ಗುರುವಾರ , ಸೆಪ್ಟೆಂಬರ್ 19, 2019
21 °C
'ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಆಟ ನಡೆಯದು'

ಕಳ್ಳ ಬಿಲ್ ಸುಳ್ಳು ಲೆಕ್ಕ ತೋರಿಸುವ ಸರ್ಕಾರವಿದು: ಸಿ.ಟಿ. ರವಿ

Published:
Updated:
Prajavani

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಆಟ ನಡೆಯದು ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಎಸ್‌.ಐ ಚಿಕ್ಕನಗೌಡ್ರ ಅವರ ಪರವಾಗಿ ರಾಯನಾಳ ಗ್ರಾಮದಲ್ಲಿ ಗುರುವಾರ ಪ್ರಚಾರ ನಡೆಸಿದರು. ಈ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಕಳ್ಳ ಲೆಕ್ಕ ಸುಳ್ಳು ಬಿಲ್ ತೋರಿಸಿ ಹಣ ಹೊಡೆಯುತ್ತಿದೆ. ಬರಗಾಲ ಇರುವ ಈ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ, ಗೋವುಗಳಿಗೆ ಮೇವು ನೀಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದರು.

ಎಂದಿಗೂ ಯಶಸ್ವಿಯಾಗದ ಮೋಡ ಬಿತ್ತನೆ ಹೆಸರಿನಲ್ಲಿ ಸರ್ಕಾರ ರೈತರಿಗೆ ಮೋಸ ಮಾಡಲು ಹೊರಟಿದೆ. ಈ ಬಾರಿ ಅದಕ್ಕಾಗಿ ₹ 80 ಲಕ್ಷವನ್ನು ಮೀಸಲಿಟ್ಟಿದ್ದಾರೆ. ಮೋಡ ಬಿತ್ತನೆ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಿ, ಅದರಿಂದ ಆಗಿರುವ ಪ್ರಯೋಜನಾ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಜಮೀರ್ ಜಿನ್ನಾ ಆಗಲು ಬಿಡೆವು: ಮುಸಲ್ಮಾನರು ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹಿಂದೂಗಳು ಕಾಂಗ್ರೆಸ್‌ಗೆ ಮತ ಹಾಕುವಾಗ ಯೋಚಿಸಿ ಎಂದು ನಾವು ಸಹ ಹೇಳಬೇಕಾಗುತ್ತದೆ. ಜಮೀರ್ ಜಿನ್ನಾ ಆಗಲು ಹೊರಟ್ಟಿದ್ದಾರೆ. ಅವರನ್ನು ಜಿನ್ನಾ ಆಗಲು ಬಿಡುವುದಿಲ್ಲ, ಜಿನ್ನಾ ಅವರ ಜಾಗಕ್ಕೆ ಕಳಿಸುತ್ತೇವೆ ಎಂದರು.

ಬಿಜೆಪಿ ಎಂದಿಗೂ ಜಾತಿ ರಾಜಕೀಯ ಮಾಡುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ಕೆಲಸ. ಬಸವಣ್ಣ– ಕನಕಸಾದರು ಒಂದೇ ಎಂದು ನಾವು ನಂಬಿದ್ದೇವೆ. ಜನಕ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ. ದೇಶಕ್ಕೆ ಯಾರು ಉತ್ತಮ ಎಂದು ಅರಿತು ಈ ಬಾರಿ ಮತ ನೀಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆ ಮೊಣಕೈಗೆ ತುಪ್ಪ ಸವರುವ ತಂತ್ರ ಎಂದು ಅವರು ಲೇವಡಿ ಮಾಡಿದರು.

 

 

Post Comments (+)