ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿಗೆ ಮಾಹಿತಿ ಆಯೋಗದ ನೋಟಿಸ್‌

ಅಭ್ಯರ್ಥಿ ಕೇಳಿದ ದಾಖಲೆಗಳನ್ನು ಒದಗಿಸಲು ನಿರಾಕರಣೆ l ₹25,000 ದಂಡ ವಿಧಿಸುವ ಎಚ್ಚರಿಕೆ
Last Updated 30 ಜೂನ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷೆಯಿಂದ ಡಿಬಾರ್ ಆದ‌ಅಭ್ಯರ್ಥಿ ಕೇಳಿದ ದಾಖಲೆಗಳನ್ನು ಒದಗಿಸದ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ರಾಜ್ಯ ಮಾಹಿತಿ ಆಯೋಗ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ2016ರ ಸೆಪ್ಟೆಂಬರ್‌ 13ರಂದುಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿವಿನಾಯಕನಗರದ ಎನ್‌. ರಾಮಕೃಷ್ಣ ಎಂಬುವರನ್ನು ಮೂರು ವರ್ಷ ಡಿಬಾರ್ ಮಾಡಲಾಗಿತ್ತು. ಇದಕ್ಕೆಅನುಚಿತ ವರ್ತನೆಯ ಕಾರಣವನ್ನು ಕೆಪಿಎಸ್‌ಸಿ ನೀಡಿತ್ತು.

ಈ ಆರೋಪ ಒಪ್ಪಿಕೊಳ್ಳದ ರಾಮಕೃಷ್ಣ, ಕೊಠಡಿಯ ಮೇಲ್ವಿಚಾರಕರು, ಕಾಲೇಜಿನ ಪ್ರಾಂಶುಪಾಲರು, ಕೆಪಿಎಸ್‌ಸಿ ವಕ್ತಾರರು ಹಾಗೂ ಬೇರೆ ಯಾರಾದರೂ ಮಾಡಿರುವ ಆರೋಪದ ದಾಖಲೆಗಳು, ಅವರ ಹೇಳಿಕೆಗಳು, ಆಯೋಗದಿಂದ ಪರೀಕ್ಷಾ ಕೊಠಡಿಯಲ್ಲಿ ಮಾಡಿಸಲಾಗಿರುವ ವೀಡಿಯೊ ತುಣುಕು, ಒಎಂಆರ್‌ ಶೀಟ್‌(ಉತ್ತರ ಪತ್ರಿಕೆ) ಪ್ರತಿಗಳನ್ನು ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ್ದರು.

ಆಯೋಗ ಮಾಹಿತಿ ನೀಡಲು ನಿರಾಕರಿಸಿದ ನಂತರ 2017ರ ನವೆಂಬರ್ 23ರಂದು ಮಾಹಿತಿ ಆಯೋಗಕ್ಕೆ ರಾಮಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು. ಆಯೋಗಕ್ಕೂ ಹಿಂಬರಹ ನೀಡಿರುವ ಕೆಪಿಎಸ್‌ಸಿ, ‘ವಾಣಿಜ್ಯ ರಹಸ್ಯ, ವ್ಯಾಪಾರ ಗೋಪ್ಯತೆ, ಬೌದ್ಧಿಕ ಆಸ್ತಿ ಬಹಿರಂಗಪಡಿಸುವಂತಿಲ್ಲ. ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಡದ ಕಾರಣಕ್ಕೆ ಮಾಹಿತಿಯನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅವಕಾಶ ಇಲ್ಲ’ ಎಂದು ಕಾಯ್ದೆಯ ಕೆಲ
ಸೆಕ್ಷನ್‌ಗಳನ್ನು ಉಲ್ಲೇಖಿಸಿ ಉತ್ತರ ನೀಡಿದೆ.

ಈ ಉತ್ತರವನ್ನು ಒಪ್ಪದ ಮಾಹಿತಿ ಆಯುಕ್ತ ಎನ್‌.ಪಿ. ರಮೇಶ್‌, ‘ಅರ್ಜಿದಾರರು ಕೇಳಿರುವ ಮಾಹಿತಿಗೂ, ನೀವು ಉಲ್ಲೇಖಿಸಿರುವ ಕಾಯ್ದೆಯ ಸೆಕ್ಷನ್‌ಗಳಿಗೂ ಸಂಬಂಧವೇ ಇಲ್ಲ. ಅರ್ಜಿದಾರರು ತನ್ನ ವೈಯಕ್ತಿಕ ಮಾಹಿತಿಯನ್ನಷ್ಟೇ ಕೇಳುತ್ತಿದ್ದಾರೆ. ಮಾಹಿತಿ ನೀಡದ ಕೆಪಿಎಸ್‌ಸಿ ನಿಲುವನ್ನು ಆಯೋಗ ಬಲವಾಗಿ ಖಂಡಿಸುತ್ತದೆ’ ಎಂದು ಹೇಳಿದ್ದಾರೆ.

‘ಅರ್ಜಿದಾರರು ಕೇಳಿರುವ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆಗೆ ಒದಗಿಸಿದ ವಿವರಣೆಯನ್ನು ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಬಿ.ಎನ್‌.ವಸಂತಕುಮಾರಿ ಅವರು ಖುದ್ದು ಹಾಜರಾಗಿ ಸಲ್ಲಿಸಬೇಕು. ಇಲ್ಲದಿದ್ದರೆ₹25,000 ದಂಡ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ದಂಡ ಪಾವತಿಸದ ಹೆಚ್ಚುವರಿ ಜಿಲ್ಲಾಧಿಕಾರಿ

ಸಾರ್ವಜನಿಕರಿಗೆ ಮಾಹಿತಿ ನೀಡದ ಕಾರಣಕ್ಕೆ ವಿಧಿಸಿದ ₹10,000 ದಂಡ ಪಾವತಿಸದ ತುಮಕೂರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ವಿರುದ್ಧ ಗರಂ ಆಗಿರುವ ಮಾಹಿತಿ ಆಯೋಗ, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಎಚ್ಚರಿಕೆ ನೀಡಿದೆ.

ತುಮಕೂರಿನ ಜಿ. ರಾಜು ಎಂಬುವರು 2016ರ 4(1)(ಬಿ) ಪರಿಷ್ಕೃತ ಅಧಿಸೂಚನೆಯ ದೃಢೀಕೃತ ಪ್ರತಿಯನ್ನು ಕೋರಿ 2017ರ ಜೂನ್ 6ರಂದು ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿಯನ್ನು ಅವರು ಒದಗಿಸದ ಕಾರಣ ರಾಜು ಆಯೋಗದ ಮೊರೆ ಹೋಗಿದ್ದರು.

‘ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯೇ ಮಾಹಿತಿ ಅಧಿಕಾರಿ ಆಗಿರುತ್ತಾರೆ. ಇದನ್ನು ಹೈಕೋರ್ಟ್‌ ಕೂಡ ಹೇಳಿದೆ. ಆದರೂ ಕಚೇರಿ ವ್ಯವಸ್ಥಾಪಕರನ್ನು ಮಾಹಿತಿ ಅಧಿಕಾರಿಯನ್ನಾಗಿ ನೇಮಿಸಿರುವುದು ಮಾಹಿತಿ ಹಕ್ಕು ಕಾಯ್ದೆಗೆ ವಿರುದ್ಧವಾದ ನಡೆ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನಿಗದಿತ ಅವಧಿಯೊಳಗೆ ಮಾಹಿತಿ ನೀಡದ ಕಾರಣಕ್ಕೆ ₹10,000 ದಂಡ ವಿಧಿಸಿ ಆಯೋಗ 2019ರ ಫೆಬ್ರುವರಿ 25ರಂದು ಆದೇಶ ಹೊರಡಿಸಿತ್ತು. ಆರು ಬಾರಿ ನಡೆದಿರುವ ವಿಚಾರಣೆಗೆ ಹಾಜರಾಗದ ಚನ್ನಬಸಪ್ಪ, ದಂಡದ ಆದೇಶ ರದ್ದುಗೊಳಿಸುವಂತೆ ಜೂನ್‌ 26ರಂದು ಅರ್ಜಿ ಸಲ್ಲಿಸಿದ್ದಾರೆ.

ಸಮಜಾಯಿಷಿಯನ್ನು ತಿರಸ್ಕರಿಸಿರುವ ಆಯೋಗ, ‘ವಿಚಾರಣೆಗೆ ಹಾಜರಾಗದೆ ಮತ್ತು ದಂಡ ಪಾವತಿಸದೆ ಆಯೋಗದ ಆದೇಶವನ್ನು ಲಘುವಾಗಿ ಪರಿಗಣಿಸಲಾಗಿದೆ. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡಬೇಕು, ಇಲ್ಲದಿದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಶಿಫಾರಸು ಮಾಡಲಾಗುವುದು’ ಎಂದು ಆಯುಕ್ತ ಎನ್‌.ಪಿ. ರಮೇಶ್ ಎಚ್ಚರಿಸಿದ್ದಾರೆ.

***

ಮಾಹಿತಿ ನೀಡದ ಕೆಪಿಎಸ್‌ಸಿ ನಿಲುವು ಪಾರದರ್ಶಕತೆಗೆ ವಿರುದ್ಧವಾಗಿದೆ. ಕಾಯ್ದೆಯ ಉದ್ದೇಶವನ್ನು ಎಲ್ಲಾ ಪ್ರಾಧಿಕಾರಗಳು ಸಫಲಗೊಳಿಸಬೇಕು

- ಎನ್‌.ಪಿ. ರಮೇಶ್, ರಾಜ್ಯ ಮಾಹಿತಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT