ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನ ಹಬ್ಬ ಯುಗಾದಿ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭೂಮಿಗೆ ಹಸಿರ ಚಪ್ಪರ. ಚಿಗುರಿನ ಶೃಂಗಾರ. ನಿನ್ನೆ ಮೊನ್ನೆಯ ತನಕ ಉದುರಿದ ಹಣ್ಣೆಲೆಗಳು ನೆಲದ ಹಾಸಾಗಿ ಹಸಿರೆಲೆಗಳ ಸ್ವಾಗತಗೈಯುವಾಗ ಇಂದು ಅಡಿ ಇಟ್ಟಿದ್ದು ಚೈತ್ರ ಶುಕ್ಲ ಪ್ರತಿಪದೆಯ ಯುಗಾದಿ. ಯುಗದ ಆದಿ. ನವ ವರ್ಷದಲ್ಲಿ ಭೂಮಿಯ ಮೊದಲ ಸುತ್ತು. ಹಿಂದೂ ನಂಬಿಕೆಯ ಪ್ರಕಾರ ಇದು ಕಲಿಯುಗದ ಆರಂಭದ ದಿನ.

ನೂರೆಂಟು ಧಾರ್ಮಿಕ ವಿಧಿ ವಿಧಾನಗಳ ಗೊಂದಲಗಳಿಲ್ಲದ, ವಿಶೇಷ ವ್ರತ-ನೇಮಗಳ ಜಂಜಾಟವಿಲ್ಲದ ಯುಗಾದಿಯು ಒಂದು ಪಕ್ಕಾ ನಿಸರ್ಗದ ಹಬ್ಬ.

ಪ್ರಕೃತಿಯ ಮರುಹುಟ್ಟಿನ ಕಾಲ. ಚೈತ್ರದ ಚಿಗುರು, ವಸಂತನ ಆಗಮನ, ಮಾವಿನ ತಳಿರು, ಹೋಳಿಗೆಯ ಘಮ, ಬೇವಿನ ಪಾನಕ, ಬೆಲ್ಲದ ಸಾಂಗತ್ಯ…  ಹೀಗೆ ಸಕಲ ರುಚಿಗಳ ಸಮ್ಮಿಶ್ರಣ. ಜೊತೆಗೆ ಅರಿಸಿನ ಬೆರೆಸಿದ ಬೇವಿನೆಲೆಯನ್ನು ಬೆಳ್ಳಂಬೆಳಿಗ್ಗೆ ಮೈಗೆಲ್ಲ ಮೆತ್ತಿಕೊಂಡು ಮಾಡುವ ಎಳ್ಳೆಣ್ಣೆಯ ಅಭ್ಯಂಜನದ ಪುಳಕ. ವರ್ಷ ಪೂರ್ತಿ ಎದುರಾಗಬಹುದಾದ ಎಲ್ಲ ಭಾವಗಳನ್ನು ಸಂಕೇತಿಸುತ್ತದೆ ಯುಗಾದಿ.

ವರ್ಷವನ್ನು ಯುಗದ ಕಲ್ಪನೆಗೇರಿಸಿ ಸಂಭ್ರಮಿಸುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೊಸ ವರ್ಷವೆಂದು ಆಚರಿಸಲಾಗುತ್ತಿದೆ.

ನಮ್ಮದು ಚಾಂದ್ರಮಾನ ಯುಗಾದಿ. ಇವತ್ತಿನ ಚಂದ್ರೋದಯಕ್ಕೆ ಬಹಳ ಮಹತ್ವವಿದೆ. ಮುಸ್ಸಂಜೆಯ ಹೊತ್ತು ಮನೆಯ ತಾರಸಿಯ ಮೇಲೋ, ಆಟದ ಮೈದಾನದಲ್ಲೋ, ಊರ ಬಯಲಿನಲ್ಲೋ ಜನರೆಲ್ಲ ಜಮಾಯಿಸಿ ಆಕಾಶಕ್ಕೆ ಕಣ್ಣು ನೆಟ್ಟು ಚಂದ್ರನನ್ನು ಹುಡುಕುತ್ತಾರೆ. ತೆಳು ರೇಖೆಯ ಚಂದ್ರ ಕಂಡೊಡನೆ ಆತನ ಆಕಾರ ಹಾಗೂ ವಾಲಿಕೆಯ ಆಧಾರದ ಮೇಲೆ ಇಡೀ ವರ್ಷದ ಮಳೆ ಬೆಳೆಗಳನ್ನು ಲೆಕ್ಕ ಹಾಕುತ್ತಾರೆ. ಯುಗಾದಿಯ ನಂತರದ ದಿನಗಳಲ್ಲಿ ಬೀಳುವ ಮೊದಲ ಮಳೆ ರೈತರ ಜೀವನದಲ್ಲಿ ಬಹು ಮುಖ್ಯದ ದಿನ. ವರ್ಷದ ಕೃಷಿ ಚಟುವಟಿಕೆಗಳಿಗೆ ಅವತ್ತು ಚಾಲನೆ ಸಿಕ್ಕಂತೆ. ಹಾಂ, ಇವತ್ತು ಚಂದ್ರ ಯಾರ ಕಣ್ಣಿಗೆ ಮೊದಲು ಬೀಳುತ್ತಾನೋ ಅವರಿಗೆ ವರ್ಷದ ಅದೃಷ್ಟಶಾಲಿಯ ಪಟ್ಟ!

ನೋವು- ನಲಿವುಗಳನ್ನು, ಆಸೆ ನಿರಾಸೆಗಳನ್ನು, ಸೋಲು- ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕೆನ್ನುವ ಸಂದೇಶ ಯುಗಾದಿಯದು.  ಬದುಕಿನ ಆಗುಹೋಗುಗಳನ್ನು , ದ್ವಂದ್ವಗಳನ್ನು ಎದುರಿಸುತ್ತಲೇ ಅವುಗಳ ಆಚೆಗೂ ಹೋಗಿ ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಕೌಶಲವನ್ನು, ಸ್ಥೈರ್ಯವನ್ನು ಪಡೆಯಬೇಕೆಂಬ ಅರಿವಿನ ಪಾಠವೂ ಇಲ್ಲಿ ಅಡಕವಾಗಿದೆ. ಸೃಷ್ಟಿ ಮತ್ತು ಸಮಯಗಳೊಂದಿಗೆ ತಳುಕು ಹಾಕಿಕೊಂಡಿರುವ ಯುಗಾದಿಗೆ ವಿಶೇಷವಾದ ತಾತ್ವಿಕ ಅರ್ಥವೂ ಉಂಟು.

ಪ್ರಕೃತಿಯ ಜೊತೆಗಿನ ಮನುಷ್ಯನ ಒಡನಾಟ ಬೇರೆ ಬೇರೆ ಮಜಲುಗಳನ್ನು ದಾಟುತ್ತಾ ಬಂದಿದೆ.  ಆರಂಭದಿಂದಲೂ ತನ್ನನ್ನು ಸಾಕಿ ಸಲುಹಿದ ಪ್ರಕೃತಿಯೊಂದಿಗೆ ಮನುಷ್ಯನದು ಅಗಲಲಾಗದ ಸಂಬಂಧ. ನಾಗರಿಕತೆಗಳನ್ನು ಪೋಷಿಸಿ ಬೆಳೆಸಿದ ನಿಸರ್ಗದ ಸಾಹಚರ್ಯದಲ್ಲಿ ಮನುಷ್ಯ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾನೆ. ವಿಜ್ಞಾನ- ತಂತ್ರಜ್ಞಾನಗಳ ಬಾಹುಗಳನ್ನು ಹರಡಿಕೊಂಡಿದ್ದಾನೆ. ಸಾಹಿತ್ಯ- ತತ್ವಜ್ಞಾನಗಳ ಮೈಮನಗಳನ್ನು ಹೊಕ್ಕಿದ್ದಾನೆ. ಕೆಲವೊಮ್ಮೆ ಸುಂದರ, ಕೆಲವೊಮ್ಮೆ ಕ್ರೂರ, ಅನೇಕ ಸಲ ಒಗಟಾಗಿ, ಸವಾಲಾಗಿ ಕಂಡ ಪ್ರಕೃತಿಯಲ್ಲಿ ತನ್ನ ಜೀವ ರಹಸ್ಯವನ್ನು ಭೇದಿಸಲು ಹೆಣಗಿದ್ದಾನೆ. ಪ್ರಕೃತಿಯ ವಿಕೋಪಗಳನ್ನು ಕಂಡು ಬೆಚ್ಚುತ್ತಲೇ, ಅದನ್ನು ಆರಾಧಿಸಿ ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದಾನೆ. ‘ಪ್ರಕೃತಿಗೆ ಹತ್ತಿರವಾಗಿ ಬದುಕಿ, ಅದು ನಿಮ್ಮನ್ನು ಸಲಹುತ್ತದೆ’  ಎಂಬ ಪ್ರಾಚೀನ ಕಾಲದ ನಾಣ್ಣುಡಿಯೇ ಇದಕ್ಕೆ ಸಾಕ್ಷಿ.

ಭಾವವಾಗಿ, ಸ್ಫೂರ್ತಿಯಾಗಿ, ಚೈತನ್ಯವಾಗಿ ನಿಸರ್ಗದ ಕಣಕಣಗಳು ನಮ್ಮೊಳಗನ್ನು ತುಂಬಿಕೊಂಡಿವೆ. ಉಸಿರಾಡುವ ಗಾಳಿ, ಕುಡಿಯುವ ನೀರು, ಮಣ್ಣು ಕೊಡುವ ಅನ್ನ, ಹಣ್ಣು- ನೆರಳು ನೀಡುವ ಮರಗಳು, ಅದಿರಿನ ಬೆಟ್ಟ-ಗುಡ್ಡಗಳು… ಎಲ್ಲ ಎಲ್ಲವುಗಳು ನಮ್ಮೊಳಗಿಳಿದು ಪ್ರಕೃತಿಯಲ್ಲಿ ಪ್ರವಹಿಸುವ ಶಕ್ತಿಯ ಪ್ರತಿಧ್ವನಿಯಂತಿದೆ ನಮ್ಮ ಜೀವನ. ಜೀವ ಮತ್ತು ಸಮಷ್ಟಿಯ ನಡುವೆ ಇರುವುದು ಹಳೆಯ- ಎಳೆಯ ಬಾಂಧವ್ಯ ಎನ್ನುತ್ತಾರೆ ಬಸವಣ್ಣನವರು: ‘ಅಂದಂದಿಂಗೆ ಎಳೆಯ ನೀನು ಹಳೆಯ ನಾನು…’ ಈ ಭೂಮಿಯ ಮೇಲೆ ಜೀವ ಅಂಕುರಿಸಿ, ಕಣ್ಣು ಬಿಟ್ಟಾಗ ಅದರ ಗ್ರಹಿಕೆಗೆ ಎಲ್ಲವೂ ಹೊಸದು. ಆಗ ನಿಸರ್ಗವೇ ಪಾಠಶಾಲೆ. ಜೀವದ ಬೆಳವಣಿಗೆಯಲ್ಲಿ ಜಗತ್ತು ಅನುಭವಿಯಂತೆ ಮಾರ್ಗದರ್ಶನ ನೀಡುತ್ತದೆ, ಕೈ ಹಿಡಿದು ಬೆಳೆಸುತ್ತದೆ. ಪ್ರಬುದ್ಧವಾಗಿ ಮಾಗುವ ಜೀವದ ಕಣ್ಣಲ್ಲಿ ಬದುಕಿನ ಅರ್ಥಗಳು ಬದಲಾಗುತ್ತಿರುತ್ತವೆ.

ಆದರೆ ಜೀವ ಜಗತ್ತು ಇನ್ನಷ್ಟು, ಮತ್ತಷ್ಟು ಗೂಢವಾಗಿಯೂ, ಗಾಢವಾಗಿಯೂ ಉಳಿದುಬಿಡುತ್ತದೆ. ಮುದಿಯಾಗುವ ಜೀವದ ದೇಹದೆದುರು ಪ್ರಪಂಚದಲ್ಲಿ ಮಾತ್ರ ಅದೇ ತಾಜಾತನ, ಎಳೆತನ. ತನ್ನ ಕಾಲಮಾನ ಸರಿಯುತ್ತಿದ್ದರೂ ಜಗದ ಹೊಸತನಕ್ಕೆ ಜೀವ ಬೆರಗಾಗುತ್ತದೆ. ಹಗಲು ರಾತ್ರಿಗಳು, ಕಾಲದ ಪಲ್ಲಟಗಳು, ಭೂಮಿಯ ಹೊದಿಕೆಗಳು ಬದಲಾದಂತೆ ಮತ್ತೆ ಮತ್ತೆ ಎಲ್ಲ ಹೊಚ್ಚ ಹೊಸದು. ಸಮಷ್ಟಿಯ ಅಲೌಕಿಕ ಸೌಂದರ್ಯ ಸಮಸ್ತ ತಾರಾಮಂಡಲಗಳಲ್ಲಿ ಹೊಳೆದು ನಕ್ಕಂತೆ, ಕಣ್ಣು ಮಿಟುಕಿಸಿದಂತೆ… ಜೀವಕ್ಕೆ ಸೃಷ್ಟಿಯ ಈ ಅನಂತ ಸಾಹಚರ್ಯೆಯ ಸಂಬಂಧ ನಿಗೂಢವಾಗಿಯೇ ಸೆಳೆಯುತ್ತದೆ.

ಕಾಲದ ಅನಂತತೆಯಲ್ಲಿ…

ಯುಗಾದಿ ಕಾಲದ ಮೇಲೆ ವಿಶೇಷ ಬೆಳಕು ಚೆಲ್ಲುತ್ತದೆ. ಪ್ರಕೃತಿಯ ಭಾಗವಾದ ಮನುಷ್ಯ, ಕಾಲದ ಕೂಸೂ ಹೌದು. ಬದುಕು ಚಲನಶೀಲ. ಪರಿವರ್ತನೆಯು ಜೀವಂತಿಕೆಯ ಸಂಕೇತ. ಸಮಯಕ್ಕೆ ತಕ್ಕಂತೆ ನಾವು ಅರ್ಥಪೂರ್ಣವಾಗಿ ಬದಲಾಗದಿದ್ದರೆ ನಮ್ಮ ಅಸ್ತಿತ್ವದ ಕಾಲಮೌಲ್ಯವನ್ನೇ ಕಳೆದುಕೊಳ್ಳುತ್ತೇವೆ.  ಬಡವ- ಶ್ರೀಮಂತ, ಮೇಲು- ಕೀಳು, ಶ್ರೇಷ್ಠ- ಕನಿಷ್ಠ ಎನ್ನುವ ಯಾವ ಭೇದವೂ ಕಾಲಕ್ಕಿಲ್ಲ. ಅದಕ್ಕೆ ಎಲ್ಲರೂ ಒಂದೇ. ಇದೇ ಕಾಲಧರ್ಮ.

ಇಡೀ ಸೃಷ್ಟಿಯು ಕಾಲದ ವಿನ್ಯಾಸಕ್ಕೆ ತಕ್ಕಂತೆ ಚಲಿಸುತ್ತದೆ. ಹುಟ್ಟು, ಬೆಳವಣಿಗೆ, ಸಾವು… ಪ್ರತಿಯೊಂದೂ ಕಾಲಕ್ಕೆ ಒಳಗು. ಒಂದೇ ತಿಂಗಳಲ್ಲಿ ಜೋಳ ಬೆಳೆಯಲಾಗದು, ಒಂದೇ ವರ್ಷದಲ್ಲಿ ಮಗು ಹರಯಕ್ಕೆ ಕಾಲಿಡದು. ಒಂದೇ ವಾರದಲ್ಲಿ ಸಸಿ ಮರವಾಗದು. ಕಾಲದ ವಿನ್ಯಾಸಕ್ಕೆ ತಕ್ಕಂತೆ ಎಲ್ಲ ಬದಲಾವಣೆಗಳು.

ಭೂಮಿಯ ತಿರುಗುವಿಕೆಯೊಂದಿಗೆ ಕಾಲದ ನಡಿಗೆ ಆರಂಭವಾಯಿತೋ, ಕಾಲದ ಚಲನೆಯೊಂದಿಗೆ ಸೃಷ್ಟಿಯ ಸಂಚಲನ ಶುರುವಿಟ್ಟುಕೊಂಡಿತೋ… ಬದಲಾವಣೆಯೇ ಇಲ್ಲದಿರುವಾಗಲೂ ಕಾಲ ಅಸ್ತಿತ್ವದಲ್ಲಿರುತ್ತದೆಯೋ? ತಿಳಿಯದು. ಈ ಕ್ಷಣ ಎನ್ನುವುದು ಅವಿಭಜಿತ ಗಳಿಗೆಯೋ, ನಿನ್ನೆ ಮತ್ತು ನಾಳೆಗಳ ನಡುವಿನ ಆವಿಯ ಪರದೆಯೋ? ತಿಳಿಯದು. ಕಾಲ ಸೀಮಿತವೋ, ಅನಂತವೋ? ನದಿಯಂತೆ ಪ್ರವಾಹ ಸ್ವರೂಪಿಯೋ, ಮರಳು ಗಡಿಯಾರದಲ್ಲಿ ಸೂಸಿ ಬರುವ ಮರಳಂತೆ ಕಣ ರೂಪಿಯೋ? ತಿಳಿಯದು.

ಕಾಲ ನಿಜವೋ ಭ್ರಮೆಯೋ ಎಂಬ ಜಿಜ್ಞಾಸೆ ವಿಜ್ಞಾನಿಗಳನ್ನು, ತತ್ವಜ್ಞಾನಿಗಳನ್ನು ಎರಡೂವರೆ ಸಾವಿರ ವರ್ಷಗಳಿಂದಲೂ ಬೆಂಬತ್ತಿದೆ! ಇದು ದೃಷ್ಟಿ ಭ್ರಮೆಯೇ ಇದ್ದೀತು ಎಂಬುದು ಅನೇಕರ ವಾದ. ಕಾಲವನ್ನು ಅರಿಯಲಿಕ್ಕೆ ಕೈ ಹಾಕಿದಿರೋ ಅದು ನಿಮ್ಮ ಬೆರಳುಗಳ ಸಂದಿಯಿಂದ ಹರಿದು ಹೋಗಿರುತ್ತದೆ ಎಂಬುದು ಹಲವರ ಅಭಿಮತ. ಸಮಯವನ್ನು ಸೃಷ್ಟಿಯ ನಾಲ್ಕನೆಯ ಆಯಾಮ ಎನ್ನುತ್ತಾರೆ ಐನ್‌ಸ್ಟಿನ್. ಸೈದ್ಧಾಂತಿಕ ಭೌತಶಾಸ್ತ್ರಜ್ಞ ಲೀ ಸ್ಮೋಲಿನ್ ತಮ್ಮ ‘ಟೈಂ ರಿಬಾರ್ನ್’ ಪುಸ್ತಕದಲ್ಲಿ ಸಮಯದ ಬಗ್ಗೆ ಮೂಲಭೂತ ಮರುಚಿಂತನೆಯು ವಿಜ್ಞಾನದ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸಬಲ್ಲದು ಎನ್ನುತ್ತಾರೆ. ತತ್ವಜ್ಞಾನಿಗಳು ಹೇಗೆ ದೇವರ ಅಸ್ತಿತ್ವದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೋ ವಿಜ್ಞಾನಿಗಳೂ ಸಮಯದ ಬೆನ್ನು ಬಿದ್ದಿದ್ದಾರೆ.

ದೇಹ ಮತ್ತು ಮನಸ್ಸುಗಳನ್ನು ಸವರಿಕೊಂಡು ಹೋಗುವ ಕಾಲ ಒಂದು ವಿಸ್ಮಯ. ನಿರಂತರವಾಗಿ ಪ್ರವಹಿಸುವ ಕಾಲವನ್ನು ವರ್ಷ, ತಿಂಗಳು, ವಾರ, ದಿನ, ಗಂಟೆ, ನಿಮಿಷ ಮತ್ತು ಕ್ಷಣಗಳಲ್ಲಿ ಅಳೆಯುತ್ತೇವೆ. ಆದರೆ ಕಾಲ ಎನ್ನುವುದೊಂದು ಆಂತರಿಕ ಅನುಭವ, ಅದರಲ್ಲೇ ನೆಲೆಸಿ, ಅದನ್ನೇ ಪರಿಶೋಧಿಸುವುದು ಹೇಗೆಂಬುದು ಸಂತ ಆಗಸ್ಟಿನ್‌ರ ತರ್ಕ. ಸಮಯ ಮನದ ಆಸ್ತಿ. ನನ್ನೊಳಗೆ ಮೂಡುವ ಅನಿಸಿಕೆ. ಸದ್ಯದ ಗಳಿಗೆಯಿಂದ ಸದ್ಯದ ಗಳಿಗೆಗೆ ಚಲಿಸುತ್ತಾ ಹೋಗುವ ಸಮಯದ ಗ್ರಹಿಕೆಯು ಮನುಷ್ಯನ ಬುದ್ಧಿಯ ಕೊಡುಗೆ ಎನ್ನುತ್ತಾರೆ. ಕಾಲಕ್ಕೆ ಅಂದು ಇಂದು ಮುಂದುಗಳ ದಂದುಗವಿಲ್ಲ. ಆ ಭಿನ್ನತೆಗಳನ್ನೆಲ್ಲ ಸೃಷ್ಟಿಸಿದವರು ನಾವು, ನಮ್ಮ ವ್ಯವಹಾರಕ್ಕೆ.

ಕೈಗೆ ಸಿಗದೆ ಓಡುತ್ತಿರುವ ಕಾಲವನ್ನು ಜೀವನ ತುಂಬಿಕೊಳ್ಳುವುದು ಹೇಗೆ?  ‘ನಿಮಿಷದ ನಿಮಿಷಂಭೋ, ಕ್ಷಣದೊಳಗರ್ಧಂಬೋ… ಮಾಯಂ ಭೋ ಅಭ್ರಚ್ಛಾಯಂ ಭೋ…’ ಎನ್ನುವಂತೆ ಕಾಲದ ಓಟದಲ್ಲಿ ಜೀವನವು ಮೋಡದ ನೆರಳಂತೆ ಬದಲಾಗುತ್ತಾ ಮರೆಯಾಗಿಬಿಡುತ್ತದೆ. ಬುಧವಾರವಷ್ಟೇ ನಿಧನರಾದ ನಮ್ಮ ಕಾಲದ ಶ್ರೇಷ್ಠ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್‌ ತಮ್ಮ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌’ನಲ್ಲಿ, ಕಾಲದ ಆದಿ ಅಂತ್ಯಗಳ ಬಗ್ಗೆ ತರ್ಕಿಸುತ್ತಾ, ‘ಕಾಲ ಮಾತ್ರವೇ- ಎಲ್ಲವನ್ನೂ ಉತ್ತರಿಸಬಲ್ಲುದು’ ಎಂದು ಹೇಳಿರುವುದು ಎಷ್ಟು ಅರ್ಥವತ್ತಾಗಿದೆ ಅಲ್ಲವೇ?

ಅಮೂರ್ತವಾದ ಕಾಲವನ್ನು ನೇರವಾಗಿ ನೋಡಲಿಕ್ಕೆ, ಕೇಳಲಿಕ್ಕೆ, ಅನುಭವಿಸಲಿಕ್ಕೆ ಸಾಧ್ಯವಿಲ್ಲದಿರಬಹುದು. ನಮ್ಮ ಜೀವಿತಾವಧಿಯಲ್ಲಿ ಅದರ ಪರಿಣಾಮಗಳನ್ನು ನಮ್ಮ ಮೇಲೂ ನಮ್ಮ ಸುತ್ತಣ ವಸ್ತುಗಳ ಮೇಲೂ ಕಾಣುತ್ತೇವೆ. ಆದರೆ ಕೊಡುತ್ತಲೇ ಮರಳಿ ಪಡೆಯುವ ಕಾಲದ ಲೇವಾದೇವಿ ಮಾತ್ರ ತರ್ಕಕ್ಕೆ ಅತೀತ. ಮನುಷ್ಯ ಮತ್ತು ಪ್ರಕೃತಿಯ ಏಕತೆಯನ್ನು ನೆನಪಿಸುವ ಯುಗಾದಿಗೆ ಹೀಗೆ ಕಾಲದೊಂದಿಗೆ ಅವಿನಾಭಾವ ಸಂಬಂಧ. ಕಾಲದ ಅನಂತತೆಯಲ್ಲಿ ಜೀವದ ಹುಡುಕಾಟ ನಿರಂತರ.

ಬೇವು-ಬೆಲ್ಲ…

ಸಹಜವಾಗಿ, ಸರಳವಾಗಿ ಬದುಕುವ ರಹಸ್ಯವನ್ನು ಕೂಡ ಯುಗಾದಿ ಕಲಿಸಿಕೊಡುತ್ತದೆ.

‘ತನ್ನನ್ನು ಪ್ರೀತಿಸಿದ ಹೃದಯಕ್ಕೆ ಪ್ರಕೃತಿ ಎಂದಿಗೂ ದ್ರೋಹ ಬಗೆಯಲಿಲ್ಲ’ ಎನ್ನುತ್ತಾನೆ ನಿಸರ್ಗ ಕವಿ ವರ್ಡ್ಸ್‌ವರ್ತ್.  ಆದರೆ, ನೈಸರ್ಗಿಕ ನಿಯಮಗಳನ್ನು ಉಲ್ಲಂಘಿಸಿರುವ ಮನುಷ್ಯನ ಕ್ರಿಯೆಗಳು, ಜೀವಗೋಳದಲ್ಲಿ ವಿಷ ತುಂಬಿವೆ. ಮನುಷ್ಯ ಸ್ವಾರ್ಥದ ಲಾಲಸೆಗೆ ಸಿಕ್ಕಿಕೊಂಡಿದ್ದಾನೆ. ದೇಶಗಳೆಲ್ಲ ಪ್ರಬಲವಾಗುವ ಪೈಪೋಟಿಗೆ ಬಿದ್ದಿವೆ. ಪ್ರಕೃತಿಯ ಸಂಬಂಧದಲ್ಲಿ ಮೊದಲಿಲ್ಲದ ವಿರೋಧಾಭಾಸಗಳು ಈಗ ಢಾಳಾಗಿ ಕಾಣುತ್ತಿವೆ. ನಿಸರ್ಗದಿಂದ ದೂರ ಸರಿಯುತ್ತಾ ದಿನದಿಂದ ದಿನಕ್ಕೆ ನಾವಿಂದು ಬರಿದಾಗುತ್ತಿದ್ದೇವೆ. ಜೀವವಾಹಿನಿಯಾದ ನೀರಿನ ಮೂಲಗಳೆಲ್ಲ ಕೈಗಾರಿಕೆಗಳ ತ್ಯಾಜ್ಯವನ್ನು ನುಂಗುತ್ತಾ ಕೊಳಚೆಗಟ್ಟಿವೆ. ಉಸಿರಾಡುವ ಗಾಳಿ ವಾಹನಗಳ ಹೊಗೆಯನ್ನು ಹೊತ್ತುಕೊಂಡು ಮಲಿನವಾಗಿದೆ. ಗಣಿಗಳಿಂದ ಗುಡ್ಡಗಳು ಮಾಯವಾಗಿವೆ. ಉಳುವ ಜಮೀನುಗಳು ಸೈಟುಗಳಾಗಿ ಮಾರಾಟವಾಗುತ್ತಿವೆ. ರಾಸಾಯನಿಕಗಳು ಎಗ್ಗಿಲ್ಲದೆ ಮಣ್ಣು ಸೇರಿ ಬಿತ್ತನೆಯ ಭೂಮಿ ಬರಡಾಗುತ್ತಿದೆ. ತಿನ್ನುವ ಆಹಾರ ಕಲಬೆರಕೆಗೆ ತುತ್ತಾಗಿ ರುಚಿ, ಶಕ್ತಿ ಕಳೆದುಕೊಂಡಿದೆ. ಹಕ್ಕಿಗಳು ಕಾಣೆಯಾಗಿವೆ.

ಜಗತ್ತನ್ನು ಆಳುತ್ತಿರುವೆನೆಂದು ಬೀಗುತ್ತಿರುವ ಮನುಷ್ಯನಿಗೆ ಸೃಷ್ಟಿಯನ್ನು ನಾಶ ಮಾಡುವ ಯಾವ ನೈತಿಕತೆಯೂ ಇಲ್ಲ. ಪ್ರಪಂಚವನ್ನು ಉತ್ತಮ ರೀತಿಯಲ್ಲಿ ಪರಿವರ್ತಿಸಲು ಪ್ರಕೃತಿಯ ಸಹಕಾರ ಅತ್ಯವಶ್ಯಕ. ಪ್ರಕೃತಿಯೊಂದಿಗಿನ ಸಂಬಂಧವನ್ನು ಉತ್ತಮಪಡಿಸಿಕೊಳ್ಳದೇ ಹೋದಲ್ಲಿ ಜೀವಕ್ಕೆ ಸಂಚಕಾರ ಕಟ್ಟಿಟ್ಟಬುತ್ತಿ. ಈ ಸತ್ಯ ಈಗಾಗಲೇ ಮನವರಿಕೆಯಾಗಿದೆ. ಆ ಹಾದಿಯಲ್ಲಿ ತೀವ್ರವಾಗಿ ಕಾರ್ಯೋನ್ಮುಖರಾಗಬೇಕಿದೆ.

ಬೃಹತ್ತಾದ ಬ್ರಹ್ಮಾಂಡದಲ್ಲಿ ನಮ್ಮದು ಗಣನೆಗೇ ಬಾರದಷ್ಟು ಪುಟ್ಟ ಅವಧಿ. ಸಿಟ್ಟು, ದ್ವೇಷ, ಹಗೆತನ, ಸ್ವಾರ್ಥಗಳನ್ನೆಲ್ಲ ತುಂಬಿಕೊಳ್ಳುವಷ್ಟು ಜೀವನ ದೊಡ್ಡದಿಲ್ಲ. ಪ್ರೀತಿ, ಕರುಣೆ, ವಿಶ್ವಾಸಗಳು ನಮ್ಮೆದೆಯಲ್ಲಿ ಜಾಗ ಪಡೆಯಲಿ. ಮುಂದಿನ ತಲೆಮಾರಿಗೆ ನಳನಳಿಸುವ ಪ್ರಕೃತಿಯನ್ನು ದಾಟಿಸುವುದು ನಮ್ಮ ಜವಾಬ್ದಾರಿ. ಮನಕ್ಕೂ, ಬದುಕಿಗೂ ಮೆತ್ತಿಕೊಂಡ ಸಂಕುಚಿತತೆಯನ್ನು, ಜಂಜಾಟಗಳನ್ನು ಕೊಡವಿಕೊಳ್ಳೋಣ. ಪ್ರಕೃತಿಯೊಂದಿಗೆ ಮರುಹುಟ್ಟು ಪಡೆದುಕೊಳ್ಳೋಣ. ಇದು ನಮ್ಮನ್ನು ನಾವು ನವೀಕರಿಸಿಕೊಳ್ಳುವ ಸುಸಮಯ.

ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ ಚಪ್ಪರಿಸಿ ಸಂಭ್ರಮಿಸುವ ಯುಗಾದಿಯ ಈ ಶುಭ ದಿನ ಅಂಥ ಸ್ವಚ್ಛ, ಸುಂದರ ಬದುಕಿಗೆ ನಾಂದಿ ಹಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT