ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಬಗ್ಗೆ ಮಾತನಾಡುವ ಯೋಗ್ಯತೆ ಮೋದಿಗಿಲ್ಲ: ದೇವೇಗೌಡ

Last Updated 20 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ನರೇಂದ್ರ ಮೋದಿಗೆ ರೈತರ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲ. ಇಂತಹ ವ್ಯಕ್ತಿಗೆ ರೈತರ ಬಗ್ಗೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿರುಗೇಟು ನೀಡಿದರು.

ತಾಲ್ಲೂಕಿನ ಉಂಬಳೇಬೈಲಿನಲ್ಲಿ ಮೈತ್ರಿ ಪಕ್ಷದಿಂದ ಶನಿವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು 58 ವರ್ಷ ರಾಜಕಾರಣ ಮಾಡಿದ್ದೇನೆ. ಈವರೆಗೆ ಎಂದಿಗೂ ದ್ವೇಷದ ರಾಜಕಾರಣ, ಸಮಾಜಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ಆದರೆ, ನರೇಂದ್ರ ಮೋದಿಗೆ ದೇಶದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಈ ಮನುಷ್ಯನಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವ ಪ್ರಧಾನಿಯನ್ನು ನನ್ನ ಜೀವನದಲ್ಲಿಯೇ ನೋಡಿಲ್ಲ’ ಎಂದರು.

ರಫೇಲ್ ಹಗರಣದ ಬಗ್ಗೆ ವಿರೋಧ ಪಕ್ಷ ಆಪಾದನೆ ಮಾಡಿದರೆ ಅದಕ್ಕೆ ಉತ್ತರಿಸುವ ಯೋಗ್ಯತೆ ಮೋದಿಗೆ ಇಲ್ಲ. ಬಿಜೆಪಿ ಪಕ್ಷವನ್ನು ಕಟ್ಟಿದಂತಹ ಅಡ್ವಾಣಿಯನ್ನು ಮೋದಿ ಮೂಲೆಗುಂಪು ಮಾಡಿದ್ದಾರೆ. ಅಡ್ವಾಣಿ ಕಡೆಗೆ ತಿರುಗಿ ಗೌರವ ನೀಡದಷ್ಟು ದುರ್ವರ್ತನೆ ತೋರುತ್ತಾರೆ. ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡುತ್ತಿದ್ದಾರೆ. ಇಂತಹ ದುಷ್ಟಶಕ್ತಿಯನ್ನು ದೇಶದ ಜನ ಹೋಗಲಾಡಿಸಬೇಕು ಎಂದರು.

ರಾಘವೇಂದ್ರ ಸೋಲಿಸಲು ಈಶ್ವರಪ್ಪರ ಪ್ಲಾನ್: ‘ಕೆ.ಎಸ್. ಈಶ್ವರಪ್ಪಕೇವಲ ಮೇಲ್ನೋಟಕ್ಕೆ ಮಾತ್ರವೇ ಯಡಿಯೂರಪ್ಪರ ಪುತ್ರ ಬಿ.ವೈ. ರಾಘವೇಂದ್ರ ಪರ ಕೆಲಸ ಮಾಡುವ ನಾಟಕವಾಡುತ್ತಿದ್ದಾರೆ. ಆದರೆ, ಮಧು ಬಂಗಾರಪ್ಪ ಗೆಲ್ಲಬೇಕು, ರಾಘವೇಂದ್ರ ಸೋಲಬೇಕು ಎಂಬುದೇ ಈಶ್ವರಪ್ಪರ ಒಳಮರ್ಮ’ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.

ನಿನ್ನ ಅಭಿವೃದ್ಧಿ ಏನು ಹೇಳಣ್ಣ: ‘ಹರಕಲು ಸೀರೆ, ಸೈಕಲ್ ಕೊಟ್ಟಿದ್ದು ಬಿಟ್ಟರೇ ಯಡಿಯೂರಪ್ಪ ಮತ್ತೇನು ಮಾಡಿಲ್ಲ. ಇದೀಗ ದೇಶದ ಗಡಿಯಲ್ಲಿ ನಮ್ಮ ಅಣ್ಣತಮ್ಮಂದಿರರ ತ್ಯಾಗ, ಬಲಿದಾನದ ಮೇಲೆ ನಾವು 22 ಸೀಟು ಗೆಲ್ಲುತ್ತೇವೆ ಎನ್ನುವ ನೀಚತನದ ಹೇಳಿಕೆ ನೀಡುತ್ತಿದ್ದಾರೆ. ಮೊದಲು ನೀನು ಮಾಡಿದ ಅಭಿವೃದ್ಧಿ ಕೆಲಸ ಹೇಳಿ ನಂತರ ನಾವು 28 ಸೀಟು ಗೆಲ್ಲುತ್ತೇವೆ ಎಂದು ಹೇಳಣ್ಣ’ ಎಂದು ಒತ್ತಾಯಿಸಿದರು.

ಉಂಬಳೇಬೈಲಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಡಿ.ಕೆ. ಶಿವಕುಮಾರ್‌ಗೆ ನಿಂಬೆಹಣ್ಣು ನೀಡಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿ ಮಾತನಾಡುವಾಗ ನಿಂಬೆಹಣ್ಣು ತೋರಿಸಿ, ‘ಇದು ರೇವಣ್ಣನ ನಿಂಬೆಹಣ್ಣು ಅಲ್ಲ. ಜನರು ನಂಬಿಕೆಯಿಂದ ಕೊಟ್ಟಿರುವ ನಿಂಬೆಹಣ್ಣು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT