ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಕಾ ನಿಂತಿಲ್ಲ; ಕರ್ಕಶ ಹಾರ್ನ್‌ ಕಿರಿಕಿರಿ ತಪ್ಪಿಲ್ಲ

ಫೋನ್ ಇನ್ ಕಾರ್ಯಕ್ರಮ: ಎಸ್‌ಪಿಗೆ ಸಾರ್ವಜನಿಕರಿಂದ ದೂರು
Last Updated 16 ಜೂನ್ 2018, 11:15 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಗಂಗೊಳ್ಳಿ, ಬೈಂದೂರು, ಕೊಲ್ಲೂರುಗಳಲ್ಲಿ ಮಟ್ಕಾ ಹಾವಳಿ ಮಿತಿಮೀರಿದೆ. ಉಡುಪಿ ನಗರದಲ್ಲಿ ಕರ್ಕಶ ಹಾರ್ನ್‌ಗಳ ಕಿರಿಕಿರಿ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಹೀಗೆ, ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಸ್ಯೆಗಳ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮುಂದೆ ತೆರೆದಿಟ್ಟರು.

ನಗರದ ಪೂರ್ಣಪ್ರಜ್ಞ ಕಾಲೇಜು ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಬಳಿ ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ಪ್ರಶ್ನಿಸಿದರೆ, ಜಗಳಕ್ಕೆ ನಿಲ್ಲುತ್ತಾರೆ. ಏಕಮುಖ ಸಂಚಾರ ಇದ್ದರೂ ನಿಯಮ ಪಾಲನೆಯಾಗುತ್ತಿಲ್ಲ ಎಂದು ಸ್ಥಳೀಯರೊಬ್ಬರು ಅಳಲು ತೋಡಿಕೊಂಡರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಹಾಗೂ ಏಕಮುಖ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ವಾಹನ ಓಡಿಸಿದರೆ ದಂಡ ಹಾಕುವಂತೆ ಎಸ್‌ಪಿ ಆದೇಶಿಸಿದರು.

ನಗರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಅವೈಜ್ಞಾನಿಕ ಹಂಪ್ಸ್‌ಗಳನ್ನು ಹಾಕಲಾಗಿದ್ದು, ಗುರುತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವಘಡಗಳಾಗಿವೆ ಎಂದು ಸವಾರರೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ನಗರಸಭೆ ಅಧಿಕಾರಿಗಳ ಜತೆ ಚರ್ಚಿಸಿ, ಹಂಪ್ಸ್‌ಗಳು ಸವಾರರಿಗೆ ಎದ್ದು ಕಾಣುವಂತೆ ಸೈನ್‌ ಮಾರ್ಕ್ಸ್‌ ಹಾಗೂ ಪೇಟಿಂಗ್ಸ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಇಲಾಖೆಯಿಂದ ಸ್ಟಡ್ಸ್‌ಗಳನ್ನು ಹಾಕುವುದಾಗಿ ಭರವಸೆ ನೀಡಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸುತ್ತಲಿನ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ದೇಗುಲದ ಪರಿಸರ ಹಾಳಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಕೂಡಲೇ ಸ್ಥಳಕ್ಕೆ ತೆರಳಿ ಅಂಗಡಿಗಳನ್ನು ತಪಾಸಣೆ ಮಾಡುವಂತೆ ಕೊಲ್ಲೂರು ಠಾಣೆ ಪಿಎಸ್ಐಗೆ ಎಸ್‌ಪಿ ಸೂಚನೆ ನೀಡಿದರು.

ನಗರದ ಹಲವೆಡೆ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ದೂರು ಕೇಳಿಬಂತು. ಈ ಬಗ್ಗೆ ತುರ್ತು ಕ್ರಮ ಜರುಗಿಸುವುದಾಗಿ ಎಸ್‌ಪಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಲಾರಿಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಲಾಗುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತಗಳಾಗುವ ಸಾಧ್ಯತೆಗಳಿದ್ದು, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು. ಹೆದ್ದಾರಿ ಗಸ್ತುವಾಹನ ಸಿಬ್ಬಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚನೆ ನೀಡಲಾಯಿತು.

ಉಪ್ಪುಂದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಅನಧಿಕೃತ ಗೂಡಂಗಡಿಗಳನ್ನು ಇಟ್ಟುಕೊಳ್ಳಲಾಗಿದ್ದು, ತೆರವು ಮಾಡುವಂತೆ ನಾಗರಿಕರು ದೂರಿದರು. ಈ ಬಗ್ಗೆ ಪರಿಶೀಲಿಸಿ ಅನಧಿಕೃತ ಕಂಡುಬಂದರೆ ತೆರವಿಗೆ ನೋಟಿಸ್ ನೀಡುವಂತೆ ಸಿಬ್ಬಂದಿಗೆ ತಿಳಿಸಿದರು. 

ಕುಂದಾಪುರದ ಗುಡ್ಡೆ ಅಂಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಬಗ್ಗೆ ಕ್ರಮತೆಗೆದುಕೊಳ್ಳುವಂತೆ ಅಲ್ಲಿನ ನಿವಾಸಿಯೊಬ್ಬರು ಅಲವತ್ತುಕೊಂಡರು.

ಬಾರ್ಕೂರು ಬಳಿಯ ಪದವಿ ಕಾಲೇಜು ಬಳಿ ಸಿಗರೇಟು ಮಾರಾಟ ಮಾಡಲಾಗುತ್ತಿದೆ. ಬೈರಂಪಳ್ಳಿಯಲ್ಲಿ ವ್ಯಕ್ತಿಯೊಬ್ಬರು ಕುಡಿದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕರನ್ನು ನಿಂಧಿಸುತ್ತಾರೆ, ಬಸ್ ಚಾಲಕರು ಯೂನಿಫಾರಂ ಧರಿಸುವುದಿಲ್ಲ, ನಂಬರ್ ಪ್ಲೇಟ್ ಇಲ್ಲದೆ ವಾಹನಗಳ ಚಲಾವಣೆ, ಹೀಗೆ ಹಲವು ಸಮಸ್ಯೆಗಳನ್ನು ನಾಗರಿಕರು ಹೇಳಿಕೊಂಡರು.

ವಿಶೇಷ ಕಾರ್ಯಾಚರಣೆ: ಎಸ್‌ಪಿ

ಈ ಬಾರಿಯ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಮತ್ತೆ ಮಟ್ಕಾ ಹಾವಳಿ ಶುರುವಾಗಿರುವ ಕುರಿತು ಸಾರ್ವಜನಿಕರಿಂದ ಹೆಚ್ಚು ದೂರುಗಳು ಕೇಳಿಬಂದವು. ಕೊಲ್ಲೂರು, ಬೈಂದೂರು, ಗಂಗೊಳ್ಳಿಯಿಂದ ಕರೆಮಾಡಿದ ಹಲವರು ಮಟ್ಕಾ ದಂಧೆ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದರು.

ನಗರದಾದ್ಯಂತ ಒಂದು ವಾರ ವಿಶೇಷ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್ ಅಳವಡಿಸಿಕೊಂಡಿರುವ ಬೈಕ್, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು. ಹೆಚ್ಚು ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರುವ ಬೈಕ್‌ ಸವಾರರಿಗೆ ದಂಡ ವಿಧಿಸಲಾಗುವುದು ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಮೇ 25ರಿಂದ ಜೂನ್ 15ರವರೆಗೂ ದಾಖಲಾದ ಪ್ರಕರಣಗಳು

5 ಮಟ್ಕಾ ಪ್ರಕರಣ–  6 ಜನರ ಬಂಧನ

3 ಇಸ್ಪೀಟು ಜೂಜು ಪ್ರಕರಣ–  17 ಬಂಧನ

5 ಅಕ್ರಮ ಮದ್ಯ ಮಾರಾಟ ಪ್ರಕರಣ– 7 ಬಂಧನ

1 ಎನ್‌ಡಿಪಿಎಸ್–   ಮೂವರು ಬಂಧನ

ಕೋಟ್ಪಾ–   140

ಕುಡಿದು ವಾಹನ ಚಲಾವಣೆ –  23‌

ಕರ್ಕಶ ಹಾರ್ನ್ ಬಳಕೆ–  146

ವಾಹನ ಓಡಿಸುವಾಗ ಮೊಬೈಲ್ ಬಳಕೆ– 49

ಹೆಲ್ಮೆಟ್ ರಹಿತ ಪ್ರಯಾಣ–   2627

ಅತಿ ವೇಗದ ಚಲಾವಣೆ–  68

ಇತರ ಮೋಟಾರು ನಿಯಮ ಉಲ್ಲಂಘನೆ–3,627

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT