ಐಪಿಎಸ್ ರೂಪಾ ಹೆಸರಲ್ಲಿ ರೂಂ ಬುಕ್: ಮಹಿಳೆ ಸೆರೆ

ಶುಕ್ರವಾರ, ಮಾರ್ಚ್ 22, 2019
27 °C

ಐಪಿಎಸ್ ರೂಪಾ ಹೆಸರಲ್ಲಿ ರೂಂ ಬುಕ್: ಮಹಿಳೆ ಸೆರೆ

Published:
Updated:

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ಲಖನೌನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದ ಆರೋಪದಡಿ ಮಂಗಳೂರಿನ ಆಶಾ ಪ್ರಕಾಶ್ (52) ಎಂಬುವರನ್ನು ಬಂಧಿಸಿದ ಬನಶಂಕರಿ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

2018ರ ಡಿಸೆಂಬರ್ ಕೊನೆ ವಾರದಲ್ಲಿ ಲಖನೌ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಆಶಾ, ‘ನಾನು ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ. ಕೆಲಸದ ನಿಮಿತ್ತ ಲಖನೌಗೆ ಬರುತ್ತಿದ್ದೇನೆ. ಡಿ.29ರಿಂದ ಜ.3ರವರೆಗೆ ಒಳ್ಳೆಯ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ’ ಎಂದು ಹೇಳಿದ್ದರು. ಆ ಮಾತನ್ನು ನಂಬಿ ಅವರು ರೂಂ ಬುಕ್ ಮಾಡಿದ್ದರು.

ಮೂರು ದಿನವಾದರೂ ರೂಪಾ ಬಾರದಿದ್ದಾಗ, ಅಲ್ಲಿನ ಅಧಿಕಾರಿಯೊಬ್ಬರು ಕರೆ ಮಾಡಿ ವಿಚಾರಿಸಿದ್ದರು. ‘ನಾನು ಯಾವುದೇ ರೂಮ್ ಬುಕ್ ಮಾಡಿಲ್ಲ’ ಎಂದು ರೂಪಾ ಹೇಳಿದ್ದರು. ಆಗ, ‘ನಿಮ್ಮ ಹೆಸರು ಹೇಳಿಕೊಂಡು ಯಾರೋ 944****544 ಸಂಖ್ಯೆಯಿಂದ ಕರೆ ಮಾಡಿದ್ದರು’ ಎಂದು ಅಧಿಕಾರಿ ತಿಳಿಸಿದ್ದರು. ಈ ಸಂಬಂಧ ರೂಪಾ ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದರು. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ಪ್ರಾರಂಭಿಸಿದ ಪೊಲೀಸರು, ಮಂಗಳೂರಿನ ‘ಅತ್ತಾವರ’ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಆಶಾ ಅವರನ್ನು ಬಂಧಿಸಿದ್ದರು.

‘ರೂಪಾ ಅವರ ಹೆಸರಿನಲ್ಲಿ ನಾನ್ಯಾಕೆ ರೂಮ್ ಬುಕ್ ಮಾಡಲಿ. ತಿಂಗಳ ಹಿಂದೆಯೇ ನನ್ನ ಮೊಬೈಲ್ ಕಳೆದುಹೋಗಿತ್ತು. ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರನ್ನೂ ಕೊಟ್ಟಿದ್ದೆ. ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್‌ಎನ್‌ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಪಡೆದು ಬಳಸುತ್ತಿದ್ದೆ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ’ ಎಂದು ಆಶಾ ವಾದಿಸಿದ್ದಾಗಿ ಪೊಲೀಸರು ಹೇಳಿದರು.

ಆಶಾ ಮೊಬೈಲ್‌ ಕಳವಾದ ಸಂಬಂಧ ಕೊಟ್ಟಿದ್ದ ದೂರಿನಲ್ಲಿ ಐಎಂಇಐ ಸಂಖ್ಯೆಯನ್ನು ಬರೆದಿದ್ದರು. ಆದರೆ, ಅವರು ಈಗ ಅದೇ ಐಎಂಇಐ ಸಂಖ್ಯೆಯ ಮೊಬೈಲನ್ನು ಬಳಸುತ್ತಿದ್ದಾರೆ. ಕಳವಾಗಿತ್ತು ಎಂದಾದರೆ ಈ ಮೊಬೈಲ್ ಯಾವುದು? ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆ ವಿವರ (ಸಿಡಿಆರ್) ಆಧರಿಸಿ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದರು.

ಅಂಚೆ ಇಲಾಖೆಯಲ್ಲಿದ್ದವರು

‘ಮೊದಲು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆಶಾ, ಹತ್ತು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು. ಯಾವ ಕಾರಣಕ್ಕೆ ಆ ರೀತಿ ಮಾಡಿದರು ಎಂಬುದೇ ತಿಳಿಯುತ್ತಿಲ್ಲ. ಆ ಬಗ್ಗೆ ಅವರು ಏನನ್ನೂ ಹೇಳುತ್ತಿಲ್ಲ’ ಎಂದು ಬನಶಂಕರಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 7

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !