ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲಾ ಜೆಡಿಎಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ

ವರಿಷ್ಠರ ಎದುರೇ ಕಿತ್ತಾಡಿಕೊಂಡ ನಾಯಕರು: ಜಿಲ್ಲಾ ಅಧ್ಯಕ್ಷರ ಬದಲಾವಣೆಗೆ ಪಟ್ಟು
Last Updated 18 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ‘ಮೈತ್ರಿ’ ಸರ್ಕಾರ ಪತನವಾದ ಮೇಲೆ ಜಿಲ್ಲಾ ಜೆಡಿಎಸ್‌ನಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವು ಈಗ ಮತ್ತಷ್ಟು ತಾರಕಕ್ಕೇರಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವರಿಷ್ಠ ಎಚ್.ಡಿ.ದೇವೇಗೌಡ ಅವರ ಎದುರೇ ಗಲಾಟೆ ನಡೆದು ಕೊಡಗು ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಬಹಿರಂಗವಾಗಿದೆ.

ಹಾಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ವಿರುದ್ಧ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ಎರಡು ಕಡೆ ಬೆಂಬಲಿಗರು ಪರಸ್ಪರ ವಾಗ್ವಾದ ನಡೆಸಿ ವರಿಷ್ಠರಿಗೂ ಮುಜುಗರ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ.

ಸಂಕೇತ್‌ ಪೂವಯ್ಯ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಂತರ ದಿಢೀರ್‌ ಬೆಳವಣಿಗೆಯಲ್ಲಿ ಕೆ.ಎಂ.ಬಿ.ಗಣೇಶ್‌ ಅವರು ಆ ಹುದ್ದೆಗೇರಿದ್ದರು. ಅಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅಡಗೂರು ಎಚ್‌.ವಿಶ್ವನಾಥ್‌ ಅವರು ತಮ್ಮ ಶಿಷ್ಯ ಗಣೇಶ್‌ ಅವರನ್ನೇ ಆ ಹುದ್ದೆಗೆ ನೇಮಿಸಿದ್ದಾರೆ ಎಂಬ ಮಾತುಗಳು ವ್ಯಕ್ತವಾಗಿದ್ದವು. ಕಾಂಗ್ರೆಸ್‌ನಿಂದ ಬಂದ ಮುಖಂಡನಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕೂಡಲೇ ಬದಲಾವಣೆ ಮಾಡಬೇಕು ಎಂಬ ಆಗ್ರಹಗಳು ಆಗ ಕೇಳಿಬಂದಿದ್ದವು. ಈ ಬೆಳವಣಿಗೆಯಿಂದ ಜೀವಿಜಯ ಜೆಡಿಎಸ್‌ ತೊರೆಯಲು ಮುಂದಾಗಿದ್ದರು. ಆದರೆ ‘ವರಿಷ್ಠರು ಲೋಕಸಭೆ ಚುನಾವಣೆಯ ಬಳಿಕ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಭರವಸೆಯಿಂದ ಜೀವಿಜಯ ಬೆಂಬಲಿಗರು ಸುಮ್ಮನಾಗಿದ್ದರು.ಈಗ ‘ಮೈತ್ರಿ’ ಸರ್ಕಾರವು ಪತನವಾಗಿದ್ದು ಬಂಡಾಯದ ಕಾವು ಬಿರುಸಾಗಿದೆ.

ಸರ್ಕಾರದ ಪತನಕ್ಕೆ ವಿಶ್ವನಾಥ್‌ ಪಾತ್ರ ದೊಡ್ಡದು. ವಿಶ್ವನಾಥ್‌ ಬೆಂಬಲಿಗರಾಗಿದ್ದ ಕೆ.ಎಂ.ಬಿ.ಗಣೇಶ್‌ ಅವರನ್ನು ಬದಲಾವಣೆ ಮಾಡಬೇಕು ಎಂಬುದು ಜೀವಿಜಯ ಬೆಂಬಲಿಗರ ಆಗ್ರಹವಾಗಿತ್ತು. ಇದೇ ಆಗ್ರಹ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ವ್ಯಕ್ತವಾಯಿತು. ಪರಸ್ಪರ ಮಾತಿಗೆ ಮಾತು ಬೆಳೆದು ಸಭೆಯಿಂದ ದೇವೇಗೌಡರೇ ಹೊರ ಹೋದ ಪ್ರಸಂಗ ನಡೆಯಿತು ಎಂದು ಮುಖಂಡರೊಬ್ಬರು ಮಾಹಿತಿ ನೀಡಿದರು.

ಸಭೆಯಲ್ಲಿ ಏನಾಯಿತು?: ಶೇಷಾದ್ರಿಪುರಂನ ಜೆ.ಪಿ. ಭವನದಲ್ಲಿ ಕೊಡಗು ಕಾರ್ಯಕರ್ತರ ಸಭೆ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ಕೆ.ಎಂ.ಬಿ.ಗಣೇಶ್‌ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಅದಕ್ಕೆ ಜೀವಿಜಯ ಬೆಂಬಲಿಗರು ಆಕ್ಷೇಪಿಸಿ, ‘ಗಣೇಶ್ ಅವರು ವಿಶ್ವನಾಥ್‌ ಶಿಷ್ಯ. ವೇದಿಕೆಯಿಂದ ಕೆಳಗಿಸಿ ಅವರನ್ನು ಬದಲಾಯಿಸಬೇಕು’ ಎಂದು ಪಟ್ಟುಹಿಡಿದರು. ಯಾರು ಎಷ್ಟು ಸಮಾಧಾನಿಸಿದರೂ ಗಲಾಟೆ ತಣ್ಣಗೆ ಆಗಿರಲಿಲ್ಲ.

ಕೊನೆಯಲ್ಲಿ ದೇವೇಗೌಡರೇ ಮಧ್ಯ ಪ್ರವೇಶಿಸಿ ‘ಇದು ಜಿಲ್ಲಾ ಪದಾಧಿಕಾರಿಗಳ ಸಭೆ. ಅಧ್ಯಕ್ಷರನ್ನು ಕೆಳಗಿಳಿಸಲು ಸಾಧ್ಯವಾಗುವುದಿಲ್ಲ. ವಿಶ್ವನಾಥ್‌ ಅವರು ನೇಮಕ ಮಾಡಿರಬಹುದು. ಜಿಲ್ಲೆಗೆ ನಾನೇ ಆಗಮಿಸಿ ಸಮಸ್ಯೆ ಇತ್ಯರ್ಥ ಮಾಡುತ್ತೇನೆ’ ಎಂದು ಸಮಾಧಾನಿಸಲು ಯತ್ನಿಸಿದರು. ಆಗ, ಜೀವಿಜಯ ಬೆಂಬಲಿಗರು ಗಣೇಶ್‌ ಅವರು ಅನ್ಯಾಯ ಮಾಡಿದ್ದಾರೆ. ತಾವು ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿದರು ಎನ್ನಲಾಗಿದೆ.ಈ ಎಲ್ಲ ಬೆಳವಣಿಗೆಯಿಂದ ಕೊಡಗಿನಲ್ಲಿ ಜೆಡಿಎಸ್‌ ನಿಧಾನಕ್ಕೆ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT