ಘಜ್ನಿಯಂತೆ ದೇಗುಲ ದೋಚುತ್ತಿದೆ ಸರ್ಕಾರ: ಎನ್‌.ಕುಮಾರ್‌ ಕಿಡಿ

7
ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಕಿಡಿ

ಘಜ್ನಿಯಂತೆ ದೇಗುಲ ದೋಚುತ್ತಿದೆ ಸರ್ಕಾರ: ಎನ್‌.ಕುಮಾರ್‌ ಕಿಡಿ

Published:
Updated:
Prajavani

ಬೆಂಗಳೂರು: ‘ಉತ್ತಮ ವರಮಾನ ಹೊಂದಿರುವ ದೇವಸ್ಥಾನಗಳನ್ನು ಸರ್ಕಾರಗಳು ಮಹಮದ್‌ ಘಜ್ನಿ ರೂಪದಲ್ಲಿ ದೋಚುತ್ತಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಕಿಡಿ ಕಾರಿದರು. 

ನಗರದ ಮಿಥಿಕ್‌ ಸೊಸೈಟಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕುಕ್ಕೆ ಸುಬ್ರಹ್ಮಣ್ಯ: ಇತಿಹಾಸ ಮತ್ತು ಸಂಸ್ಕೃತಿ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

‘ಚೆನ್ನಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ವರಮಾನ ಉತ್ತಮವಾಗಿದ್ದರೆ ಅದರ ಮೇಲೆ ಸರ್ಕಾರ ಕಣ್ಣಿಡುತ್ತದೆ. ಆ ಕ್ಷೇತ್ರದ ಅಭಿವೃದ್ಧಿಗೆ ಏನನ್ನೂ ಮಾಡದ ಸರ್ಕಾರ ವರಮಾನವನ್ನು ಬಳಸಿಕೊಳ್ಳುತ್ತಿದೆ. ಇದರ ವಿರುದ್ಧ ಜನರು ಜಾಗೃತರಾಗಬೇಕು’ ಎಂದು ಹೇಳಿದರು. 

‘ಪಂಡಿತರು ಧಾರ್ಮಿಕ ಕ್ಷೇತ್ರದ ವಾಸ್ತವಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೃತಿಗಳ ಮೂಲಕ ವಿವರಿಸಬೇಕು. ಹಾಗೆಂದು ತಮ್ಮ ವಾದ ಮಂಡಿಸುವ ಭರದಲ್ಲಿ ಇನ್ನೊಂದು ವಾದವನ್ನು ಖಂಡಿಸಬೇಡಿ. ಹೀಗೆ ದ್ವಿಮುಖ ಸಿದ್ಧಾಂತಗಳು ಮಂಡನೆಯಾದರೆ ಜನರಿಗೆ ಗೊಂದಲ ಮೂಡಿ ತಮ್ಮದೇ ಹಾದಿಯಲ್ಲಿ ಹೋಗುತ್ತಾರೆ. ಬಹುತ್ವದ ನಡುವೆಯೂ ಏಕತೆಯನ್ನು ಮೆರೆದ ದೇಶ ನಮ್ಮದು. ಆದ್ದರಿಂದ ವಾದ ಪ್ರತಿವಾದಗಳ ಮಧ್ಯೆ ಸಮಾಜವನ್ನು ಒಡೆಯುವ ಶಕ್ತಿಗಳು ಪ್ರವೇಶಿಸಲು ಅವಕಾಶವಾಗಬಾರದು. ಪಂಡಿತರ ವಾದಗಳು ದ್ವಂದ್ವಕ್ಕೆ ಎಡೆ ಮಾಡಬಾರದು’ ಎಂದರು.

**

ವಿವಿಧ ಧರ್ಮಗಳಲ್ಲಿ ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ದೇವರ ಕುರಿತ ಬೇರೆ ಬೇರೆ ಸಾಹಿತ್ಯಗಳನ್ನು ಉಲ್ಲೇಖಿಸಿ ವಿಚಾರ ಮಂಡಿಸಿದ ಪ್ರೊ.ವಾಸುದೇವ ಬಡಿಗೇರ, ‘ಸುಬ್ರಹ್ಮಣ್ಯಗೆ ಸ್ಕಂದ, ಕುಮಾರಸ್ವಾಮಿ, ಮುರುಗನ್‌, ಕಾರ್ತಿಕೇಯನ್‌ (ಶ್ರೀಲಂಕಾದಲ್ಲಿ) ಹೀಗೆ ಹಲವು ಹೆಸರುಗಳಿವೆ. ಬೌದ್ಧ ಸಾಹಿತ್ಯದಲ್ಲಿ ಈ ದೇವರು ಸಾಮಾನ್ಯ ಮನುಷ್ಯನಾಗಿ ಕಾಣುತ್ತಾನೆ. ಜೈನ ಸಾಹಿತ್ಯದಲ್ಲೂ ಈ ದೇವರ ಉಲ್ಲೇಖವಿದೆ. ತಾತ್ವಿಕವಾಗಿ ಈ ಸಾಹಿತ್ಯಗಳಲ್ಲಿ ಭಿನ್ನತೆ ಇದ್ದರೂ ಎಲ್ಲಿಯೂ ಒಂದನ್ನೊಂದು ಖಂಡಿಸುವುದಿಲ್ಲ’ ಎಂದು ವಿವರಿಸಿದರು.
**

ಕೇಳಿಬಂದ ಬೇಡಿಕೆಗಳು

* ಕ್ಷೇತ್ರದ ಭೌಗೋಳಿಕತೆ, ಶಾಸನಗಳು, ಆಧ್ಯಾತ್ಮಿಕ– ವೈಜ್ಞಾನಿಕ ಮಹತ್ವದ ಬಗ್ಗೆ ಅಧ್ಯಯನ ಆಗಬೇಕು.

* ಸುತ್ತಮುತ್ತಲಿನ ಪ್ರಾದೇಶಿಕ ಅಧ್ಯಯನ, ಸ್ಥಳ ಮಹಿಮೆಗಳ ಬಗ್ಗೆ ಸಂಶೋಧನೆ ಆಗಬೇಕು.

* ಸರಳ ಭಾಷೆಯ ಸಂಕ್ಷಿಪ್ತ ಸಾಹಿತ್ಯ ಜನಸಾಮಾನ್ಯರಿಗೆ ಸಿಗಬೇಕು.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 2

  Frustrated
 • 4

  Angry

Comments:

0 comments

Write the first review for this !