ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಂ, ಪೋಂ... ನಮಗೊಂದು ನೆಲೆ ಕೊಡಿ...

ಕಲಾಸಿಪಾಳ್ಯದಲ್ಲಿ ಬಸ್‌ಗಳ ಅಳಲು l ಕೊಚ್ಚೆ ಗುಂಡಿಯಾದ ನಿಲ್ದಾಣ l ಬಸ್‌ ಮರೆಯಲ್ಲೇ, ಮಲ– ಮೂತ್ರ ವಿಸರ್ಜನೆ
Last Updated 20 ಡಿಸೆಂಬರ್ 2018, 20:53 IST
ಅಕ್ಷರ ಗಾತ್ರ

ಬೆಂಗಳೂರು: ಪೋಂ ಪೋಂ... ನಮಗೊಂದು ಸ್ವಚ್ಛ ನೆಲೆ ಕೊಡಿ ಸ್ವಾಮಿ. ನೀವೇನು ಇದ್ದ ಸೂರನ್ನು ಕಿತ್ತು ಹಾಕಿ ನಮ್ಮನ್ನು ಕೊಚ್ಚೆ ಮೇಲೆ ನಿಲ್ಲಿಸಿ ಗಬ್ಬು ನಾರುವಂತೆ ಮಾಡುತ್ತೀರಲ್ಲಾ...?

ರಾತ್ರಿಯೆಲ್ಲಾ ಸೋಪು ನೀರಿನಲ್ಲಿ ಮೈ ತೊಳೆದುಕೊಂಡು ಬಂದರೂ ನಿಲ್ದಾಣಕ್ಕೆ ಬಂದರೆ ಅದೇ ಹೇಸಿಗೆ ನಮ್ಮೊಳಗೆ ಸೇರಿ ಮೈಲಿಗೆಯಾಗುತ್ತದೆ. ನೀವೂ (ಪ್ರಯಾಣಿಕರು) ಅದೇ ಗಲೀಜು ತುಳಿದುಕೊಂಡು ನಮ್ಮೊಳಗೆ ಹೊಕ್ಕುತ್ತೀರಿ. ಆಮೇಲೆ ನಾವೇ ಗಬ್ಬು ನಾರುತ್ತಿದ್ದೇವೆ ಎಂದು ಬೈಯುತ್ತೀರಿ. ನೆನಪಿರಲಿ ಬೆಂಗಳೂರಿನ ಗಲೀಜು ನಾಡಿಗೆಲ್ಲಾ ಹರಡುವಂತಾಗಿದೆ ಸ್ವಾಮಿ... ಪೋಂ ಪೋಂ...

– ಇದು ಕಲಾಸಿಪಾಳ್ಯದಲ್ಲಿ ಕೊಚ್ಚೆಯ ನಡುವೆ ನಿಂತ ನೂರಾರು ಬಸ್‌ಗಳ ಹಾರ್ನ್‌ಗಳ ನಡುವೆ ಕೇಳಿಬರುವ ಅಳಲಿನ ಧ್ವನಿ.

ಎರಡು ವರ್ಷಗಳಿಂದ ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಕೊಚ್ಚೆಯ ನಡುವೆ ಸಂಚರಿಸುತ್ತಿವೆ. ಇಲ್ಲೊಂದು ವ್ಯವಸ್ಥಿತ ಬಸ್‌ ನಿಲ್ದಾಣ ಕಟ್ಟುತ್ತಿದ್ದೇವೆ ಎನ್ನುತ್ತಿದೆ ಬಿಎಂಟಿಸಿ. ಅದಕ್ಕೆ ತಕ್ಕಂತೆ ಒಂದಿಷ್ಟು ಖಾಲಿ ಜಾಗಕ್ಕೆ ತಗಡು ಶೀಟಿನ ಕಾಂಪೌಂಡ್‌ ಕಟ್ಟಿ ಕಾಮಗಾರಿ ನಡೆಯುತ್ತಿದೆ. ಒಂದು ಕಟ್ಟಡ ಕಟ್ಟಿದ್ದು ಬಿಟ್ಟರೆ ಬೇರೆ ಏನೂ ಆಗಿಲ್ಲ.

ಕಾಮಗಾರಿ ನಡೆಯುತ್ತಿರುವ ಪ್ರದೇಶವಾದ್ದರಿಂದ ಬಿಬಿಎಂಪಿ ಪೌರಕಾರ್ಮಿಕರು ಇತ್ತ ಗಮನಹರಿಸುತ್ತಿಲ್ಲ. ಕಾಮಗಾರಿ ಕಾಂಪೌಂಡ್‌ಗೆ ಬೆನ್ನುಹಾಕಿ ಖಾಸಗಿ ಬಸ್‌ಗಳು ನಿಂತಿರುತ್ತವೆ. ಬಸ್‌ಗಳ ಮರೆಯಲ್ಲಿ ಜನರು ಶೌಚ ಮಾಡುತ್ತಿರುವುದು ನಿತ್ಯದ ನೋಟ.

ರಾಜ್ಯದ ಎಲ್ಲ ಕಡೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಗೆ ವ್ಯವಸ್ಥಿತವಾದ ನಿಲ್ದಾಣಗಳಿವೆ. ಆದರೆ, ರಾಜ್ಯದ ರಾಜಧಾನಿಯ ಹೃದಯ ಭಾಗದಲ್ಲಿ ಮಾತ್ರ ಇಂಥದ್ದೊಂದು ಅವ್ಯವಸ್ಥೆ ತಲೆದೋರಿದೆ. ನಿರ್ದಿಷ್ಟವಾದ ಸ್ಥಳ ನಿಗದಿ ಇಲ್ಲದ ಕಾರಣ ಖಾಸಗಿ ಬಸ್‌ಗಳು ನಗರದಲ್ಲಿ ಸ್ವಲ್ಪ ವಿಶಾಲವೆನಿಸುವ ಪ್ರದೇಶಗಳನ್ನೇ ತಮ್ಮ ನಿಲ್ದಾಣವನ್ನಾಗಿಸಿಕೊಂಡಿವೆ.

ಕಲಾಸಿಪಾಳ್ಯದಿಂದ ರಾಜ್ಯದ ಒಳನಾಡು ಮತ್ತು ಹೊರ ರಾಜ್ಯಗಳಿಗೆ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತಿವೆ. ಆದರೆ, ಯಾವ ಬಸ್‌ ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿಯಲು ಪ್ರಯಾಣಿಕ ಪರದಾಡಬೇಕು. ಕೊಚ್ಚೆಯಲ್ಲಿ ನಡೆದಾಡಿಕೊಂಡು ಹೋಗಬೇಕು.

ಮೂಲ ಕಾರಣವೇನು?

ಇಲ್ಲಿ ನೂತನ ಬಸ್‌ ನಿಲ್ದಾಣ ಕಟ್ಟಲು 2017ರ ಏಪ್ರಿಲ್‌ನಲ್ಲಿ ಆರಂಭಿಸಲಾಗಿತ್ತು. ಕಾಮಗಾರಿ ಮುಗಿಸಲು 2 ವರ್ಷಗಳ ಗಡುವು ನೀಡಲಾಗಿತ್ತು. ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದೆ. ಆದರೆ, ಕಾಮಗಾರಿಯ ಪರಿ ನೋಡಿದರೆ ಇದು ಮುಗಿಯುವ ಸಾಧ್ಯತೆಯೇ ಇಲ್ಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ.

ಅನುದಾನ ಇಲ್ಲ: ಕಾಮಗಾರಿಗೆ ₹ 63.16 ಕೋಟಿಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ₹ 10 ಕೋಟಿ, ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ₹ 10 ಕೋಟಿ ಅನುದಾನ ಕೊಟ್ಟಿದೆ. ಡಲ್ಟ್‌ ಮಂಜೂರು ಮಾಡಿರುವುದು ₹ 25 ಕೋಟಿ. ಅದರಲ್ಲಿ ಇನ್ನೂ ₹ 15 ಕೋಟಿ ಬರಬೇಕಿದೆ. ಉಳಿದ ಮೊತ್ತವನ್ನು (₹ 28.16 ಕೋಟಿ) ಬಿಎಂಟಿಸಿ ಕೊಡಬೇಕಿದೆ.

ಬಿಎಂಟಿಸಿಯ ಕಾಮಗಾರಿ ಇಲಾಖೆಯು ನೀಡುವ ಮಾಹಿತಿ ಇದಾಗಿದೆ. ₹ 20 ಕೋಟಿ ಬಿಟ್ಟರೆ ಬೇರೆ ಹಣ ಬಂದಿಲ್ಲ. ಸಹಜವಾಗಿ ಕಾಮಗಾರಿ ವಿಳಂಬವಾಗಿದೆ ಎನ್ನುತ್ತವೆ ಗುತ್ತಿಗೆದಾರ ಸಂಸ್ಥೆಯ ಮೂಲಗಳು.

ಈ ಬಸ್‌ ನಿಲ್ದಾಣ ಆರಂಭವಾದದ್ದು 1940ರಲ್ಲಿ. ಅಂದಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ಇಲ್ಲಿ ನಿಲ್ದಾಣ ಸ್ಥಾಪಿಸಲು ಕಾರಣರಾದರು. ಅಂದು ಖಾಸಗಿ ಬಸ್‌ಗಳದ್ದೇ ಪಾರುಪತ್ಯ. ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣ ಇದಾಗಿತ್ತು. ಸ್ವಾತಂತ್ರ್ಯಾನಂತರವೂ ಇದೇ ನಿಲ್ದಾಣ ಎಲ್ಲ ಬಸ್‌ಗಳಿಗೆ ಕೇಂದ್ರವಾಗಿತ್ತು. ಆದರೆ, ಸದ್ಯದ ಸ್ಥಿತಿ ದೇವರಿಗೇ ಪ್ರೀತಿ ಎನ್ನುತ್ತಾರೆ ಬಸ್‌ ಸಿಬ್ಬಂದಿ.

ಬಿಎಂಟಿಸಿ ಆದಾಯಕ್ಕೆ ಹೊಡೆತ: ಈ ಪ್ರದೇಶದಲ್ಲಾಗುವ ಸಂಚಾರ ದಟ್ಟಣೆ, ಸ್ವಚ್ಛತೆ ಇಲ್ಲದಿರುವುದು ಬಿಎಂಟಿಸಿಯ ಆದಾಯಕ್ಕೂ ಕೊಕ್ಕೆ ಹಾಕಿದೆ. ಪ್ರಯಾಣಿ
ಕರು ಈ ಪ್ರದೇಶದಲ್ಲಿ ಬಸ್‌ ಹತ್ತಲು ಹಿಂಜರಿಯುತ್ತಾರೆ. ಪರಿಣಾಮವಾಗಿ ಆದಾಯ ಕಡಿಮೆಯಾದದ್ದಕ್ಕೆ ನಾವು ನೋಟಿಸ್‌ ಪಡೆಯಬೇಕಾಗಿದೆ ಎಂದು ಹೇಳುತ್ತಾರೆ ಬಸ್‌ ಚಾಲಕ ಯೋಗೀಶ್‌ ಗೌಡ.

ಬದಲಾಗದ ಪರಿಸ್ಥಿತಿ: ಅ. 12ರಂದು ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಇಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು. ಕಸದರಾಶಿ, ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ನಿಲ್ಲಿಸಿರುವುದು, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗಲೂ ಪರಿಸ್ಥಿತಿ ಹಾಗೇ ಇದೆ.

**

ಮುಂದಿನ ಜೂನ್‌ ಒಳಗೆ ಕಾಮಗಾರಿ ಪೂರ್ಣ

ಅಗತ್ಯ ಅನುದಾನ ಹೊಂದಿಸಿಕೊಂಡು ನಿಲ್ದಾಣದ ಕಾಮಗಾರಿಯನ್ನು ಮುಂದಿನ ಜೂನ್‌ ಒಳಗೆ ಮುಗಿಸಲು ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಜತೆಗೆ ಖಾಸಗಿ ಬಸ್‌ಗಳಿಗೆ ಒಂದು ಬೇ ವ್ಯವಸ್ಥೆ ಕಲ್ಪಿಸಲಾಗುವುದು. ನಿಲ್ದಾಣ ಸ್ವಚ್ಛತೆ ಸಂಬಂಧಿಸಿ ಬಿಎಂಟಿಸಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.

-ಡಾ.ಎನ್‌.ವಿ.ಪ್ರಸಾದ್‌,ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ

**

ಗಾಡಿ ನಿಲ್ಲಿಸಲು ಸರಿಯಾದ ಜಾಗವೇ ಇಲ್ಲ. ಇನ್ನು ಹೇಗೆ ನಿಲ್ಲಿಸಲಿ? ಗಲೀಜು, ಗೊಂದಲಗಳ ನಡುವೆ ಜನರು ಬೈದುಕೊಂಡು ಬಸ್‌ ಹತ್ತುತ್ತಿದ್ದಾರೆ.

-ಸೋಮಶೇಖರ, ಬಸ್‌ ಚಾಲಕ

**

ಈ ಮೊದಲು ಬಸ್‌ ನಿಲ್ಲುವ ಜಾಗದಲ್ಲಿ ನಿಗದಿತ ಫಲಕ ಇತ್ತು.ಯಾವ ಗೊಂದಲ ಇರಲಿಲ್ಲ. ಈಗ ನೋಡಿ ಹೇಳೋರಿಲ್ಲ ಕೇಳೋರಿಲ್ಲ. ಬಸ್‌ ಅಡಿಯಲ್ಲೇ ಬಂದು ಕಸ ಎಸೆಯುವವರಿದ್ದಾರೆ.

-ರಂಗಸ್ವಾಮಿ,ಬುಕ್ಕಿಂಗ್‌ ಏಜೆಂಟ್‌

**

ನಮ್ಮಿಂದ ದೊಡ್ಡ ಮೊತ್ತದ ತ್ರೈಮಾಸಿಕ ತೆರಿಗೆ ಪಡೆಯುವ ಸರ್ಕಾರ, ನಿಲ್ದಾಣಕ್ಕೆ ಒಳ್ಳೆಯ ಸ್ಥಳ ಕೊಡುವುದಿಲ್ಲ ಎಂದರೆ ಹೇಗೆ? ಸ್ವಚ್ಛತಾ ಶುಲ್ಕ ಪಾವತಿಸಲೂ ನಾವು ಸಿದ್ಧರಿದ್ದೇವೆ. ಆದರೂ ಏಕೆ ಈ ತಾತ್ಸಾರವೋ ಗೊತ್ತಾಗುತ್ತಿಲ್ಲ.

-ಲಕ್ಷ್ಮೀನಾರಾಯಣ,ಬಸ್‌ ಬುಕ್ಕಿಂಗ್‌ ಏಜೆಂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT