ಕನ್ನಡ ರಾಜ್ಯೋತ್ಸವ: ಅನಾವರಣಗೊಂಡ ಅಭಿಮಾನ, ಜನಸಂಸ್ಕೃತಿ ದರ್ಶನ

7

ಕನ್ನಡ ರಾಜ್ಯೋತ್ಸವ: ಅನಾವರಣಗೊಂಡ ಅಭಿಮಾನ, ಜನಸಂಸ್ಕೃತಿ ದರ್ಶನ

Published:
Updated:

ಬೆಂಗಳೂರು:  ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಗುರುವಾರ ಕನ್ನಡದ್ದೇ ಕಂಪು. ಎಲ್ಲಿ ನೋಡಿದಲ್ಲಿ ಕನ್ನಡ ಬಾವುಟಗಳೇ ಹಾರಾಡಿದರೆ, ಸುಶ್ರಾವ್ಯ ಕನ್ನಡ ಗೀತೆಗಳು ಅಲೆ, ಅಲೆಯಾಗಿ ತೇಲಿ ಬರುತ್ತಿದ್ದವು.  

ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಒತ್ತಾಯಿಸಿ 1982ರಲ್ಲಿ ಕವಿ ವಿ.ಕೃ.ಗೋಕಾಕ್ ಅವರು ಸಿದ್ಧಪಡಿಸಿದ ವರದಿ ಜಾರಿಗಾಗಿ ನಡೆದ ಗೋಕಾಕ್‌ ಚಳವಳಿ ಸ್ಮರಣಾರ್ಥ 18ನೇ ಕ್ರಾಸ್‌ನ ವೃತ್ತಕ್ಕೆ (ಸ್ಯಾಂಕಿ ಕೆರೆ ಮುಂಭಾಗ) ಗೋಕಾಕ್‌ ವೃತ್ತ ಎಂದು ನಾಮಕರಣ ಮಾಡಿ, ಇತಿಹಾಸವನ್ನೊಮ್ಮೆ ಮೆಲುಕು ಹಾಕಲಾಯಿತು.

ವೃತ್ತದ ಪುಟ್ಟ ಉದ್ಯಾನದಲ್ಲಿ ಸ್ಥಾಪಿಸಿರುವ ಡಾ.ರಾಜ್‌ಕುಮಾರ್‌ ಅವರ ಪುತ್ಥಳಿಯನ್ನೂ ಅನಾವರಣ ಮಾಡಲಾಯಿತು. ಚಿತ್ರನಟರಾದ ಪುನೀತ್‌ ರಾಜ್‌ಕುಮಾರ್‌, ಯಶ್‌ ಈ ಸಂದರ್ಭಕ್ಕೆ ಸಾಕ್ಷಿಯಾದರು.

ಅದಕ್ಕಿಂತ ಮುಂಚೆ ಕನ್ನಡ ಧ್ವಜಧಾರಿಯಾದ ತಾಯಿ ಕನ್ನಡಾಂಬೆ ಹಾಗೂ ಡಾ.ರಾಜ್‌ಕುಮಾರ್‌ ಪುತ್ಥಳಿಗಳ ಮೆರವಣಿಗೆ ನಡೆಯಿತು. 10 ಅಡಿ ಉದ್ದದ ಕನ್ನಡ ಬಾವುಟವನ್ನೂ ಪ್ರದರ್ಶಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕಸಿ.ಎನ್‌.ಅಶ್ವತ್ಥನಾರಾಯಣ, ನಟ ಜಗ್ಗೇಶ್, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಸಾವಿರಾರು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಸಾಗಿ ಬಂದರು. 

12 ಅಡಿ ಎತ್ತರದ ಪುತ್ಥಳಿ:‘ಡಾ.ರಾಜ್‌ಕುಮಾರ್‌ ಅವರು ಚಳವಳಿಯಲ್ಲಿ ಭಾಗವಹಿಸಿದ್ದ ಭಂಗಿಯ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿದೆ.1 2 ಅಡಿ ಎತ್ತರದ ₹ 50 ಲಕ್ಷ ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಿಸಲಾಗಿದೆ. ಇನ್ನು ಇದು ಇರುವ ಉದ್ಯಾನವನ್ನು ಸುಮಾರು ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು. ತ್ಯಾಜ್ಯವನ್ನು ಸಂಗ್ರಹಿಸಲು ಬಿಬಿಎಂಪಿಯ ಕಸದ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಕೈತೊಳೆಯುವ ನೀರು ಹರಿದಾಡುತ್ತಿತ್ತು.

ಸಂಚಾರ ದಟ್ಟಣೆ: ಮೆರವಣಿಗೆಯಿಂದಾಗಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಸಾರ್ವಜನಿಕರು ಕಾದು, ಕಾದು ಸುಸ್ತಾದರು.

ಪೊಲೀಸರ ಹರಸಾಹಸ: ನೆರೆದ ಜನಸಂದಣಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸಪಟ್ಟರು. ಮೆರವಣಿಗೆ ವೇದಿಕೆಯ ಹತ್ತಿರ ಬರುತ್ತಿದ್ದಂತೆಯೇ ನಟರನ್ನು ನೋಡಲು ನೂಕು ನುಗ್ಗಲು ಉಂಟಾಯಿತು. ಅಭಿಮಾನಿಗಳು ಸೆಲ್ಫಿಗಾಗಿ ಕಿಕ್ಕಿರಿದು ಕಾದು ನಿಂತಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಮಲ್ಲೇಶ್ವರ ಕ್ಷೇತ್ರದ ಎಲ್ಲ ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ‘ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಲ್ಲಿ ಗೋಕಾಕ್‌ ಚಳವಳಿಯ ಮಹತ್ವ’ ಕುರಿತು ಪ್ರಬಂಧ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಗಾಯಕ ವಿಜಯ್‌ ಪ್ರಕಾಶ್‌ ಹಾಗೂ ಅವರ ತಂಡ ಪ್ರಸ್ತುತಪಡಿಸಿದ ಕನ್ನಡ ಕುರಿತ ಹಾಡುಗಳು ಮನಸೂರೆಗೊಂಡವು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ಭಾಗವಹಿಸಿದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಕಲರವ

ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ, ಹೋರಾಟಗಾರರ ಛಲವಂತಿಕೆ, ಶಿಕ್ಷಣ ಇಲಾಖೆಯ ಯೋಜನೆ, ಆರೋಗ್ಯ ಸಂಪಾದಿಸುವ ಮಾರ್ಗಗಳನ್ನು ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಾವರಣಗೊಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘63ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ’ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು.

ಬಾಗಲಗುಂಟೆ, ಮಂಜನಾಥನಗರದ 800 ಶಾಲಾ ವಿದ್ಯಾರ್ಥಿಗಳು ಕೆಂಪೇಗೌಡರ ಆಡಳಿತ ಕ್ರಮವನ್ನು ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು. ಚಿಕ್ಕಬಿದರಕಲ್ಲು ಶಾಲಾ ಮಕ್ಕಳು ಸರ್ಕಾರ ಜಾರಿ ಮಾಡಿರುವ ಉಚಿತ ಶಿಕ್ಷಣ, ಸಮವಸ್ತ್ರ, ಸೈಕಲ್‌, ಬಿಸಿಯೂಟ, ಕ್ಷೀರಭಾಗ್ಯ ಹಾಗೂ ವಸತಿ ಶಾಲೆಯಂತಹ ಯೋಜನೆಗಳನ್ನು ನೃತ್ಯ ರೂಪದಲ್ಲಿಯೇ ಪರಿಚಯಿಸಿದರು.

‘ಕರುನಾಡು ನಮ್ಮ ಗುಡಿ, ಕನ್ನಡ ನಮ್ಮ ನುಡಿ’ ಎಂಬ ಸಾಲುಗಳಿಗೆ ಹೆಜ್ಜೆ ಹಾಕಿದ ಇಂಡಿಯನ್‌ ಹೈಸ್ಕೂಲ್‌ ಮಕ್ಕಳು ಕವಿ, ಸಾಹಿತಿಗಳ ಕನ್ನಡ ಸೇವೆ ಸ್ಮರಿಸಿದರು. ಪೂರ್ಣಪ್ರಜ್ಞ ಶಾಲೆಯಿಂದ ಪ್ರದರ್ಶನಗೊಂಡ ರೂಪಕದಲ್ಲಿ ಹಳ್ಳಿಗಾಡಿನ ಉಡುಪುಗಳನ್ನು ಧರಿಸಿದ್ದ, ಹುಲಿ, ನವಿಲುಗಳ ವೇಷಧಾರಿಯಾಗಿದ್ದ ಮಕ್ಕಳು ರಾಜ್ಯದ ಜನಪದ ಸಂಸ್ಕೃತಿಯ ಝಲಕ್‌ ತೋರಿಸಿದರು.

‘ಮಾಡಬೇಕು ಯೋಗ, ತೊಡೆಯಬೇಕು ರೋಗ’ ಎಂಬ ಸುಶ್ರಾವ್ಯ ಪಂಕ್ತಿಗಳನ್ನು ಕೇಳುತ್ತಲೇ 2 ಸಾವಿರ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಹಾಕಿದರು. ಮರಿಯಂ ನಿಲಯ ಶಾಲೆ, ನ್ಯೂ ಫ್ಲಾರೆನ್ಸ್‌ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಏರೋಬಿಕ್ಸ್‌ ನೃತ್ಯ ಕೂಡ ಸಭಿಕರ ಚಿತ್ತ ಸೆಳೆಯಿತು. ಈ ಮೂಲಕ ದೈಹಿಕ ದೃಢತೆ, ಮಾನಸಿಕ ಏಕಾಗ್ರತೆಯ ಸಂದೇಶವನ್ನು ಮಕ್ಕಳು ಸಾರಿದರು. ವಿದ್ಯಾರ್ಥಿಗಳ ಪಥಸಂಚಲನ ಕೂಡ ಆಕರ್ಷಕವಾಗಿತ್ತು.

ಎಲ್ಲ ತಂಡಗಳ ನೃತ್ಯ ರೂಪಕಗಳನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವೀಕ್ಷಿಸಿ, ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಗಣ್ಯರಿಗೆ ಕನ್ನಡದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’

ನಟ ಯಶ್‌ ಭಾಷಣ ಆರಂಭಿಸುತ್ತಿದ್ದಂತೆಯೇ ಅಭಿಮಾನಿಗಳು ರಾಜಾಹುಲಿ, ರಾಜಾಹುಲಿ ಎಂದು ಕೂಗಿದರು. ಮಾತಿನ ಕೊನೆಯಲ್ಲಿ ಡೈಲಾಗ್‌, ಡೈಲಾಗ್‌ ಬೇಕೆಂದು ಅಭಿಮಾನಿಗಳು ಒತ್ತಾಯಿಸಿದಾಗ, ಯಶ್‌ ಅವರು ‘ಡೈಲಾಗ್‌ ಹೇಳುವ ಸಮಯ ಇದಲ್ಲ. ಬದಲಿಗೆ ಹಾಡು ಹೇಳುವೆ ಎಂದು, ಡಾ.ರಾಜ್‌ಕುಮಾರ್‌ ಅವರು ಅಭಿನಯಿಸಿದ ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’ ಗೀತೆಯನ್ನು ಹಾಡಿದರು.

ಬರ‍್ರೀ ನಮ್ಮ ಸಂಗಡ: ಚಂದ್ರಶೇಖರ ಪಾಟೀಲ

‘ಅಂದು ಚಳವಳಿಯಲ್ಲಿ ಭಾಗವಹಿಸಲು ಡಾ.ರಾಜ್‌ಕುಮಾರ್‌ ಅವರ‌ನ್ನು ಕೋರಿದ್ದೆವು. ಅವರು ನಮಗೆ ಬೆಂಬಲ ನೀಡಿ, ನಮ್ಮೊಂದಿಗೆ ಬಂದರು. ಜನರನ್ನು ಕರೆತರಲು ‘ಕನ್ನಡ ಕನ್ನಡ ಬರ‍್ರೀ ನಮ್ಮ ಸಂಗಡ...’ ಎಂದು ಕವನ ಬರೆದಿದ್ದೆ. ಘೋಷಣೆ ಕೂಗುತ್ತ, ಹಾಡುತ್ತ ಸಾಗಿದ್ದ ನೆನಪುಗಳು ಇಂದು ಮರುಕಳಿಸಿವೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಗೋಕಾಕ್‌ ಚಳವಳಿಯ ಸಮಯದಲ್ಲಿ ಡಾ.ರಾಜ್‌ಕುಮಾರ್‌ ಅವರ ಕುರಿತು ರಚಿಸಿದ ಕವನವನ್ನು ವಾಚಿಸಿ, ವರನಟನ ನಿಲುವು, ಅಂದಿನ ವಾತಾವರಣವನ್ನು ಎಳೆ ಎಳೆಯಾಗಿ ಬಿ‌ಚ್ಚಿಟ್ಟರು. 

ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ

ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ, ಹೋರಾಟಗಾರರ ಛಲವಂತಿಕೆ, ಶಿಕ್ಷಣ ಇಲಾಖೆಯ ಯೋಜನೆ, ಆರೋಗ್ಯ ಸಂಪಾದಿಸುವ ಮಾರ್ಗಗಳನ್ನು ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಾವರಣಗೊಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘63ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ’ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು.

ಬಾಗಲಗುಂಟೆ, ಮಂಜನಾಥನಗರದ 800 ಶಾಲಾ ವಿದ್ಯಾರ್ಥಿಗಳು ಕೆಂಪೇಗೌಡರ ಆಡಳಿತ ಕ್ರಮವನ್ನು ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು. ಚಿಕ್ಕಬಿದರಕಲ್ಲು ಶಾಲಾ ಮಕ್ಕಳು ಸರ್ಕಾರ ಜಾರಿ ಮಾಡಿರುವ ಉಚಿತ ಶಿಕ್ಷಣ, ಸಮವಸ್ತ್ರ, ಸೈಕಲ್‌, ಬಿಸಿಯೂಟ, ಕ್ಷೀರಭಾಗ್ಯ ಹಾಗೂ ವಸತಿ ಶಾಲೆಯಂತಹ ಯೋಜನೆಗಳನ್ನು ನೃತ್ಯ ರೂಪದಲ್ಲಿಯೇ ಪರಿಚಯಿಸಿದರು.

‘ಕರುನಾಡು ನಮ್ಮ ಗುಡಿ, ಕನ್ನಡ ನಮ್ಮ ನುಡಿ’ ಎಂಬ ಸಾಲುಗಳಿಗೆ ಹೆಜ್ಜೆ ಹಾಕಿದ ಇಂಡಿಯನ್‌ ಹೈಸ್ಕೂಲ್‌ ಮಕ್ಕಳು ಕವಿ, ಸಾಹಿತಿಗಳ ಕನ್ನಡ ಸೇವೆ ಸ್ಮರಿಸಿದರು. ಪೂರ್ಣಪ್ರಜ್ಞ ಶಾಲೆಯಿಂದ ಪ್ರದರ್ಶನಗೊಂಡ ರೂಪಕದಲ್ಲಿ ಹಳ್ಳಿಗಾಡಿನ ಉಡುಪುಗಳನ್ನು ಧರಿಸಿದ್ದ, ಹುಲಿ, ನವಿಲುಗಳ ವೇಷಧಾರಿಯಾಗಿದ್ದ ಮಕ್ಕಳು ರಾಜ್ಯದ ಜನಪದ ಸಂಸ್ಕೃತಿಯ ಝಲಕ್‌ ತೋರಿಸಿದರು.

‘ಮಾಡಬೇಕು ಯೋಗ, ತೊಡೆಯಬೇಕು ರೋಗ’ ಎಂಬ ಸುಶ್ರಾವ್ಯ ಪಂಕ್ತಿಗಳನ್ನು ಕೇಳುತ್ತಲೇ 2 ಸಾವಿರ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಹಾಕಿದರು. ಮರಿಯಂ ನಿಲಯ ಶಾಲೆ, ನ್ಯೂ ಫ್ಲಾರೆನ್ಸ್‌ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಏರೋಬಿಕ್ಸ್‌ ನೃತ್ಯ ಕೂಡ ಸಭಿಕರ ಚಿತ್ತ ಸೆಳೆಯಿತು. ಈ ಮೂಲಕ ದೈಹಿಕ ದೃಢತೆ, ಮಾನಸಿಕ ಏಕಾಗ್ರತೆಯ ಸಂದೇಶವನ್ನು ಮಕ್ಕಳು ಸಾರಿದರು. ವಿದ್ಯಾರ್ಥಿಗಳ ಪಥಸಂಚಲನ ಕೂಡ ಆಕರ್ಷಕವಾಗಿತ್ತು.

ಎಲ್ಲ ತಂಡಗಳ ನೃತ್ಯ ರೂಪಕಗಳನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವೀಕ್ಷಿಸಿ, ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಗಣ್ಯರಿಗೆ ಕನ್ನಡದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !