‘ನಾನ್‌ ಕನ್ನಡಿಗ’ ಅಲ್ಲ; ಈಗ ನಾನು ಕನ್ನಡಿಗ!

7
ಹೊರರಾಜ್ಯದ ಜನರಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆಸಕ್ತಿ

‘ನಾನ್‌ ಕನ್ನಡಿಗ’ ಅಲ್ಲ; ಈಗ ನಾನು ಕನ್ನಡಿಗ!

Published:
Updated:
Deccan Herald

ಬೆಂಗಳೂರು: ರಾಜಧಾನಿಯಲ್ಲಿ ಹೊರ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎನ್ನುವ ಅಸಹನೆ ಕನ್ನಡಿಗರಲ್ಲಿದೆ. ಆದರೆ, ಹಾಗೆ ಹೊರಗಿನಿಂದ ಬಂದವರಲ್ಲಿ ಹಲವರು ಹೆಚ್ಚು ಕಾಲ ‘ಕನ್ನಡೇತರರು’ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಸ್ವತಃ ಹೆಮ್ಮೆಯಿಂದ ‘ನಾವು ಕನ್ನಡಿಗರು’ ಎಂದು ಘೋಷಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಇದಕ್ಕೆ ಅವಕಾಶ ಒದಗಿಸಿದ್ದು ಸಂಪತ್‌ ರಾಮಾನುಜಂ. ಹೊರ ರಾಜ್ಯದವರನ್ನು ಕನ್ನಡ ಮಾತನಾಡುವ ಸ್ಥಳೀಯರ ಜೊತೆ ಸಂಪರ್ಕಿಸುವ ಉದ್ದೇಶದಿಂದ ಅವರು ‘ಕನ್ನಡ ಕಲಿಯೋಣ’ ಆಂದೋಲನ ಆರಂಭಿಸಿದ್ದಾರೆ. ಈ ಆಂದೋಲನ, ಕನ್ನಡ ಭಾಷೆಯನ್ನು ಸರಾಗವಾಗಿ ಮಾತನಾಡುವುದನ್ನು ಕಲಿಯುವ ಆಸಕ್ತಿ ಹೊಂದಿದ ಹೊರರಾಜ್ಯಗಳ ನೂರಾರು ಜನ ಟೆಕಿಗಳು, ಗೃಹಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಭಾಷೆಯ ಕಲಿಕೆಗೆ ಸಹಾಯ ಮಾಡುತ್ತಿದೆ.

ವಾರಾಂತ್ಯದಲ್ಲಿ ಸೀಗೇಹಳ್ಳಿ ಮತ್ತು ಕಾಡುಗೋಡಿಯ ಸರ್ಕಾರಿ ಶಾಲೆಗಳಲ್ಲಿ ಹಾಗೂ ಕೆಲವು ವಸತಿ ಸಮುಚ್ಚಯಗಳಲ್ಲಿ ಉಚಿತ ಕನ್ನಡ ಕಲಿಕೆಯ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಿನದಿಂದ ದಿನಕ್ಕೆ ಈ ತರಗತಿಗಳಿಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಸುಮಾರು ಆರು ವಾರಗಳವರೆಗೆ ನಡೆಯುವ ಈ ತರಗತಿಗಳಲ್ಲಿ ಆಡುಮಾತಿನ ಕನ್ನಡದ ಬಳಕೆ ಕುರಿತು ಹೇಳಿಕೊಡಲಾಗುತ್ತದೆ.
ಪ್ರತಿ ತರಗತಿಯೂ 2 ಗಂಟೆಯ ಅವಧಿಯದ್ದಾಗಿದ್ದು, 90 ನಿಮಿಷ ಬೋಧನೆಗೆ ಹಾಗೂ 30 ನಿಮಿಷ ಸಂವಹನಕ್ಕೆ ಮೀಸಲಿಡಲಾಗಿದೆ. ಕೋರ್ಸ್ ಮುಗಿಯುವಾಗ ಪ್ರತಿಯೊಬ್ಬರಿಗೂ ‘ಕನ್ನಡ ಕಲಿಯೋಣ’ ಎನ್ನುವ ಕೈಪಿಡಿ ಹಾಗೂ ‘ನಾನ್‌ ಕನ್ನಡಿಗ ಟು ನಾನು ಕನ್ನಡಿಗ’ ಎನ್ನುವ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

‘ಪ್ರತಿ ಭಾಷೆಯೂ ತನ್ನದೇ ಆದ ಸೌಂದರ್ಯವನ್ನು ಹೊಂದಿರುತ್ತದೆ. ಆ ಸೌಂದರ್ಯವೇ ಒಂದು ಭಾಷೆಯನ್ನು ಇತರ ಭಾಷೆಗಳಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ. ನೆಲದ ಭಾಷೆಯ ಕಲಿಕೆ ಸ್ಥಳೀಯ ಜನರ ಸಂಪರ್ಕಕ್ಕೆ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಈ ಆಂದೋಲನದ ರೂವಾರಿ ಸಂಪತ್‌.

‘ದಿನನಿತ್ಯ ಭೇಟಿಯಾಗುವ ಜನರ ಜೊತೆ ವ್ಯವಹರಿಸಲು ನಾನು ಸುದೀರ್ಘವಾಗಿ ಕನ್ನಡ ಕಲಿಯಲು ಬಯಸುತ್ತೇನೆ’ ಎನ್ನುತ್ತಾರೆ 10 ವರ್ಷಗಳಿಗೂ ಹೆಚ್ಚು ಕಾಲ ನಗರದಲ್ಲಿಯೇ ವಾಸವಾಗಿರುವ ಲೂಧಿಯಾನ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಅಮಿತ್‌ ಬನ್ಸಾಲ್‌. ಅವರು ಈಗಾಗಲೇ ಕನ್ನಡ ಮಾತನಾಡುವಷ್ಟು ಭಾಷಾ ಕೌಶಲವನ್ನು ಕಲಿತಿದ್ದು, ತಮ್ಮ ಸಹೋದ್ಯೋಗಿಗಳು ಕನ್ನಡದಲ್ಲಿ ನೀಡುವ ಸೂಚನೆಯನ್ನು ಅರ್ಥೈಸಿಕೊಂಡು ಪಾಲಿಸುತ್ತಾರೆ. ಬನ್ಸಾಲ್‌ ಕನ್ನಡ ಕಲಿಯುತ್ತಿರುವುದಕ್ಕೆ ಸಹೋದ್ಯೋಗಿಗಳು ಸಂತೋಷ ವ್ಯಕ್ತಪಡಿಸುತ್ತಾರೆ.

‘ಯಾರಾದರೂ ಹಿಂದಿಯನ್ನು ಸರಿಯಾಗಿ ಮಾತನಾಡದಿದ್ದರೆ ನೊಂದುಕೊಳ್ಳುತ್ತಿದ್ದೆ. ಆದರೆ, ನನ್ನ ಸ್ನೇಹಿತರು ನಾನು ಅರೆಬರೆ ಕನ್ನಡ ಮಾತನಾಡುವುದನ್ನು ಕೇಳಲು ಇಷ್ಟಪಡುತ್ತಾರೆ’ ಎನ್ನುತ್ತಾರೆ ಬನ್ಸಾಲ್‌.

’ಈ ತರಗತಿಗಳ ಸಹಾಯದಿಂದ ದಿನನಿತ್ಯದ ಜೀವನದಲ್ಲಿ ಜನರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿದೆ’ ಎಂದು ಹೇಳುತ್ತಾರೆ ಇತ್ತೀಚೆಗೆ ಬೆಂಗಳೂರಿಗೆ ಬಂದಿರುವ ಜರ್ಮನಿ ಭಾಷಾಂತರಕಾರ ವಿಜಿ ಕುಮಾರ್‌. ಕನ್ನಡ ಕಲಿಯೋಣ ಆಂದೋಲನದ ರೂವಾರಿ ಸಂಪತ್‌ ಈ ಆಂದೋಲನವನ್ನು ಐ.ಟಿ ಕಂಪನಿಗಳಲ್ಲಿ ನಡೆಸುವ ಇರಾದೆಯನ್ನೂ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !