ಮಂಗಳವಾರ, ನವೆಂಬರ್ 12, 2019
25 °C

ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಜಮಾತೆ ಇಸ್ಲಾಮಿ ಹಿಂದ್ ಟೀಕೆ

Published:
Updated:
Prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ಪೋಷಾಕಿನಲ್ಲಿ ಸರ್ವಾಧಿಕಾರ ನಡೆಸುತ್ತಿದ್ದಾರೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತ್ ಉಲ್ಲಾ ಹುಸೇನಿ ಹೇಳಿದರು.

‌ನಗರದಲ್ಲಿ ಮುಸ್ಲಿಂ ಬುದ್ಧಿ ಜೀವಿಗಳು, ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಮುಖ್ಯಸ್ಥರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

‘ಬಹುಮುಖ್ಯ ತೀರ್ಮಾನಗಳನ್ನು ಕೈಗೊಳ್ಳುವಾಗ ಚರ್ಚೆ, ಅಭಿಪ್ರಾಯ ಭೇದಗಳಿಗೆ ಮನ್ನಣೆ ಕೊಡುವುದು ನಿಜವಾದ ಪ್ರಜಾಪ್ರಭುತ್ವ. ಆದರೆ, ಮುಸ್ಲಿಂರ ಅಭಿಪ್ರಾಯಗಳನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿ ತಂದಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಸ್ಪಷ್ಟ ನಿರಾಕರಣೆ’ ಎಂದರು.

‘ತ್ರಿವಳಿ ತಲಾಖ್‌ ವಿಷಯದಲ್ಲಿ ಅನಾವಶ್ಯಕ ಮತ್ತು ದೋಷದಿಂದ ಕೂಡಿದ ಕಾಯ್ದೆಯನ್ನು ಜಾರಿಗೆ ತರ ಲಾಗಿದೆ. ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾದ ನಿರ್ಧಾರ’ ಎಂದರು.

‘ಕಾಶ್ಮೀರ ಕುರಿತು ತೆಗೆದುಕೊಂಡ ತೀರ್ಮಾನ ಕಣಿವೆ ಪ್ರದೇಶವನ್ನು ಸ್ತಬ್ಧಗೊಳಿಸಿದೆ. ಅಲ್ಲಿನ ಜನರ ಮೂಲಭೂತ ಹಕ್ಕುಗಳು, ಘನತೆಯನ್ನು ತಕ್ಷಣವೇ ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ದೇಶದ ಎಲ್ಲಾ ವರ್ಗಗಳ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯಬೇಕಿದೆ. ಬಹುತ್ವ ಹಾಗೂ ವೈವಿಧ್ಯದಲ್ಲಿ ಏಕತೆಯ ತತ್ವಗಳನ್ನು ಎಲ್ಲರೂ ಗೌರವಿಸಬೇಕಿದೆ’ ಎಂದು ಹೇಳಿದರು.

‘ಕೋಮುವಾದಿ, ಭೌತಿಕವಾದಿ ಮತ್ತು ಪ್ರತಿಗಾಮಿ ಶಕ್ತಿಗಳ ಕುತಂತ್ರಗಳಿಗೆ ಯುವಕರು ಬಲಿಯಾಗಬಾರದು. ನಿರಾಶೆ, ಹತಾಶೆಯಿಂದ ಹೊರ ಬರಬೇಕು’ ಎಂದು ಮನವಿ ಮಾಡಿದರು

ಪ್ರತಿಕ್ರಿಯಿಸಿ (+)