ಶುಕ್ರವಾರ, ನವೆಂಬರ್ 15, 2019
26 °C
ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿ, ಸಿಬ್ಬಂದಿ ವಿರುದ್ಧ ಎಫ್‌ಐಆರ್‌ l ನ್ಯಾಯ ಕೊಡಿಸಿ– ಪೋಷಕರ ಅಳಲು

ಕೈದಿ ಕೊಲೆ: ಸಿಐಡಿಗೆ ಹಸ್ತಾಂತರ ವಿಳಂಬ

Published:
Updated:

ಬೆಂಗಳೂರು: ವಿಚಾರಣಾಧೀನ ಕೈದಿ ಸೈಯದ್ ಫೈರೋಜ್ (21) ಎಂಬಾತನನ್ನು ಥಳಿಸಿ ಕೊಂದಿರುವ ಆರೋಪದಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿ ನಾಲ್ಕು ತಿಂಗಳಾಗಿದ್ದು, ಪ್ರಕರಣವನ್ನು ಇದುವರೆಗೂ ಸಿಐಡಿಗೆ ಹಸ್ತಾಂತರಿಸಿಲ್ಲ.

ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಫೈರೋಜ್‌ನಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಥಳಿಸಲಾಗಿತ್ತು. ತೀವ್ರ ಗಾಯಗೊಂಡು ಆತ ಮೃತಪಟ್ಟಿದ್ದ. ಮೈ ಮೇಲೆಲ್ಲ ಗಾಯದ ಗುರುತುಗಳಿದ್ದರಿಂದ, ಇದೊಂದು ಕೊಲೆ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದರು.

ಪ್ರಕರಣದ ನ್ಯಾಯಾಂಗ ತನಿಖೆಯನ್ನು ಆಧರಿಸಿ  ‘ಜೈಲು ಅಧಿಕಾರಿ, ಸಿಬ್ಬಂದಿ ಹಾಗೂ ಇತರರ ಹಲ್ಲೆಯಿಂದ ಫೈರೋಜ್‌ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ’ ಎಂದು 57ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಪರಪ್ಪನ ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್ ಎಚ್‌.ಎಲ್‌. ನಂದೀಶ್ ಅವರು ಅಪರಾಧ ಸಂಚು (ಐಪಿಸಿ 34), ಹತ್ಯೆಯ ಸಂಚು (ಐಪಿಸಿ 120ಬಿ) ಹಾಗೂ ಕೊಲೆ (ಐಪಿಸಿ 302) ಆರೋಪದಡಿ ಜೈಲು ಅಧಿಕಾರಿ, ಸಿಬ್ಬಂದಿ ಹಾಗೂ ಇತರರ ವಿರುದ್ಧ ಮೇ 16ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದಾದ ನಂತರ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ.

ಪತ್ರ ಬರೆದು ಸುಮ್ಮನಾದ ಕಮಿಷನರ್: ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರಿಗೆ ಪತ್ರ ಬರೆದಿದ್ದ ಅಂದಿನ ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ , ‘ಈ ಪ್ರಕರಣವನ್ನು ಸಿಐಡಿಗೆ ವಹಿಸಬಹುದೇ?’ ಎಂದು ಪ್ರಶ್ನಿಸಿದ್ದರು.

ಅದಕ್ಕೆ ಉತ್ತರಿಸಿದ್ದ ಪೊಲೀಸರು, ‘ಕಸ್ಟಡಿ ವೇಳೆ ಫೈರೋಜ್‌ನ ಕೊಲೆ ಆಗಿರುವುದು ನ್ಯಾಯಾಂಗದ ತನಿಖೆಯಿಂದ ಗೊತ್ತಾಗಿದೆ. ಪ್ರಕರಣ ಸಿಐಡಿಗೆ ಹಸ್ತಾಂತರಿಸಲು ಅರ್ಹವಾಗಿದೆ. ಯಾವುದೇ ಸಂದರ್ಭ ಸಿಐಡಿ ಅಧಿಕಾರಿಗಳು ಬಂದರೆ, ಪ್ರಕರಣದ ಸಂಪೂರ್ಣ ಕಡತಗಳನ್ನು ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದ್ದರು.

ಅದಾದ ನಂತರ ಕಮಿಷನರ್ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಹಾಲಿ ಕಮಿಷನರ್ ಭಾಸ್ಕರ್ ರಾವ್ ಅವರೂ ಈ ಪ್ರಕರಣದ ಬಗ್ಗೆ ಗಮನಹರಿಸುತ್ತಿಲ್ಲ. ಇದು ಫೈರೋಜ್‌ನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸುವವರು ಯಾರು‘ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. 

ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಫೈರೋಜ್‌: ಗಾಂಜಾ ಮಾರಾಟ ಆರೋಪದಡಿ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಫೈರೋಜ್‌ನನ್ನು ಬಂಧಿಸಿದ್ದರು. ಜನವರಿ 9ರಂದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಂದಿನಿಂದ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ.
ಶಂಕಾಸ್ಪದ ರೀತಿಯಲ್ಲಿ ಅಸ್ವಸ್ಥಗೊಂಡಿದ್ದ ಫೈರೋಜ್‌ನನ್ನು ಜ. 21ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಜ. 23ರಂದು ಮೃತಪಟ್ಟಿದ್ದ.

‘ಕಾಯಿಲೆ’ ಎಂದಿದ್ದ ಮುಖ್ಯ ಅಧೀಕ್ಷಕ

ಠಾಣೆಗೆ ದೂರು ನೀಡಿದ್ದ ಕಾರಾಗೃಹದ ಅಂದಿನ ಮುಖ್ಯ ಅಧೀಕ್ಷಕ ಎಂ.ಸೋಮಶೇಖರ್, ‘ಕಾಯಿಲೆಯಿಂದ ಬಳಲುತ್ತಿದ್ದ ಫೈರೋಜ್, ಚಿಕಿತ್ಸೆಗೆ ಸ್ಪಂದಿಸದೇ ತೀರಿಕೊಂಡಿದ್ದಾನೆ’ ಎಂದು ಹೇಳಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಫೈರೋಜ್‌ನ ಸಂಬಂಧಿಕರು, ‘ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಸಾವಿಗೆ ಅವರೇ ಕಾರಣ’ ಎಂದಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ‘ಫೈರೋಜ್‌ನ ಮೈಮೇಲೆ ಗಾಯದ ಗುರುತುಗಳಿವೆ. ಹಲ್ಲೆಯಿಂದ ಮೃತಪಟ್ಟಿದ್ದಾನೆ’ ಎಂದು ವರದಿ ನೀಡಿದ್ದರು.

ಫೈರೋಜ್‌ ಸಾವಿನದ್ದು ವಿಶೇಷ ಪ್ರಕರಣ 

‘ಕಸ್ಟಡಿಯಲ್ಲಿರುವಾಗ ಆರೋಪಿಗಳು ಮೃತಪಟ್ಟರೆ, ಅಂಥ ಪ್ರಕರಣ ಸಹಜವಾಗಿ ಸಿಐಡಿಗೆ ಹಸ್ತಾಂತರವಾಗುತ್ತದೆ. ಫೈರೋಜ್‌ ಸಾವಿನದ್ದು ವಿಶೇಷ ಪ್ರಕರಣ. ಇದರ ಹಸ್ತಾಂತರಕ್ಕೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಎಫ್‌ಐಆರ್‌ ದಾಖಲಾದ ದಿನದಿಂದಲೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಪೊಲೀಸ್ ಕಮಿಷನರ್ ಅಂತಿಮ ಆದೇಶ ಹೊರಡಿಸುವುದಷ್ಟೇ ಬಾಕಿ ಇದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)