ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಚರದ ಡಿಜಿಪಿ ಖಾತೆಗೇ ಕನ್ನ!

ಡೆಬಿಟ್ ಕಾರ್ಡ್ ವಿವರ ಕೊಟ್ಟು ₹ 2 ಲಕ್ಷ ಕಳೆದುಕೊಂಡ ಪ್ರಸಾದ್
Last Updated 17 ಅಕ್ಟೋಬರ್ 2018, 19:08 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ನಯವಾದ ಮಾತುಗಳಿಂದ ರಾಜ್ಯ ಗುಪ್ತಚರ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್ ಅವರಿಗೇ ಚಳ್ಳೇಹಣ್ಣು ತಿನ್ನಿಸಿರುವ ಸೈಬರ್ ವಂಚಕರು, ಅವರ ಬ್ಯಾಂಕ್ ಖಾತೆಗಳಿಂದ ₹ 2 ಲಕ್ಷ ಎಗರಿಸಿದ್ದಾರೆ!

ಸೋಮವಾರ ಮಧ್ಯಾಹ್ನ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಯ ಸೋಗಿನಲ್ಲಿ ಡಿಜಿಪಿಗೆ ಕರೆ ಮಾಡಿ ಡೆಬಿಟ್ ಕಾರ್ಡ್‌ಗಳ ವಿವರ ಪಡೆದುಕೊಂಡ ವಂಚಕರು, ಕ್ಷಣಮಾತ್ರದಲ್ಲಿ ಹಣ ಎತ್ತಿದ್ದಾರೆ. ಆ ಕೂಡಲೇ ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿರುವ ಡಿಜಿಪಿ, ಫೋನ್ ಮುಖಾಂತರವೇ ದೂರು ಕೊಟ್ಟಿದ್ದಾರೆ.

‘ಮಧ್ಯಾಹ್ನ 2 ಗಂಟೆ ಸುಮಾರಿಗೆ 92230 40040 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ‘ನಿಮ್ಮ ಎಸ್‌ಬಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ನ ಅವಧಿ ಮುಗಿದಿದೆ. ಅದನ್ನು ನವೀಕರಣ ಮಾಡಬೇಕಿದೆ. ಬ್ಯಾಂಕ್ ವಿವರಗಳನ್ನು ಕೊಡಿ’ ಎಂದು ಕೇಳಿದ.

ನನ್ನ ಕಾರ್ಡ್‌ ಮೇಲಿನ ನಂಬರ್‌ಗಳನ್ನು ಸಹ ಹೇಳಿದ ಆತ, ಎಸ್‌ಎಂಎಸ್ ಮೂಲಕ ಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸುವಂತೆ ತಿಳಿಸಿದ್ದ’ ಎಂದು ಡಿಜಿಪಿ ದೂರಿನಲ್ಲಿ ವಿವರಿಸಿದ್ದಾರೆ.

‘ಆ ಕರೆ ಸ್ಥಗಿತಗೊಳಿಸುತ್ತಿದ್ದಂತೆಯೇ 62909 45172 ಸಂಖ್ಯೆಯಿಂದ ಮತ್ತೊಂದು ಕರೆ ಬಂತು. ‘ನಿಮ್ಮ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್‌ನ ಅವಧಿ ಮುಗಿದಿದೆ. ನವೀಕರಿಸಬೇಕು. ಆದಷ್ಟು ಬೇಗ ವಿವರಗಳನ್ನು ಕಳುಹಿಸಿ’ ಎಂದರು.ಬೇರೆ ಕೆಲಸದ ಒತ್ತಡದಲ್ಲಿದ್ದ ನಾನು, ಆತುರಾತುರದಲ್ಲಿ ಎರಡೂ ಕಾರ್ಡ್‌ಗಳ ವಿವರಗಳನ್ನು ಕಳುಹಿಸಿಬಿಟ್ಟೆ.’

‘ಇದಾದ ಕೆಲವೇ ನಿಮಿಷದಲ್ಲಿ ಎಸ್‌ಬಿಐ ಡೆಬಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ₹ 1 ಲಕ್ಷ ಡ್ರಾ ಆಯಿತು. ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ವಹಿವಾಟು ಸ್ಥಗಿತಗೊಳಿಸಿದೆ. ಆ ನಂತರ ಕೆನರಾ ಬ್ಯಾಂಕ್ ಖಾತೆಯಿಂದ ₹ 1 ಲಕ್ಷ ಖಾಲಿಯಾಯಿತು. ಅದರ ವಹಿವಾಟನ್ನೂ ಬ್ಲಾಕ್ ಮಾಡಿಸಿದೆ’ ಎಂದು ಹೇಳಿದ್ದಾರೆ.

ಮೋಸ ಹೋದ 2ನೇ ಡಿಜಿಪಿ: 2015ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್ ಅವರಿಗೂ ಸೈಬರ್ ವಂಚಕರು ಇದೇ ರೀತಿ ಮೋಸ ಮಾಡಿದ್ದರು. ಅವರ ಬ್ಯಾಂಕ್ ಖಾತೆಯಿಂದ ₹ 10 ಸಾವಿರ ದೋಚಿದ್ದರು. ಕೆಲವೇ ದಿನಗಳಲ್ಲಿ ಆರೋಪಿಗಳ ಬಂಧನವೂ ಆಗಿತ್ತು.

**

ಡಿಜಿಪಿ ಅಲ್ಲ, ವಾಸ್ತುಶಿಲ್ಪಿ ಎಂದರು!

ಈ ಬಗ್ಗೆ ವಿಚಾರಿಸಲು ಸೈಬರ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ‘ಎ.ಎಂ.ಪ್ರಸಾದ್ ಎಂಬುವರು ದೂರು ಕೊಟ್ಟಿದ್ದಾರೆ ನಿಜ. ಆದರೆ, ಅವರು ಡಿಜಿಪಿ ಅಲ್ಲ. ಕೋರಮಂಗಲ ಕಡೆ ನೆಲೆಸಿರುವ ವಾಸ್ತುಶಿಲ್ಪಿ’ ಎಂದು ಹೇಳಿದರು.

ಕೃತ್ಯ ನಡೆದ ಸ್ಥಳ ‘ಸಿಐಡಿ ಕಚೇರಿ’ ಎಂದು ಎಫ್‌ಐಆರ್‌ನಲ್ಲಿ ಬರೆದಿದೆಯಲ್ಲ ಎಂದು ಪ್ರಶ್ನಿಸಿದಾಗ, ‘ಸಿಐಡಿಗೆ ಬರುವ ಎಲ್ಲ ದೂರುಗಳನ್ನು ಅದೇ ರೀತಿ ಎಫ್‌ಐಆರ್ ಮಾಡಿಕೊಳ್ಳುತ್ತೇವೆ. ತನಿಖಾ ಕಾಲದಲ್ಲಿ ಬದಲಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT