ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾರಂಭಿಸಿದ ಹಗುರ ಉಪಗ್ರಹ

ಚೆನ್ನೈನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ‘ಕಲಾಂಸ್ಯಾಟ್‌’
Last Updated 25 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನ ವಿದ್ಯಾರ್ಥಿಗಳ ತಂಡವೊಂದು ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ಹಗುರ ಉಪಗ್ರಹ ‘ಕಲಾಂ ಸ್ಯಾಟ್‌’ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿದ್ದು, ವಿದ್ಯಾರ್ಥಿಗಳ ಪ್ರಯತ್ನಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಉಪಗ್ರಹ ಗುರುವಾರ ರಾತ್ರಿ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ಸಿ44 ಉಡ್ಡಯನ ವಾಹನದ ಮೂಲಕ ಸೇನಾ ಉದ್ದೇಶದ ಮೈಕ್ರೊಸ್ಯಾಟ್‌–ಆರ್‌ ಜತೆಗೆ ಉಡಾವಣೆಗೊಂಡಿತ್ತು. ಕಲಾಂ ಸ್ಯಾಟ್‌ ಮೂಲಕ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲಾಗುತ್ತದೆ.ಇದರ ತೂಕ 1.2 ಕೆ.ಜಿ. ಅತಿ ಹಗುರದ ಉಪಗ್ರಹವನ್ನು ಕಕ್ಷೆಗೆ ಸೇರಿಸಿರುವುದು ಇದೇ ಮೊದಲು.

ಇದಕ್ಕೆ ಮೊದಲು 2017ರ ಜೂನ್‌ನಲ್ಲಿ ಅಮೆರಿಕದ ನಾಸಾ ಪರೀಕ್ಷಾರ್ಥವಾಗಿ ಕಲಾಂಸ್ಯಾಟ್‌–1 ಅನ್ನು ಇತರ ಉಪಗ್ರಹಗಳ ಜತೆ ಉಡಾವಣೆ ಮಾಡಲಾಗಿತ್ತು. ಆಗ ಬಾಹ್ಯಾಕಾಶದ ಹೊರ ಗಡಿಯಲ್ಲಿ ಅಂದರೆ, ಉಪ ಕಕ್ಷೆಗೆ ಸೇರಿಸಲಾಗಿತ್ತು. ಆದರೆ, ಭೂಮಿಗೆ ಒಂದು ಸುತ್ತು ಪರಿಭ್ರಮಣ ಪೂರ್ಣಗೊಳಿಸದೇ ಭೂಮಿಗೆ ವಾಪಸ್ ತರಲಾಯಿತು. ಇದೀಗ ಮೊದಲ ಬಾರಿಗೆ ಈ ಪುಟ್ಟ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿದೆ.

ಖ್ಯಾತ ವಿಜ್ಞಾನಿ ಎ.ಪಿ.ಜೆ ಅಬ್ದುಲ್‌ ಕಲಾಂ ಹೆಸರಿನಲ್ಲಿ ಅಭಿವೃದ್ಧಿಪಡಿಸಿರುವ ಈ ಉಪಗ್ರಹದ ಕಾರ್ಯನಿರ್ವಹಣಾ ಅವಧಿ ಎರಡು ತಿಂಗಳು.

ಈ ಉಪಗ್ರಹಗಳ ಉಡಾವಣೆಗೆ ಇಸ್ರೊ ಹೊಸ ಬಗೆಯ ರಾಕೆಟ್‌ ಪಿಎಸ್‌ಎಲ್‌ವಿ ಸಿ– 44 ಬಳಸಿದೆ. ಪಿಎಸ್‌ಎಲ್‌ವಿ ನಾಲ್ಕು ಹಂತಗಳ ರಾಕೆಟ್‌ ಆಗಿದ್ದು, ಉಪಗ್ರಹದಿಂದ ಪ್ರತ್ಯೇಕಗೊಂಡ ಬಳಿಕ ಬಾಹ್ಯಾಕಾಶ ಕಸವಾಗಿ ಮಾರ್ಪಡುತ್ತಿತ್ತು.

ಆದರೆ, ಈ ಉಡಾವಣೆಯಲ್ಲಿ ರಾಕೆಟ್‌ನ ನಾಲ್ಕನೇ ಮತ್ತು ಕೊನೆಯ ಹಂತವು ಕಸವಾಗಿ ವ್ಯರ್ಥಗೊಳ್ಳದೇ ಅತಿ ಎತ್ತರದ ಕಕ್ಷೆಗೆ ತಲುಪುತ್ತದೆ. ಅದು ಸಕ್ರಿಯವಾಗಿ ಆರು ತಿಂಗಳು ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇಂಧನ ವ್ಯವಸ್ಥೆಯನ್ನು ಮಾಡಲಾಗಿದೆ. ನಾಲ್ಕನೇ ಹಂತಕ್ಕೆ ಅಲ್ಯುಮಿನಿಯಂ ಟ್ಯಾಂಕ್‌ ಅಳವಡಿಸಲಾಗಿದೆ.

ಮೈಕ್ರೊಸ್ಯಾಟ್‌– ಆರ್‌: ಮೈಕ್ರೊಸ್ಯಾಟ್‌–ಆರ್‌ ಅನ್ನು ಸೇನಾ ಉದ್ದೇಶಕ್ಕಾಗಿ ಡಿಆರ್‌ಡಿಒ ವಿವಿಧ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಿದೆ. ಸುಮಾರು 740 ಕೆ.ಜಿ ತೂಕದ ಈ ಉಪಗ್ರಹ ಸೇನೆಗೆ ಅಗತ್ಯವಿರುವ ಚಿತ್ರಗಳನ್ನು ಒದಗಿಸುವ ಉಪಗ್ರಹ ಇದಾಗಿದೆ.

ಇವೆರಡೂ ಉಪಗ್ರಹಗಳು ಭೂಮಿಯಿಂದ ಉಡಾವಣೆಗೊಂಡ 15 ನಿಮಿಷಗಳಲ್ಲಿ 274 ಕಿ.ಮೀ ದೂರದಲ್ಲಿರುವ ಧ್ರುವೀಯ ಕಕ್ಷೆಯಲ್ಲಿ ಉಪಗ್ರಹಗಳನ್ನು ನೆಲೆಗೊಳಿಸಲಾಯಿತು.

ಇತರ ನಾಗರಿಕ ಉದ್ದೇಶಗಳ ಭೂವೀಕ್ಷಣಾ ಉಪಗ್ರಹಗಳ ನೆಲೆ ನಿಲ್ಲುವ ಕಕ್ಷೆಗೆ (400 ಕಿ.ಮೀ ರಿಂದ 700 ಕಿ.ಮೀ) ಹೋಲಿಸಿದರೆ,ಇದು ಇನ್ನೂ ಕೆಳಹಂತದ ಕಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT