ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಂರಕ್ಷಣೆ, ಜಾಗೃತಿಗಾಗಿ ‘ಜಲಾಮೃತ’ ಯೋಜನೆ

Last Updated 19 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವನ್ನು ನಿರಂತರ ಕಾಡುತ್ತಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ, ನೀರಿನ ಸ್ವಾವಲಂಬನೆ ಸಾಧಿಸಲು ‘ಜಲಾಮೃತ’ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಘಟನೆಗಳು, ಜಲ ತಜ್ಞರು ಹಾಗೂ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದಂತೆ ಈ ಯೋಜನೆ ಅನುಷ್ಠಾನಗೊಳಿಸಲು ಜಲ ತಜ್ಞರು ಮತ್ತು ಸರ್ಕಾರೇತರ ಸಂಘಟನೆಗಳ ಸಹಯೋಗದಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ಕಾರ್ಯಸೂಚಿ ರೂಪಿಸುತ್ತಿವೆ ಎಂದರು.

ಭವಿಷ್ಯದಲ್ಲಿ ನೀರಿನ ಕೊರತೆ ಎದುರಿಸುವ ನಿಟ್ಟಿನಲ್ಲಿ ಜಲ ಚಳವಳಿ ರೂಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಬರದಿಂದ ಪಾರಾಗಲು ಜಲ ಮೂಲಗಳ ರಕ್ಷಣೆ ಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಜಲ ಜಾಗೃತಿ, ಜಲ ಸಾಕ್ಷರತೆ, ನೀರಿನ ಮಿತಬಳಕೆ ಮತ್ತು ಹಸಿರೀಕರಣ ಎಂಬ ಧ್ಯೇಯಗಳನ್ನು ಇಟ್ಟುಕೊಂಡು ಜಲ ಚಳವಳಿ ರೂಪಿಸುವುದು ‘ಜಲಾಮೃತ ಯೋಜನೆ’ಯ ಗುರಿ. ಸ್ಯಾಟ್‌ಲೈಟ್ ಚಿತ್ರಣ, ಪ್ರಾದೇಶಿಕ ಅಂಕಿ-ಅಂಶ, ಸ್ಥಳಾಕೃತಿ ಮತ್ತು ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ನೀರಿನ ಆಯವ್ಯಯ ಮತ್ತು ಸಂರಕ್ಷಣೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಾಧಿಸಲಾಗುವುದು ಎಂದು ವಿವರಿಸಿದರು.

ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮಾತನಾಡಿ, ‘ಲಭ್ಯವಿರುವ ನೀರನ್ನು ಭವಿಷ್ಯದ ದಿನಗಳಿಗಾಗಿ ಅತ್ಯಂತ ವೈಜ್ಞಾನಿಕವಾಗಿ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ರಾಜಸ್ತಾನದಂಥ ರಾಜ್ಯಗಳು ನೀರಿನ ಬಳಕೆಗೆ ಈಗಾಗಲೇ ಕಾನೂನು ಜಾರಿಗೊಳಿಸಿ, ಸಾಕಷ್ಟು ಮಿತವ್ಯಯ ಸಾಧಿಸಿವೆ. ರಾಜ್ಯದಲ್ಲೂ ಅಂತಹ ಕಾಯ್ದೆ ಜಾರಿಗೊಳಿಸುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT