ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಆಮದು ಸುಂಕ ಹೆಚ್ಚಳಕ್ಕೆ ರಾಜ್ಯದ ಆಗ್ರಹ

ಪ್ರಧಾನಿಗೆ ಪತ್ರ ಬರೆದ ಎಚ್‌.ಡಿ. ಕುಮಾರಸ್ವಾಮಿ
Last Updated 27 ನವೆಂಬರ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಅದಿರು ಲಭ್ಯವಿದ್ದರೂ ಉಕ್ಕು ಕಾರ್ಖಾನೆಗಳು ಹೊರಗಿನಿಂದ ಆಮದು ಮಾಡಿಕೊಳ್ಳುವುದರಿಂದ ಗಣಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಮಧ್ಯಪ್ರವೇಶಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಭಾರಿ ಪ್ರಮಾಣದ ಅದಿರು ಮಾರಾಟವಾಗದೆ ಉಳಿದಿದ್ದು, ಉಕ್ಕು ಕಾರ್ಖಾನೆಗಳು ಹೊರಗಿನಿಂದ ಆಮದು ಮಾಡಿಕೊಳ್ಳದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಅದಿರು ಉತ್ಪಾದನೆ, ಮಾರಾಟದ ಮೇಲೆ ಸುಪ್ರೀಂ ಕೋರ್ಟ್‌ ನಿರ್ಬಂಧ ಹೇರಿದೆ. ವಾರ್ಷಿಕ 3.5ಕೋಟಿ ಟನ್‌ ಮಾತ್ರ ಉತ್ಪಾದಿಸಬೇಕು. ಉತ್ಪಾದಿಸಿದ ಅದಿರನ್ನು ಇ–ಹರಾಜು ಮೂಲಕ ಉಕ್ಕು ಕಾರ್ಖಾನೆಗಳಿಗೇ ಮಾತ್ರ ಮಾರಾಟ ಮಾಡಬೇಕೆಂದು ಷರತ್ತು ಹಾಕಿದೆ. ದೇಶದಲ್ಲಿ ಅದಿರಿಗೆ ವಿಪರೀತ ಬೇಡಿಕೆ ಇದ್ದರೂ ರಾಜ್ಯದಲ್ಲಿ ಅದಿರು ಖರ್ಚಾಗದೆ ಉಳಿದಿರುವುದು ಗಣಿ ಉದ್ಯಮದ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಕರ್ನಾಟಕ ಅದಿರು ಉತ್ಪಾದನೆಯಲ್ಲಿ ಮೂರನೇ ದೊಡ್ಡ ರಾಜ್ಯ. ಕೇಂದ್ರ ಸರ್ಕಾರ ಅದಿರು ಆಮದಿನ ಮೇಲೆ ಶೇ 2.5ರಷ್ಟು ಸುಂಕ ವಿಧಿಸುತ್ತಿದೆ. ಇದನ್ನು ಶೇ 30ಕ್ಕೆ ಹೆಚ್ಚಿಸಬೇಕು. ಕೂಡಲೇ ಸುಂಕ ಹೆಚ್ಚಿಸುವ ಕ್ರಮ ಕೈಗೊಳ್ಳದಿದ್ದರೆ ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮಕ್ಕೂ ಹೊಡೆತ ಬೀಳಲಿದೆ ಎಂದೂ ಮುಖ್ಯಮಂತ್ರಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಪ್ರಸಕ್ತ ವರ್ಷದ ಮೊದಲ 6 ತಿಂಗಳಲ್ಲಿ ರಾಜ್ಯದಲ್ಲಿ 70 ಲಕ್ಷ ಟನ್‌ ಅದಿರು ಉತ್ಪಾದಿಸಲಾಗಿದ್ದು, 20 ಲಕ್ಷ ಟನ್‌ ಮಾರಾಟವಾಗಿದೆ. 50 ಲಕ್ಷ ಟನ್‌ ಗಣಿಗಳಲ್ಲೇ ಬಿದ್ದಿದೆ. ಸ್ಥಳೀಯ ಉಕ್ಕು ಕಾರ್ಖಾನೆಗಳು ಹೊರಗಿನಿಂದ 50 ಲಕ್ಷ ಟನ್‌ ಅದಿರು ಖರೀದಿಸಿವೆ ಎಂದು ಫಿಮಿ ಇತ್ತೀಚೆಗೆ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT