17 ದೇಶಗಳಿಗೆ ಇಸ್ರೊದಿಂದ ಉಪಗ್ರಹ ನಿರ್ಮಾಣ ತರಬೇತಿ

7

17 ದೇಶಗಳಿಗೆ ಇಸ್ರೊದಿಂದ ಉಪಗ್ರಹ ನಿರ್ಮಾಣ ತರಬೇತಿ

Published:
Updated:
Prajavani

ಬೆಂಗಳೂರು: ಚಿಕ್ಕ ಚಿಕ್ಕ ಕೃತಕ ಉಪಗ್ರಹಗಳನ್ನು (ನ್ಯಾನೊ ಸ್ಯಾಟ್‌) ನಿರ್ಮಿಸುವುದು ಹೇಗೆ ಎಂಬ ಪಾಠ ಹೇಳಿಕೊಡುವ ತರಬೇತಿ ಕಾರ್ಯಕ್ರಮಕ್ಕೆ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಗುರುವಾರ ಚಾಲನೆ ನೀಡಿದರು.

ಯೂನಿ ಸ್ಪೇಸ್‌ ನ್ಯಾನೊಸ್ಯಾಟಲೈಟ್‌ ಅಸೆಂಬ್ಲಿ ಅಂಡ್‌ ಟ್ರೈನಿಂಗ್‌ (ಉನ್ನತಿ) ಅಡಿ ಇಸ್ರೊ ವಿವಿಧ ದೇಶಗಳಿಗೆ ತರಬೇತಿಯನ್ನು ನೀಡಲಿದೆ. ಈ ಯೋಜನೆಯಡಿ ಮೊದಲ ಬ್ಯಾಚ್‌ನಲ್ಲಿ 17 ದೇಶಗಳ 30 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

 ನ್ಯಾನೊ ಸ್ಯಾಟಲೈಟ್‌ ನಿರ್ಮಾಣದ ತರಬೇತಿಯ ಮೊದಲ ತಂಡದಲ್ಲಿ ಅಲ್ಜೀರಿಯಾ, ಅರ್ಜೆಂಟೀನಾ, ಅಜರ್‌ಬೈಜಾನ್‌, ಭೂತಾನ್‌, ಬ್ರೆಜಿಲ್‌, ಚಿಲಿ, ಈಜಿಪ್ಟ್‌, ಇಂಡೊನೇಷ್ಯಾ, ಕಜಕಿಸ್ತಾನ, ಮಲೇಷ್ಯಾ, ಮೆಕ್ಸಿಕೊ, ಮಂಗೋಲಿಯಾ, ಮೊರಾಕ್ಕೊ, ಮ್ಯಾನ್ಮಾರ್‌, ಒಮಾನ್‌, ಪನಾಮ ಮತ್ತು ಪೋರ್ಚುಗಲ್‌ ದೇಶಗಳು ಪಾಲ್ಗೊಂಡಿದ್ದವು.

ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಒಟ್ಟು 34 ಅಭಿವೃದ್ಧಿಶೀಲ ದೇಶಗಳಿಂದ 87 ಅರ್ಜಿಗಳು ಬಂದಿದ್ದವು. ಇನ್ನು ಎರಡು ತಂಡಗಳಲ್ಲಿ ಉಳಿದ ದೇಶಗಳಿಗೆ ತರಬೇತಿ ನೀಡಲಾಗುವುದು. ಒಂದು ತಂಡಕ್ಕೆ 2019 ಅಕ್ಟೋಬರ್‌, ಇನ್ನೊಂದು ತಂಡಕ್ಕೆ 2020 ಅಕ್ಟೋಬರ್‌ನಲ್ಲಿ ತರಬೇತಿ ನೀಡಲಾಗುವುದು. ಪ್ರತಿಯೊಂದು ತಂಡವೂ ಎಂಟು ವಾರಗಳ ತರಬೇತಿ ಪಡೆಯಲಿವೆ. ನ್ಯಾನೊ ಸ್ಯಾಟಿಲೈಟ್‌ಗಳ ಅಭಿವೃದ್ಧಿ, ಅದರ ಉಪಯೋಗ, ಬಾಹ್ಯಾಕಾಶದಲ್ಲಿ ನಿರುಪಯುಕ್ತ ಕೃತಕ ಉಪಗ್ರಹಗಳ ರಾಶಿ ಇತ್ಯಾದಿ ಮಾಹಿತಿ ನೀಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಶಿವನ್‌, ‘ನೀವು 100 ಕಿ.ಮೀ ಮೇಲಕ್ಕೆ ಹೋಗಿ ಭೂಮಿಯನ್ನು ನೋಡಿದಾಗ ಯಾವುದೇ ದೇಶಗಳ ಗಡಿ ಕಾಣಿಸುವುದಿಲ್ಲ. ಎಲ್ಲವೂ ಒಂದೇ ಆಗಿ ಕಾಣುತ್ತದೆ. ಬಾಹ್ಯಾಕಾಶ ಮಾನವತೆಯನ್ನು ಕೂಡಿಸುತ್ತದೆ. ‘ಉನ್ನತಿ’ ಅಂತಹ ಕೆಲಸವನ್ನು ಮಾಡುತ್ತದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

ಭಾರತದ ಬಾಹ್ಯಾಕಾಶ ವಿಜ್ಞಾನ ಕಳೆದ ಐದು ದಶಕಗಳಿಂದಲೂ ಮಾನವ ಕಲ್ಯಾಣಕ್ಕಾಗಿಯೇ  ದುಡಿಯುತ್ತಲೇ ಬಂದಿದೆ. ಇತರ ಬಾಹ್ಯಾಕಾಶ ಏಜೆನ್ಸಿಗಳ ಉದ್ದೇಶವೇ ಬೇರೆ ಆಗಿತ್ತು. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸದೃಢವಾಗಿ ಹೊರ ಹೊಮ್ಮಲು ಇಸ್ರೊ ಕೊಡುಗೆ ಮಹತ್ವದ್ದು ಎಂದು ಶಿವನ್‌ ಹೇಳಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !