ಮಂಗಳವಾರ, ನವೆಂಬರ್ 19, 2019
27 °C
ನೆಲಮಂಗಲ ಕ್ಷೇತ್ರ ಕಾರ್ಯಕರ್ತರ ಸಭೆ

ಶಾಸಕರು ಜೆಡಿಎಸ್‌ ತೊರೆಯುವುದಿಲ್ಲ: ಎಚ್‌.ಡಿ.ಡಿ ವಿಶ್ವಾಸ

Published:
Updated:
Prajavani

ಬೆಂಗಳೂರು: ನೆಲಮಂಗಲ ಕ್ಷೇತ್ರದ ಶಾಸಕರೂ ಸೇರಿದಂತೆ ಇನ್ನು ಯಾವ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶನಿವಾರ ಹೇಳಿದರು.

ನೆಲಮಂಗಲ ಕ್ಷೇತ್ರದ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ‘ಶಾಸಕ ಶ್ರೀನಿವಾಸಮೂರ್ತಿ ಪಕ್ಷದ ಬಿಡುತ್ತಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಸಭೆಯಲ್ಲಿ ಅವರು ಸೇರಿದಂತೆ ಪರಿಷತ್‌ ಸದಸ್ಯ ಕಾಂತರಾಜು, ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿ ಪಕ್ಷ ಕಟ್ಟುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದರು. 

ಇನ್ನಷ್ಟು ಶಾಸಕರು ಜೆಡಿಎಸ್‌ ತೊರೆಯಲಿದ್ದಾರೆ ಎಂದು ಅನರ್ಹ ಶಾಸಕ ನಾರಾಯಣಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್‌ನಿಂದ ಯಾರೂ ಓಡಿಹೋಗಿಲ್ಲ. ಪಕ್ಷವನ್ನೂ ಬಿಡುವುದಿಲ್ಲ. ಕೆಲವರು ಏನೋ ಮಾತನಾಡುತ್ತಾರೆ. ಅದನ್ನೇ ಮಾಧ್ಯಮದವರು ವೈಭವೀಕರಿಸುತ್ತಾರೆ’ ಎಂದರು. 

‘ಅನರ್ಹಗೊಂಡಿರುವ 17 ಶಾಸಕರ ಬಗ್ಗೆ ಬಿಜೆಪಿ ವರಿಷ್ಠರು ಆಸಕ್ತಿ ತೋರಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಯಾವಾಗ ಬೇಕಾದರೂ ಉಪಚುನಾವಣೆ ಬರಬಹುದು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ತಮ್ಮ ಪಕ್ಷದ ಸಭೆ ನಡೆಸಿದ್ದಾರೆ. ನಾವು ಕೂಡಾ ಉಪಚುನಾವಣೆಗೆ ತಯಾರಾಗುತ್ತಿದ್ದೇವೆ’ ಎಂದು ಹೇಳಿದರು. 

ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಕೆಲಸಕ್ಕಾಗಿ ಹೋಗಿದ್ದೇನೆ ಎಂದು ಅವರೇ ಹೇಳಿದ್ದಾರೆ ಎಂದರು.

ಮೈಸೂರಿನಲ್ಲಿ ಸಾ.ರಾ.ಮಹೇಶ್ ಮತ್ತು ದೇವೇಗೌಡರ ಮಧ್ಯೆ ಸ್ವಲ್ಪ ವ್ಯತ್ಯಾಸವಿದೆ. ಆದರೆ, ಜಿ.ಟಿ. ದೇವೇಗೌಡರು ಪಕ್ಷ ಬಿಟ್ಟು ಹೋಗುವುದಾಗಿ ಹೇಳಿಲ್ಲ. ವಿಷಯ ಖಚಿತವಾದ ಮೇಲೆ ಮಾತನಾಡುತ್ತೇನೆ’ ಎಂದರು.

‘ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ಗೈರು ಹಾಜರಾದ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ವಿಚಾರಣೆಗಾಗಿ ದೆಹಲಿಗೆ ತೆರಳುವ ಮುನ್ನ ಶಿವಕುಮಾರ್ ನಮ್ಮ ಮನೆಗೆ ಬಂದಿದ್ದರು. ಧೈರ್ಯ ಹೇಳಿ ಕಳುಹಿಸಿದ್ದೇನೆ. ಕುಮಾರಸ್ವಾಮಿ ಅವರು ಶಿವಕುಮಾರ್ ಅವರ ತಾಯಿಗೆ ಭೇಟಿ ಮಾಡಿ ಧೈರ್ಯಹೇಳಿದ್ದಾರೆ’ ಎಂದು ವಿವರಿಸಿದರು. 

ಪ್ರತಿಕ್ರಿಯಿಸಿ (+)