ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟಣೆ ನಿವಾರಿಸಿ, ನಡೆಯೋದಕ್ಕೆ ಜಾಗ ಉಳಿಸಿ: ಅಹವಾಲು ತೋಡಿಕೊಂಡ ಜಯನಗರ ನಿವಾಸಿಗಳು

ಸಮಸ್ಯೆ ನಿವಾರಿಸಲು ಸೌಮ್ಯಾ ರೆಡ್ಡಿ ಕಟ್ಟುನಿಟ್ಟಿನ ಸೂಚನೆ
Last Updated 17 ನವೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ನಮಗೆ ನಡೆದಾಡುವುದಕ್ಕೆ ಒಂದಿನಿತಾದರೂ ಜಾಗ ಉಳಿಸಿ, ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ, ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಿ...’

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳ ನಿವಾಸಿಗಳು ತೋಡಿಕೊಂಡ ಪ್ರಮುಖ ಅಹವಾಲುಗಳಿವು.

ಒಂದು ಕಾಲದಲ್ಲಿ ಬೆಂಗಳೂರಿನ ವ್ಯವಸ್ಥಿತ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಪ್ರದೇಶ ಹೇಗೆ ವಾಣಿಜ್ಯೀಕರಣಗೊಳ್ಳುತ್ತಿದೆ, ಬದಲಾಗುತ್ತಿರುವ ಜಯನಗರದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಹೊಸ ಬಗೆಯ ಸಮಸ್ಯೆಗಳು ಯಾವುದು ಎಂಬ ಬಗ್ಗೆ ಈ ಕಾರ್ಯಕ್ರಮ ಬೆಳಕು ಚೆಲ್ಲಿತು.

ಇಲ್ಲಿ ವಿಶಾಲವಾದ ರಸ್ತೆಗಳಿದ್ದರೂ, ಜನ ಬೇಕಾಬಿಟ್ಟಿ ವಾಹನ ನಿಲ್ಲಿಸುವುದರಿಂದ ಹೇಗೆ ಸ್ಥಳೀಯರ ನೆಮ್ಮದಿ ಮರೆಯಾಗುತ್ತಿದೆ ಎಂಬುದನ್ನು ಅನೇಕರು ಎಳೆಎಳೆಯಾಗಿ ಬಿಚ್ಚಿಟ್ಟರು. ರಸ್ತೆಯನ್ನು ಆಕ್ರಮಿಸಿಕೊಳ್ಳುವ ಬೀದಿ ವ್ಯಾಪಾರಿಗಳು, ಶಾಶ್ವತವಾಗಿ ಠಿಕಾಣಿ ಹೂಡಿರುವ ತಳ್ಳುಗಾಡಿಗಳು ಇಲ್ಲಿನ ರಸ್ತೆಗಳಲ್ಲಿ ಹೇಗೆ ಸಂಚಾರ ದಟ್ಟಣೆ ಸಮಸ್ಯೆ ಸೃಷ್ಟಿಸುತ್ತಿವೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು.

ಜನರ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಆಲಿಸಿದ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಪಾಲಿಕೆ ಸದಸ್ಯರು, ಕಾಲಮಿತಿಯೊಳಗೆ ಇವುಗಳನ್ನು ಬಗೆಹರಿಸುವ ಭರವಸೆ ನೀಡಿದರು.

‘ಭೈರಸಂದ್ರ 10ನೇ ಮುಖ್ಯರಸ್ತೆಯನ್ನು (ಅಶೋಕ ಪಿಲ್ಲರ್‌ ರಸ್ತೆವರೆಗೂ) ಬೇಲ್‌ ಪುರಿ, ಪಾನಿ ಪುರಿ ಗಾಡಿಗಳೇ ಆಕ್ರಮಿಸಿಕೊಂಡಿರುತ್ತವೆ. ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ಬೇಲ್‌ ಪುರಿ ಮೆಲ್ಲುತ್ತಾ ನಿಲ್ಲುತ್ತಾರೆ. ಹಾಗಾಗಿ ಇಲ್ಲಿ ನಿತ್ಯವೂ ಸಂಚಾರ ದಟ್ಟಣೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದು ಅನಿಲ್‌ ಕುಮಾರ್ ವಿವರಿಸಿದರು.

‘ಇಲ್ಲಿ ರಸ್ತೆಯಲ್ಲೇ ತಳ್ಳುಗಾಡಿ ನಿಲ್ಲಿಸುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಭೈರಸಂದ್ರ ವಾಡ್‌ನ ಪಾಲಿಕೆ ಸದಸ್ಯ ಎನ್‌.ನಾಗರಾಜು ಭರವಸೆ ನೀಡಿದರು.

‘ಜೆ.ಪಿನಗರ 1ನೇ ಹಂತದ 9ನೇ ಅಡ್ಡ ರಸ್ತೆ ಬಳಿ ಹೂವು, ಹಣ್ಣುಗಳನ್ನು ಮಾರುವ ತಳ್ಳುಗಾಡಿಗಳನ್ನು ನಿಲ್ಲಿಸುತ್ತಾರೆ, ಕೆಲವೊಮ್ಮೆ ಎರಡು ಮೂರು ತಿಂಗಳುಗಳವರೆಗೂ ಅವು ಅಲ್ಲೇ ನಿಂತಿರುತ್ತವೆ. ಇಲ್ಲಿ ರಸ್ತೆ ಇದ್ದು ಏನು ಪ್ರಯೋಜನ’ ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರಶ್ನಿಸಿದರು.

‘ಜೆ.ಪಿ.ನಗರ 2ನೇ ಹಂತದ 15ನೇ ಅಡ್ಡ ರಸ್ತೆ ಬಳಿ ಕೆನರಾ ಬ್ಯಾಂಕ್‌ ಶಾಖಾ ಕಚೇರಿಯ ಬಳಿಯೂ ಜನ ರಸ್ತೆಯಲ್ಲೇ ವಾಹನ ನಿಲ್ಲಿಸಿ ಹೋಗುತ್ತಾರೆ. ಇಲ್ಲಿ ಯಾವಾಗಲೂ ಸಂಚಾರ ದಟ್ಟಣೆ ಸಮಸ್ಯೆ ಮಾಮೂಲಿ’ ಎಂದು ಸತ್ಯನಾರಾಯಣ್‌ ದೂರಿದರು.

‘ಇಲ್ಲಿ ಬಿಬಿಎಂಪಿ ಕಾಮಗಾರಿ ನಡೆಯುತ್ತಿರುವುದರಿಂದ ಸಮಸ್ಯೆ ಆಗಿದೆ. ‌ನಿಲುಗಡೆ ನಿಷೇಧಿಸಿರುವ ಜಾಗದಲ್ಲಿ ಯಾರೇ ವಾಹನ ನಿಲ್ಲಿಸಿದರೂ ತಕ್ಷಣವೇ ಸಹಾಯವಾಣಿ 100ಕ್ಕೆ ಅಥವಾ ಸ್ಥಳೀಯ ಸಂಚಾರ ಪೊಲೀಸ್‌ ಠಾಣೆಗೆ ಕರೆ ಮಾಡಿ’ ಎಂದು ಸಂಚಾರ ಠಾಣೆಯ ಪಿಎಸ್‌ಐ ಫಕ್ರುದ್ದೀನ್‌ ಭರವಸೆ ನೀಡಿದರು.

‘ಎಸ್‌ಬಿಐ ಮ್ಯಾನೇಜರ್‌ಗೆ ಕನ್ನಡ ಬರಲ್ಲ’

‘ಸಾರಕ್ಕಿ ವಾರ್ಡ್‌ನ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರಿಗೆ ಕನ್ನಡವೇ ಬರುವುದಿಲ್ಲ. ಈ ಶಾಖೆಯಲ್ಲಿ ಹಿರಿಯ ನಾಗರಿಕರಿಗೆ ಎಳ್ಳಿನಿತೂ ಗೌರವ ಸಿಗುತ್ತಿಲ್ಲ. ಮೊದಲು ವ್ಯವಸ್ಥಾಪಕರನ್ನು ಬದಲಾಯಿಸಿ’ ಎಂದು ಮುತ್ತರಾಜ್‌ ಆರೋಪಿಸಿದರು.

‘ಕನ್ನಡದಲ್ಲಿ ಮಾತಾಡಿ ಎಂದು ವ್ಯವಸ್ಥಾಪಕರಲ್ಲಿ ವಿನಂತಿಸಿದರೆ, ‘ಇಟ್ಸ್‌ ನನ್‌ ಆಫ್‌ ಯುವರ್‌ ಬಿಜಿನೆಸ್‌’ ಎಂದು ಇಂಗ್ಲಿಷ್‌ನಲ್ಲೇ ದಾರ್ಷ್ಟ್ಯದಿಂದಉತ್ತರಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಅನೇಕ ಹಿರಿಯ ನಾಗರಿಕರು ದನಿಗೂಡಿಸಿದರು. ‘ಈ ಶಾಖೆ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕನ್ನಡ ಬಾರದ ಅಧಿಕಾರಿಗಳನ್ನು ಇಲ್ಲಿನ ಶಾಖೆಗಳಿಗೆ ನೇಮಿಸಬಾರದು’ ಎಂದು ಅವರು ಒತ್ತಾಯಿಸಿದರು.

‘ಈ ಬಗ್ಗೆ ಬ್ಯಾಂಕ್‌ನವರಿಂದ ವಿವರಣೆ ಕೇಳುತ್ತೇನೆ’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಭರವಸೆ ನೀಡಿದರು.

‘ಬ್ರಾಹ್ಮಣೇತರರ ಪುಣ್ಯತಿಥಿಗೆ ಜಾಗವಿಲ್ಲ’

‘ಯಾರಾದರೂ ಸತ್ತರೆ 13ನೇ ದಿನದ ಪುಣ್ಯತಿಥಿ ನಡೆಸುವುದಕ್ಕೆ ಬ್ರಾಹ್ಮಣೇತರರಿಗೆ ಜಯನಗರದಲ್ಲಿ ಎಲ್ಲೂ ಜಾಗ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಒದಗಿಸಿ’ ಎಂದು ಪಟ್ಟಾಭಿರಾಮನಗರದ ಬಾಲಾಜಿ ನಂದಗೋಪಾಲ್‌ ಕೋರಿದರು.

‘ಸ್ಮಶಾನಗಳಲ್ಲಿ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆನ್‌ಲೈನ್‌ನಲ್ಲಿ ಜಾಗ ಕಾಯ್ದಿರಿಸುವಾಗ ಒಟಿಪಿ ಬರುವವರೆಗೆ ಕಾಯಬೇಕು. ಬಳಿಕ ಜಾಗ ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ಬರುತ್ತಿದೆ. ಜಾಗ ಗೊತ್ತುಪಡಿಸುವುದಕ್ಕೆ ನಾಲ್ಕೈದು ಗಂಟೆ ಕಾಯಬೇಕಾದ ಸ್ಥಿತಿ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನಸ್ಪಂದನಲ್ಲಿ ಭಾಗವಹಿಸಿದ್ದ ಜನ.
ಜನಸ್ಪಂದನಲ್ಲಿ ಭಾಗವಹಿಸಿದ್ದ ಜನ.

‘ಮೈದಾನ– ಊಟಕ್ಕಿಲ್ಲದ ಉಪ್ಪಿನಕಾಯಿ’

ಜಯನಗರದ ಶಾಲಿನಿ ಹಾಗೂ ಚಾಮುಂಡೇಶ್ವರಿ ಮೈದಾನಗಳಲ್ಲಿ ಯಾವಾಗಲೂ ವಾಣಿಜ್ಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಎಂದು ಮನೋಜ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಕಾಂಬರಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಮಾಲತಿ, ‘ಶಾಸಕರಾಗಲೀ, ಪಾಲಿಕೆ ಸದಸ್ಯರಾಗಲೀ ಅನುಮತಿ ನೀಡುತ್ತಿಲ್ಲ. ಪಾಲಿಕೆ ಆಯಕ್ತರಿಂದಲೇ ನೇರವಾಗಿ ಅನುಮತಿ ಪಡೆಯುತ್ತಾರೆ’ ಎಂದರು.

‘ಶಾಪಿಂಗ್ ಕಾಂಪ್ಲೆಕ್ಸ್‌– ಶೀಘ್ರವೇ ಶಾಪ ವಿಮುಕ್ತಿ’

‘ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ ಸಮಸ್ಯೆಗಳಿಂದ ಶೀಘ್ರವೇ ಶಾಪವಿಮುಕ್ತಿ ಆಗಲಿದೆ. ಡಿಸೆಂಬರ್‌ 6 ಒಳಗೆ ಹೊಸ ಕಟ್ಟಡಕ್ಕೆ ಮಳಿಗೆಗಳು ಸ್ಥಳಾಂತರಗೊಳ್ಳಲಿವೆ’ ಎಂದು ಸೌಮ್ಯಾ ರೆಡ್ಡಿ ಭರವಸೆ ನೀಡಿದರು.

ಬಿಡಿಎ ವಾಣಿಜ್ಯ ಸಮುಚ್ಚಯವನ್ನು ಕೆಡವಿ ಅಲ್ಲಿ ಮಾಲ್‌, ಮಲ್ಟಿಪ್ಲೆಕ್ಸ್‌ನಂತೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲಾಗುತ್ತಿದೆ. ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರ ಇದ್ದ ಜಾಗದಲ್ಲಿ ನಿರ್ಮಿಸಿರುವ ವಾಣಿಜ್ಯ ಸಮುಚ್ಚಯದ ಮೊದಲ ಬ್ಲಾಕ್‌ನ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳೇ ಕಳೆದಿವೆ. ಇಲ್ಲಿ 177 ಕೇಂದ್ರ ಮಳಿಗೆಗಳಿವೆ.

ಮುಖ್ಯ ಕಟ್ಟಡದ ಎಲ್ಲ ಮಳಿಗೆಗಳನ್ನು ಕೆಡವಿ 2ನೇ ಹಂತದ ಕಾಮಗಾರಿ ಆರಂಭಿಸಬೇಕಿದೆ. ಇಲ್ಲಿರುವ ಜನತಾ ಬಜಾರ್‌, ಕೆನರಾ ಬ್ಯಾಂಕ್‌ ಹಾಗೂ ತರಕಾರಿ ಮಾರುಕಟ್ಟೆಯನ್ನು 1ನೇ ಬ್ಲಾಕ್‌ನ ಕಟ್ಟಡಕ್ಕೆ ಸ್ಥಳಾಂತರಿಸಬೇಕಾಗಿದೆ.

‘ಹೊಸ ಬ್ಲಾಕ್‌ನ ಕಾಮಗಾರಿ ತಿಂಗಳ ಒಳಗೆ ಪ್ರಾರಂಭವಾಗಲಿದೆ. 1500 ಆಸನ ವ್ಯವಸ್ಥೆಯ ಸುಸಜ್ಜಿತ ಸಭಾಂಗಣ, 750 ಕಾರು ಹಾಗೂ 1500 ದ್ವಿಚಕ್ರ ವಾಹನ ನಿಲ್ಲಿಸುವಷ್ಟು ವಿಶಾಲವಾದ ವಾಹನ ನಿಲುಗಡೆ ತಾಣ ಬರಲಿದೆ. ವಿಧಾನಸೌಧ ಹಾಗೂ ಹೈಕೋರ್ಟ್ ಆವರಣ ಬೇಲಿಯ ಮಾದರಿಯಲ್ಲೇ ಇಲ್ಲಿ ಬೇಲಿ ನಿರ್ಮಿಸಲಾಗುತ್ತದೆ’ ಎಂದು ಎನ್‌.ನಾಗರಾಜು ತಿಳಿಸಿದರು.

‘ಶಾಪಿಂಗ್ ಕಾಂಪ್ಲೆಕ್ಸ್‌ ಸುತ್ತಲೂ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದಾರೆ. ಅವರು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ’ ಎಂದು ಎನ್‌.ಕೇಶವ ಕುಮಾರ್‌ ಆರೋಪಿಸಿದರು.

‘ಇಲ್ಲಿನ ಬೀದಿ ವ್ಯಾಪಾರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ’ ಎಂದು ನಾಗರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀಳುವ ಸ್ಥಿತಿಯಲ್ಲಿದ್ದ ಕೊಂಬೆ ತೆರವು

‘ಪ್ರಜಾವಾಣಿ’ ಜನಸ್ಪಂದನ ಮುಗಿದು ಒಂದು ತಾಸಿನಲ್ಲಿಯೇ ಜಯನಗರದ 5ನೇ ಬ್ಲಾಕ್‌ನಲ್ಲಿ, ಬೀಳುವ ಹಂತದಲ್ಲಿದ್ದ ಮರಗಳ ಕೊಂಬೆಗಳನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುವ ಕಾರ್ಯಾಚರಣೆ ಮಾಡಿದ್ದಾರೆ.

5ನೇ ಬ್ಲಾಕ್‌ನ ನಿವಾಸಿ ಬಾಹುಬಲಿ ರಾಜು ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರು. ‘ಸಾಕಷ್ಟು ಮರಗಳು ಒಣಗಿ ಬೀಳುವ ಹಂತದಲ್ಲಿವೆ. ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಅವರು ಹೇಳಿದರು.

ಡ್ರಗ್ಸ್‌ ಹಾವಳಿ– ನಿವಾಸಿಗಳ ಕಳವಳ

ಜಯನಗರದ ಕೆಲವೆಡೆ ಮಾದಕ ದ್ರವ್ಯ ಸೇವನೆ ಹಾವಳಿ ಹೆಚ್ಚುತ್ತಿರುವ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದರು.

‘ಮನೆಯ ಮುಂದಿನ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಾರೆ. ವಾಹನಗಳಲ್ಲೇ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ. ಕುಡಿದು ಬಾಟಲಿಗಳನ್ನು ಮನೆಯ ಅಂಗಳದ ಗಿಡಗಳ ಬಳಿ ಎಸೆದು ಹೋಗುತ್ತಾರೆ. ಇಲ್ಲಿ ಒಂದು ಪಾರ್ಟಿ ಹಾಲ್‌ಗೆ ಬಿಬಿಎಂಪಿ ಅನುಮತಿ ಕೊಟ್ಟಿದೆ. ತಿಂದು, ಕುಡಿದು ಕಸವನ್ನು ಎಲ್ಲಿ ಬೇಕಾದರಲ್ಲಿ ಬಿಸಾಡುತ್ತಿದ್ದಾರೆ’ ಎಂದು ಜಯನಗರ ‘ಟಿ’ ಬ್ಲಾಕ್‌ನ ಸುಮನ್‌ ಗಮನಸೆಳೆದರು.

‘ಹೋಟೆಲ್‌ ಪವಿತ್ರಾ ಹತ್ತಿರ ಹಾಗೂ ವಿಜಯಾ ಕಾಲೇಜು ಹತ್ತಿರ ಸಿಗರೇಟು ಸೇದುತ್ತಾ ನಿಲ್ಲುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಡ್ರಗ್ಸ್‌ ಕೂಡ ಮಾರಾಟವಾಗುತ್ತಿದೆ’ ಎಂದು ಜಯನಗರ 4ನೇ ಬ್ಲಾಕ್‌ನಡಾ. ರಾಮಮೂರ್ತಿ ದೂರಿದರು.

‘ತಿಲಕನಗರದಲ್ಲೂ ಡ್ರಗ್ ಸೇವನೆ ಹಾವಳಿ ಇದೆ. ಇಲ್ಲಿ ‍ಪೊಲೀಸರು ಗಸ್ತು ಹೆಚ್ಚಿಸಬೇಕು’ ಎಂದು ಪ್ರೇಮ್‌ ಕುಮಾರ್‌ ಸಲಹೆ ನೀಡಿಸಿದರು.

ಮಾದಕ ದ್ರವ್ಯ ಸೇವೆನೆ ವಿರುದ್ಧ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ನಂಜೇಗೌಡ ತಿಳಿಸಿದರು. ಜಾಗೃತಿ ಮೂಡಿಸಿದರೆ ಸಾಲದು. ಇಂತಹ ದೂರು ಮತ್ತೆ ಬರಬಾರದು. ಡ್ರಗ್ಸ್‌ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸೌಮ್ಯಾ ರೆಡ್ಡಿ ಖಡಕ್‌ ಸೂಚನೆ ನೀಡಿದರು.

‘ವಾಣಿಜ್ಯೀಕರಣ– ನೆಮ್ಮದಿ ಹರಣ’

ಜಯನಗರ ಹಾಗೂ ಜೆ.ಪಿ.ನಗರಗಳ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ಕೆಲವು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಪ್ರಸ್ತಾಪಿಸಿದ ಜೆ.ಪಿ ನಗರ ಮೊದಲನೇ ಹಂತದ ನಿವಾಸಿ ಹೇಮಾ, ‘35ನೇ ಮುಖ್ಯ ರಸ್ತೆಯಲ್ಲಿ ಒಂದು ಹೋಟೆಲ್‌ ಇದೆ. ಸಾಕಷ್ಟು ವಾಹನಗಳು ಅಲ್ಲಿ ಬಂದು ನಿಲ್ಲುತ್ತವೆ. ಕುಡಿದು ತಿಂದು ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ವಾಣಿಜ್ಯ ಚಟುವಟಿಕೆ ಕಡಿವಾಣ ಹಾಕಬೇಕು’ ಎಂದರು.

ಕಸ ಮುಕ್ತ ಜಯನಗರದ ಕನಸು: ಸೌಮ್ಯ

‘ವಾಹನ ದಟ್ಟಣೆ ಹಾಗೂ ಕಸ ಮುಕ್ತ ಜಯನಗರವನ್ನು ಕಟ್ಟುವುದು ನನ್ನ ಕನಸು’ ಎಂದು ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.

‘ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶಕ್ಕೆ ವ್ಯತ್ಯಾಸ ಇರಬೇಕು. ಎಲ್ಲೆಂದರಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವುದನ್ನು ತಡೆಯಬೇಕು. ವಾಹನ ದಟ್ಟಣೆ ಬೆಂಗಳೂರಿನ ಸಮಸ್ಯೆ. ಇದು ಜಯನಗರದಲ್ಲಿ ಮಾತ್ರ ಇಲ್ಲ. ಎಲ್ಲರೂ ಕಾರಿನಲ್ಲೇ ಓಡಾಡಲು ಇಷ್ಟಪಡ್ತಾರೆ. ಇದೆಲ್ಲಾ ಕಡಿಮೆ ಮಾಡಿದರೆ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದರು.

‘ಸಂಚಾರಿ ಪೊಲೀಸರು ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದಾರೆ. ಕಸದ ಸಮಸ್ಯೆ ಸ್ವಲ್ಪ ಇದೆ. ಇದಕ್ಕಾಗಿ ಜಾಗೃತಿ ಹೆಚ್ಚಿಸಲು ಭಿತ್ತಿಪತ್ರಗಳನ್ನು ಹಂಚಿದ್ದೇವೆ. ದಿನಕ್ಕೆ ಎರಡು ಬಾರಿ ಒಣಕಸ ಸಂಗ್ರಹಿಸಬೇಕು. ಹಸಿ ಕಸವನ್ನು ಕೂಡ ಪ್ರತಿದಿನ ಸಂಗ್ರಹ ಮಾಡಬೇಕು. ಅಕ್ರಮವಾಗಿ ಕಸವನ್ನು ಎಲ್ಲೆಂದರಲ್ಲಿ ಹಾಕಲಾಗುತ್ತಿದೆ. ರಾತ್ರಿ ಹೊತ್ತು ನಾವು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ, ಕೆಲವರಿಗೆ ದಂಡ ಹಾಕಿದ್ದೇವೆ’ ಎಂದು ಹೇಳಿದರು.

‘ನಮ್ಮ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ನಾಗರೀಕರ ಸಹಕಾರ ಬೇಕು. ಇಲ್ಲಿ ಶಿಕ್ಷಿತರು ಜಾಸ್ತಿ ಇದ್ದಾರೆ. ಕಸ ನಿರ್ವಹಣೆಯಿಂದ ಹಿಡಿದು ಎಲ್ಲಾ ಕೆಲಸಗಳಲ್ಲೂ ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

ದೂರುಗಳಿಗೆ ಸಿಕ್ಕಿತು ಸ್ಥಳದಲ್ಲೇ ಪರಿಹಾರ

ಮುತ್ತರಾಜ್‌(ಸಾರಕ್ಕಿ ವಾರ್ಡ್‌): ಸಾರಕ್ಕಿ ಗೇಟ್ ಬಳಿ ವಾಹನ ದಟ್ಟಣೆ ಮಿತಿ ಮೀರಿದ್ದು, ಅಪಘಾತಗಳು ಸಂಭವಿಸುತ್ತಿವೆ. ಈಶ್ವರ ದೇವಸ್ಥಾನದ ಬಳಿಯ ಉದ್ಯಾನದ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಒಂದು ಪೆಟ್ಟಿಗೆ ಅಂಗಡಿ ಇದೆ. ಇಲ್ಲಿನ ಗ್ರಾಹಕರು ಟೀ, ಕಾಫಿ ಕುಡಿದು ಪ್ಲಾಸ್ಟಿಕ್‌ ಲೋಟಗಳನ್ನು ರಸ್ತೆಗೆ ಬಿಸಾಡುತ್ತಾರೆ. ಈ ಅನಧಿಕೃತ ಅಂಗಡಿಗೆ ವಿದ್ಯುತ್‌ ಸಂಪರ್ಕವನ್ನೂ ಕೊಟ್ಟಿದ್ದಾರೆ. ಇದು ಹೇಗೆ ಸಾಧ್ಯ?

ಫಕ್ರುದ್ದೀನ್‌(ಸಂಚಾರ ಠಾಣೆ ಪಿಎಸ್‌ಐ): ಪಾದಚಾರಿ ಮಾರ್ಗದಲ್ಲಿ ಗಾಡಿ ನಿಲ್ಲಿಸುವುದನ್ನು ತಡೆಯಲು ಬ್ಯಾರಿಕೇಡ್‌ ಹಾಕಿದ್ದೇವೆ. ವಾಹನ ನಿಲುಗಡೆ ನಿಷೇಧಿಸಲೂ ಕ್ರಮ ತೆಗೆದುಕೊಳ್ಳುತ್ತೇವೆ.

ನಾಗರಾಜ್‌(ಬೆಸ್ಕಾಂ ಅಧಿಕಾರಿ): ಅನಧಿಕೃತ ಅಂಗಡಿಗೆ ವಿದ್ಯುತ್‌ ಸಂಪರ್ಕ ನೀಡಿದ್ದರೆ ಕಡಿತಗೊಳಿಸುತ್ತೇವೆ.

ಸೌಮ್ಯಾ ರೆಡ್ಡಿ(ಶಾಸಕಿ): ನಾನೇ ಖುದ್ದಾಗಿ ಈ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಅಕ್ರಮ ಕಂಡುಬಂದರೆ ತಕ್ಷಣ ಅಂಗಡಿಯನ್ನು ತೆರವು ಮಾಡಿಸುತ್ತೇನೆ.

ಅಶ್ವತ್ಥನಾರಾಯಣ್‌(ನವೋದಯ ತಾರಾ ಮಂಡಲ ಲೇಔಟ್‌): ನಮ್ಮ ಲೇಔಟ್‌ನಲ್ಲಿ ನೀರು ಹರಿಯಲು 12 ಅಡಿ ಅಗಲದ ರಾಜಕಾಲುವೆ ಇದೆ. ಇದರ ಅಗಲ ಜಯಂತಿ ಗಾರ್ಡನ್‌ನಿಂದ ಮುಂದಕ್ಕೆ ಕೇವಲ 1 ಅಡಿಯಷ್ಟಿದೆ. ಹಾಗಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ ಮನೆಗಳು ಜಲಾವೃತವಾಗುತ್ತವೆ.

ಲೋಕೇಶ್‌(ಬಿಬಿಎಂಪಿ ರಾಜಕಾಲುವೆ ವಿಭಾಗದ ಇ.ಇ): ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಡಲಾಗಿದೆ.

ಎಂ.ಮಾಲತಿ(ಪಾಲಿಕೆ ಸದಸ್ಯೆ): ಈ ಕಾಮಗಾರಿಗೆ ಅಂದಾಜುಪಟ್ಟಿ ಸಿದ್ಧವಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ

ಮನೋಜ್‌ ಕುಮಾರ್‌(ಸಾರಕ್ಕಿ ವಾರ್ಡ್‌): ಮಾರೇನಹಳ್ಳಿಯಲ್ಲಿ ರಸ್ತೆಗಳು ಕಿತ್ತು ಹೋಗಿವೆ. ಓಡಾಡಲು ಆಗುತ್ತಿಲ್ಲ. ರಸ್ತೆ ಗುಂಡಿ ಬಗ್ಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕವೂ ಈ ನಿರ್ಲಕ್ಷ್ಯ ಏಕೆ?

ರಾಥೋಡ್‌(ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌): ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿವೆ, ಗುಂಡಿ ಉಳಿದಿದ್ದರೆ ತಕ್ಷಣವೇ ಮುಚ್ಚಿಸುತ್ತೇವೆ.

ಬಾಲಾಜಿ ನಂದಗೋಪಾಲ್‌(ಪಟ್ಟಾಭಿರಾಮನಗರ ವಾರ್ಡ್‌): ಆರು ತಿಂಗಳಿನಿಂದ 100ನೇ ಅಡಿ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಪಾದಚಾರಿ ಮಾರ್ಗವನ್ನೂ ಒತ್ತುವರಿ ಮಾಡಲಾಗಿದೆ. ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ.

ಸದಾಶಿವ(ಮೆಟ್ರೊ ಕಾರ್ಯಪಾಲಕ ಎಂಜಿನಿಯರ್‌): ತಿಂಗಳ ಒಳಗೆ ಪಾದಚಾರಿ ಮಾರ್ಗದ ಸಮಸ್ಯೆ ನಿವಾರಿಸುತ್ತೇವೆ. ರಸ್ತೆಯಲ್ಲೂ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತೇವೆ.

ವೈ.ಎಸ್‌.ಉಷಾ(ಜಯನಗರ 4ನೇ ‘ಟಿ’ ಬ್ಲಾಕ್‌): 40ನೇ ಕ್ರಾಸ್‌ ರಸ್ತೆಯಲ್ಲಿರುವ ಮನೆಗಳ ಎದುರೇ ವಾಹನ ನಿಲ್ಲಿಸಿ ಹೋಗುತ್ತಾರೆ. ಕಸ ಗುಡಿಸುವುದಕ್ಕೂ ಆಗುವುದಿಲ್ಲ.

ಫಕ್ರುದ್ದೀನ್‌ : ಮನೆ ಮುಂದೆ ವಾಹನ ನಿಲ್ಲಿಸಿದರೆ ಗಮನಕ್ಕೆ ತನ್ನಿ. ತಕ್ಷಣವೇ ತೆರವುಗೊಳಿಸುತ್ತೇವೆ.

ವಾಸುದೇವರಾಜ್‌(ಜೆ.ಪಿ.ನಗರ): ಮಾರೇನಹಳ್ಳಿಯಲ್ಲಿ ಅಕ್ರಮವಾಗಿ ಕಾರ್ಖಾನೆ ನಿರ್ಮಾಣ ಮಾಡಲಾಗಿದೆ. ಮಾಲೀಕರು ಅಲ್ಲಿ ವಾಸಿಸುವುದಿಲ್ಲ. ಆದರೆ ಮೂಲ ನಿವಾಸಿಗಳಾದ ನಾವು ಕಷ್ಟ ಪಡಬೇಕಾಗಿದೆ.

ಕೆ.ಎನ್‌.ಲಕ್ಷ್ಮಿ ನಟರಾಜ್‌(ಪಾಲಿಕೆ ಸದಸ್ಯೆ): ಒಂದು ತಿಂಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮೌಂಟೇನ್‌ ಸ್ಟ್ರೀಟ್‌ ಬಳಿ ವಸತಿ ಪ್ರದೇಶದಲ್ಲಿ 5 ಮಹಡಿಗಳ ವಾಣಿಜ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಈ ಬಗ್ಗೆ ಪರಿಶೀಲಿಸಬೇಕು

ಎನ್‌.ನಾಗರಾಜು(ಪಾಲಿಕೆ ಸದಸ್ಯ): ಕಟ್ಟಡ ನಿಯಮ ಉಲ್ಲಂಘನೆ ಆಗಿದ್ದರೆ ದೂರು ಕೊಡಿ. ಎಂಜಿನಿಯರ್‌ಗಳು ತಕ್ಷಣವೇ ಕ್ರಮ ಕೈಗೊಳ್ಳುತ್ತಾರೆ.

ಫಾತಿಮಾ(ಜಯನಗರ 4ನೇ ಬ್ಲಾಕ್‌): ಕಾರ್ಮೆಲ್‌ ಕಾನ್ಮೆಂಟ್‌ ಹತ್ತಿರ ಬಿಎಂಟಿಸಿ ಬಸ್‌ಗಳೇ ಬರುತ್ತಿಲ್ಲ. ಬೇಕೆಂದೇ ಬೇರೆ ದಾರಿಯಲ್ಲಿ ಹೋಗುತ್ತಾರೆ. ನಂತರ ಡಿಪೊದಲ್ಲಿ ನಿಂತು ಹರಟೆ ಹೊಡೆಯುತ್ತಾರೆ.

ಸೌಮ್ಯಾ ರೆಡ್ಡಿ : ತಕ್ಷಣವೇ ಕ್ರಮ ಜರುಗಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹೇಳುತ್ತೇನೆ.

ಜಯತೀರ್ಥ(ಜೆ.ಪಿ ನಗರ 2ನೇ ಹಂತ): 19ನೇ ಮುಖ್ಯರಸ್ತೆ, 15ನೇ ಕ್ರಾಸ್‌ನಲ್ಲಿ ಒಂದ ಕಟ್ಟಡದಲ್ಲಿ ಮೂರು ಪಬ್‌ ಮತ್ತು ಬಾರ್‌ಗಳಿವೆ. ಇಲ್ಲಿನ ಗಿರಾಕಿಗಳು ಮಧ್ಯ ರಾತ್ರಿ ಬಳಿಕವೂ ಕುಡಿದು ಗಲಾಟೆ ಮಾಡುತ್ತಾರೆ. ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಆಗುತ್ತಿದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿ

ನಂಜೇಗೌಡ(ಪೊಲೀಸ್ ಅಧಿಕಾರಿ): ಈ ಕುರಿತು ದೂರು ಬಂದಿದೆ. ತಕ್ಷಣವೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಿಸಿದ್ದೇವೆ.

ಧನಂಜಯ್‌(ಸಾರಕ್ಕಿ ವಾರ್ಡ್‌): ನಮ್ಮ ವಾರ್ಡ್‌ನಲ್ಲಿರುವ ಒಂದು ಖಾಲಿ ನಿವೇಶನದಲ್ಲಿ ಬೇಕಾಬಿಟ್ಟಿ ಕಸ ತಂದು ಸುರಿಯುತ್ತಾರೆ. ಗಬ್ಬು ನಾರುತ್ತಿದೆ. ಬಿಬಿಎಂಪಿ ಕಾರ್ಮಿಕರು ಅದಕ್ಕೆ ಬೆಂಕಿ ಹಾಕಿ ಹೋಗುತ್ತಾರೆ.

ಲೋಕೇಶ್‌(ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌): ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳಲಿದ್ದೇವೆ.

ಸಿ.ಎಸ್‌.ಸತ್ಯನಾರಾಯಣ(ಜೆ.ಪಿ ನಗರ, ಮಾರೇನಹಳ್ಳಿ): ಮೆಟ್ರೊ ನಿಲ್ದಾಣದ ಬಳಿ ನಿಲ್ಲುವ ಆಟೊರಿಕ್ಷಾದವರು ಗ್ರಾಹಕರು ಕರೆದಲ್ಲಿಗೆ ಬಾಡಿಗೆಗೆ ಬರಲು ನಿರಾಕರಿಸುತ್ತಾರೆ. ಕೆಲವರು ಮೆಟ್ರೊ ಪ್ರಯಾಣಿಕರನ್ನು ವೇಶ್ಯಾವಾಟಿಕೆ ಅಡ್ಡೆಗಳಿಗೆ ಕರೆದೊಯ್ಯುವ ಆಮಿಷ ಒಡ್ಡುತ್ತಿದ್ದಾರೆ. ರಾಜಾರೋಷವಾಗಿಯೇ ಇದು ನಡೆಯುತ್ತಿದೆ.

ಫಕ್ರುದ್ದೀನ್‌: ಈ ಬಗ್ಗೆ ಆಟೊ ಚಾಲಕರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಗ್ರಾಹಕರು ಕರೆದಲ್ಲಿಗೆ ರಿಕ್ಷಾದವರು ಬರದಿದ್ದರೆ ನಮಗೆ ದೂರು ಕೊಡಿ

ಅರುಣ್‌ಕುಮಾರ್‌(ಜಯನಗರ): ಜಯನಗರಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಯಾಲಿಸಿಸ್‌ ಕೇಂದ್ರ ಬೇಕು.

ದೀಪಿಕಾ(ಕಾರ್ಪೊರೇಟರ್‌): ಈ ಬಗ್ಗೆ ಈಗಾಗಲೇ ಪ್ರಸ್ತಾವ ಸಿದ್ಧವಾಗಿದೆ. ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರು ₹ 3 ಕೋಟಿ ದೇಣಿಗೆ ನೀಡಲು ಒಪ್ಪಿದ್ದಾರೆ. ಕೆಲಸ ಶೀಘ್ರವೇ ಆರಂಭವಾಗಲಿದೆ.

ಸೌಮ್ಯಾ ರೆಡ್ಡಿ(ಶಾಸಕಿ): ಸದ್ಯದಲ್ಲೇ ಸುಧಾಮೂರ್ತಿ ಅವರನ್ನು ಭೇಟಿ ಮಾಡಿ ಈ ಕಾಮಗಾರಿ ಕುರಿತು ಚರ್ಚೆ ಮಾಡುತ್ತೇನೆ.

14. ಷಣ್ಮುಗಂ: ಕೊಳೆಗೇರಿ ನಿರ್ಮೂಲನಾ ಮಂಡಳಿಯವರು ಜಯನಗರ ಪೂರ್ವ ವಾರ್ಡ್‌ನಲ್ಲಿ ನಿರ್ಮಿಸಿರುವ ಸಮುಚ್ಚಯದಲ್ಲಿ 210 ಮನೆಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗಿದೆ. ಆದರೆ, 30 ಮನೆಗಳನ್ನು ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಹೊರಗೆ ಹಾಕಿ ಅರ್ಹರಿಗೆ ಅದನ್ನು ಹಂಚಿಕೆ ಮಾಡಿ.

ಆರ್‌.ಗೋವಿಂದ ನಾಯ್ಡು( ಜಯನಗರ ಪೂರ್ವ ವಾರ್ಡ್‌ ಪಾಲಿಕೆ ಸದಸ್ಯ): ಇಲ್ಲಿ ಮನೆ ಹಂಚಿಕೆ ವೇಳೆ ಪಾರದರ್ಶಕತೆ ಕಾಪಾಡಬೇಕು. ತಪ್ಪೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು

ಸೌಮ್ಯಾರೆಡ್ಡಿ: ಈ ಪ್ರಕರಣ ನ್ಯಾಯಾಲಯದಲ್ಲಿದೆ. ಯಾರೇ ಅಕ್ರಮವಾಗಿ ನೆಲೆಸಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯಾಲಯದ ಆದೇಶದಂತೆ ಮನೆ ಹಂಚಿಕೆ ಮಾಡುತ್ತೇವೆ.

ಹನುಮದಾಸ್‌(ಪಟ್ಟಾಭಿರಾಮನಗರ ವಾರ್ಡ್‌): ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ. ಒಳಚರಂಡಿ ಕಟ್ಟಿಕೊಂಡು ದುರ್ವಾಸನೆ ಬರುತ್ತಿದೆ.

ನಾಗರತ್ನ (ಕಾರ್ಪೊರೇಟರ್‌): ಆದಷ್ಟು ಬೇಗ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ದೂರವಾಣಿ ಸಂಖ್ಯೆ

ಕಾರ್ಪೊರೇಟರ್‌ಗಳು

ಎಚ್‌.ಸಿ ನಾಗರತ್ನ ರಾಮಮೂರ್ತಿ (ಪಟ್ಟಾಭಿರಾಮ ನಗರ): 9902287577

ಎನ್‌.ನಾಗರಾಜು (ಭೈರಸಂದ್ರ): 9448480777

ಆರ್‌.ಗೋವಿಂದರಾಜು ನಾಯ್ಡು (ಜಯನಗರ ಪೂರ್ವ): 9845014343

ಮಹಮ್ಮದ್ ರಿಜ್ವಾನ್‌ ನವಾಬ್‌ (ಗುರುಪ್ಪನಪಾಳ್ಯ ವಾರ್ಡ್‌): 9845333786

ಕೆ.ಎನ್‌.ಲಕ್ಷ್ಮಿ ನಟರಾಜ್‌ (ಜೆ.ಪಿ ನಗರ): 9880175653

ದೀಪಿಕಾ ಎಲ್‌.ಮಂಜುನಾಥ್‌ ರೆಡ್ಡಿ (ಸಾರಕ್ಕಿ): 9341283376

ಎಂ.ಮಾಲತಿ (ಶಾಕಾಂಬರಿನಗರ ವಾರ್ಡ್‌): 9845155479

ಅಧಿಕಾರಿಗಳು:

ಕಾರ್ಯಕಾರಿಣಿ ಎಂಜಿನಿಯರ್‌: 9483544277

ಜಲಮಂಡಳಿ ಕಿರಿಯ ಎಂಜಿನಿಯರ್‌: 9845444153

ಜಲಮಂಡಳಿ ಸಹಾಯಕ ಎಂಜಿನಿಯರ್‌: 9686567941

ಬೆಸ್ಕಾಂ ಸಹಾಯಕ ಎಂಜಿನಿಯರ್‌: 9449840426

ಬೆಸ್ಕಾಂ ಮುಖ್ಯ ಎಂಜಿನಿಯರ್‌: 8277893196

ಕಂದಾಯ ಅಧಿಕಾರಿ: 9480683621

ಪಶುಸಂಗೋಪನಾ ಅಧಿಕಾರಿ: 9480685395

ಪೊಲೀಸ್‌ ಅಧಿಕಾರಿ: 9480801515

ಬಿಬಿಎಂಪಿ ಎಂಜಿನಿಯರ್‌: 9845409339

ಜಲಮಂಡಳಿ ಎಂಜಿನಿಯರ್‌: 9980929170

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT