ಇಂದಿನಿಂದ ಕರಗ ಶಕ್ತ್ಯೋತ್ಸವ

ಶನಿವಾರ, ಏಪ್ರಿಲ್ 20, 2019
31 °C
19ರಂದು ರಾತ್ರಿ ನಡೆಯಲಿದೆ ಹೂವಿನ ಕರಗ * ಕರಗ ಹೊರಲಿದ್ದಾರೆ ಅರ್ಚಕ ಮನು

ಇಂದಿನಿಂದ ಕರಗ ಶಕ್ತ್ಯೋತ್ಸವ

Published:
Updated:

ಬೆಂಗಳೂರು: ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ಇದೇ 11ರಿಂದ 21ರವರೆಗೆ ಬೆಂಗಳೂರಿನ ಪ್ರಸಿದ್ಧ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಆರ್ಚಕ ಮನು ಅವರು ಈ ಬಾರಿ ಕರಗ ಶಕ್ತ್ಯೋತ್ಸವ ನಡೆಸಿಕೊಳ್ಳಲಿದ್ದಾರೆ. ಅವರು ಈಗಾಗಲೇ ಪೂಜಾ ವ್ರತದಲ್ಲಿ  ನಿರತರಾಗಿದ್ದಾರೆ. ವಿದೇಶಿಯರನ್ನೂ ಸೆಳೆದಿರುವ ಈ ಕರಗ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.

ಮೊದಲ ದಿನ ಹಳದಿ ಬಣ್ಣದ ಬಾವುಟವನ್ನು ಗುಡಿಯ ಅಂಗಳದೊಳಗೆ ಹಾರಿಸಲಾಗುತ್ತದೆ. ಆ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಣಾಚಾರಿಗಳು, ಗಂಟೆಪೂಜಾರಿಗಳು, ವೀರಕುಮಾರರು ಮತ್ತು ಕರಗವನ್ನು ಹೊರುವವರು, ಉತ್ಸವವನ್ನು ಯಾವ ತಡೆಯೂ ಇಲ್ಲದಂತೆ ನಡೆಸಲು ಪಣ ತೊಟ್ಟು ಕಂಕಣ ಕಟ್ಟಿಕೊಳ್ಳುತ್ತಾರೆ.

ಏ. 16ರಂದು ಆರತಿ ಉತ್ಸವ ನಡೆಯಲಿದ್ದು, 17ರಂದು ಸಂಪಂಗಿ ಕೆರೆ ಅಂಗಳದಲ್ಲಿ ಹಸಿ ಕರಗ ನಡೆಯಲಿದೆ. 19ರಂದು  ಹೂವಿನ ಕರಗ ಉತ್ಸವ ನಡೆಯಲಿದೆ. ಅಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಹೂವಿನ ಕರಗದ ದಿನ ಕಬ್ಬನ್‌ ಪಾರ್ಕ್‌ನ ಕರಗದ ಕುಂಟೆಯಲ್ಲಿ ಬೆಳಿಗ್ಗೆ ಗಂಗಾಪೂಜೆ ಮಾಡಿ ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಕರೆತರಲಾಗುತ್ತದೆ. ರಾತ್ರಿ 12.30ಕ್ಕೆ  ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಉತ್ಸವ ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ  ಮಾರ್ಗವಾಗಿ ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೆ.ಆರ್‌. ಮಾರುಕಟ್ಟೆ, ಆಕ್ಕಿಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆ, ಸುಣ್ಣಕಲ್‌ ಪೇಟೆಗಳಲ್ಲಿ ಸಂಚರಿಸಲಿದೆ.

ಕರಗ ಮಹೋತ್ಸವ ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬದಿಗೆಯವರಿಗೆ ನಡೆಯಲಿದೆ. ರಥೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಈ ಉತ್ಸವ ಚಾಲನೆ ಪಡೆಯುತ್ತದೆ. ದ್ವಾದಶಿಯಂದು ದೀಪಗಳ ಆರತಿ,  ತ್ರಯೋದಶಿಯಂದು ಹಸಿಕರಗ, ಚತುರ್ದಶಿಯಂದು ಪೊಂಗಲ್‌ ಸೇವೆ ನಡೆಯಲಿದೆ. ಚೈತ್ರ ಪೂರ್ಣಿಮೆಯಂದು ಕರಗ ಶಕ್ತ್ಯೋತ್ಸವ ಮತ್ತು  ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. 

ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವ ಗಾವು ಶಾಂತಿ ಮಾಡಲಾಗುವುದು. ಕೊನೆಯದಾಗಿ ಬಿದಿಗೆಯ ದಿನ ಹೆಂಗಳೆಯರು ತಮ್ಮ ಮನೆಗಳಿಂದ ಬಿಂದಿಗೆಗಳಲ್ಲಿ ನೀರು ತಂದು ಅರಿಶಿಣದ ನೀರಿನಿಂದ ಓಕುಳಿ ಆಡುವ ವಸಂತೋತ್ಸವ ನಡೆಯಲಿದೆ. ಉತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಎ.ರಾಜಗೋಪಾಲ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !