7

ನೆರವಿಗೆ ಬಾರದ ಸಮಾಜ: ವಿಶ್ವನಾಥ್‌ ಅಳಲು

Published:
Updated:
ಸಮಾರಂಭವನ್ನು ಕಾಗಿನೆಲೆ ಕನಕ ಗುರು ಪೀಠಾಧ್ಯಕ್ಷ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು

ಬೆಂಗಳೂರು: ಒಡೆದ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಕುರುಬ ಸಮಾಜದ ಎಲ್ಲರೂ ಮೌನವಹಿಸಿದ್ದರು ಎಂದು ಶಾಸಕ ಎಚ್.ವಿಶ್ವನಾಥ್ ನೋವಿನಿಂದ ನುಡಿದರು.

ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ, ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ನೂತನ ಸಚಿವರು ಮತ್ತು ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ಸಮಾಜಕ್ಕೊಂದು ಧರ್ಮಪೀಠ ಕಟ್ಟಿ ಬೆಳೆಸಿದ ನಾಯಕರಲ್ಲಿ ನಾನು ಒಬ್ಬ. ನನಗೆ ಮೋಸ ಮತ್ತು ಅನ್ಯಾಯವಾದಾಗ ಧರ್ಮಪೀಠ, ಮುಖಂಡರು ಅಧಿಕಾರಿಗಳು ಯಾರೂ ಸಹಾಯಕ್ಕೆ ಮುಂದೆ ಬರಲಿಲ್ಲ. ಸಮಾಜ ಕಟ್ಟಿದ ನನ್ನನ್ನು ನಮ್ಮವರೇ ತುಳಿದರು. ಸಂಬಂಧಗಳನ್ನು ಒಗ್ಗೂಡಿಸುವ ಕೆಲಸವನ್ನು ಕನಕಗುರು ಪೀಠ ಮಾಡಬೇಕು ಎಂದು ನೊಂದು ನುಡಿದರು. 

ಲಿಂಗಾಯಿತ, ಒಕ್ಕಲಿಗ ಸಮಾಜದ ಮುಖಂಡರಿಗೆ ಅನ್ಯಾಯವಾದಾಗ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಮುಖಂಡರು ಪಕ್ಷಾತೀತವಾಗಿ, ಸ್ವಾಮೀಜಿಗಳು ಒಂದಾಗಿ ಅನ್ಯಾಯ ಸರಿಪಡಿಸಲು ಮುಂದಾಗುತ್ತಾರೆ. ನಮ್ಮ ಸಮಾಜದ ಸ್ವಾಮೀಜಿ, ನಾಯಕರು ಮುಂದೆ ಬರಲಿಲ್ಲ. ನನಗೆ ಆಗಿರುವ ಅನ್ಯಾಯ ಬೇರೆಯವರಿಗೆ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿಶ್ವನಾಥ್ ಅವರಿಗೆ ಆಗಿರುವ ಅನ್ಯಾಯವನ್ನು ಪೀಠಾಧಿಪತಿಗಳು ಸಿದ್ದರಾಮಯ್ಯ ಜತೆಯಲ್ಲಿ ಕುಳಿತು ಬಗೆಹರಿಸುತ್ತೇವೆ. ಸಿದ್ದರಾಮಯ್ಯ, ಎಚ್.ವಿಶ್ವನಾಥ್ ಎರಡು ಕಣ್ಣುಗಳಿದ್ದಂತೆ. ವಿಶ್ವನಾಥ್ ಅವರಿಗೆ ಅನ್ಯಾಯವಾಗಿದೆ. ಅವರಲ್ಲಿ ವೈಯುಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದರು.

ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಕುರುಬ ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತೇವೆ. ತಾವೆಲ್ಲರೂ ಒಂದಾಗಿ ಶೈಕ್ಷಣೀಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬನ್ನಿ’ ಎಂದು ಕರೆ ನೀಡಿದರು. ಕನಕಶ್ರೀ ಚಾರಿಟಬಲ್ ಟ್ರಸ್ಟ್‌ಗೆ ₹ 50 ಲಕ್ಷ ಹಣವನ್ನು ನೀಡುತ್ತೇನೆ ಎಂದು ಘೋಷಣೆ ಮಾಡಿದ್ದರೂ ಟ್ರಸ್ಟ್‌ನ ಪ್ರಮುಖರು ಇಲ್ಲಿಯವರೆಗೂ ಮುಂದೆ ಬಂದು ನೆರವನ್ನು ಕೋರಲಿಲ್ಲ ಎಂದರು.

 ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಕುಂದುಗೋಳ ಶಾಸಕ ಸಿ.ಎಸ್. ಶಿವಳ್ಳಿ, ಕೆ.ಆರ್.ಪುರ ಶಾಸಕ ಬಿ.ಎ.ಬಸವರಾಜು, ಅರಣ್ಯ ಸಚಿವ ಆರ್.ಶಂಕರ್, ಸಮಾಜ ಸೇವಕ ಚಿಕ್ಕೇಗೌಡನಪಾಳ್ಯ, ಚಿಕ್ಕರೇವಣ್ಣ, ಶಾಸಕರಾದ ಎಸ್.ರಾಮಪ್ಪ, ಡಾ.ಯತೀಂದ್ರ, ರಾಘವೇಂದ್ರ ಹಿಟ್ನಾಳ್, ರಘುನಾಥರಾವ್‍ ಮಲ್ಕಾಪುರೆ, ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ.ಬೆಳಗಾವಿ ಮಾತನಾಡಿದರು.

ಕಾಗಿನೆಲೆ ಕನಕಗುರು ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ವಿಶ್ವನಾಥ್‍ಗೆ ವೈಯುಕ್ತಿಕವಾಗಿ ಮಠ ತೊಂದರೆ ಮಾಡಿಲ್ಲ. ಗುರುಪೀಠಕ್ಕೆ ಯಾವುದೇ ಪಕ್ಷ ಮುಖ್ಯವಲ್ಲ. ಸಮಾಜದ ಮುಖಂಡರು ಅಧಿಕಾರ ಪಡೆಯಲು ಬೆಂಬಲ, ಸಹಕಾರ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !