶ ದ್ವಾರ 4ಕ್ಕೆ ಕಾಲ್ನಡಿಗೆಯ ಮೂಲಕವೇ ಸಾಗಬೇಕು’ ಎಂದರು.

ಶಾಲಾ ಮಕ್ಕಳನ್ನು ಕರೆತರುವ ಬಿಎಂಟಿಸಿ ಬಸ್‌ಗಳ ನಿಲುಗಡೆಗೆ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೊ ನಿಲ್ದಾಣದವರೆಗೆ ರಸ್ತೆಯ ಉತ್ತರ ಭಾಗದಲ್ಲಿ ಅವಕಾಶ ನೀಡಲಾಗಿದೆ.

ಅಂಕಿ–ಅಂಶಗಳು

04

ಮಾಣೆಕ್ ಷಾ ಪರೇಡ್ ಮೈದಾನಕ್ಕೆ ಪ್ರವೇಶ ದ್ವಾರಗಳು

34

ಪಥಸಂಚಲನದಲ್ಲಿ ಭಾಗವಹಿಸುವ ತಂಡಗಳು

50

ಮೈದಾನದಲ್ಲಿ ಸಿ.ಸಿ. ಟಿವಿ ಕ್ಯಾಮರಾ

1,250

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು

11,450

ಆಹ್ವಾನಿತರಿಗೆ ಆಸನ ವ್ಯವಸ್ಥೆ

1,906

ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT